ADVERTISEMENT

ಮುರುಘಾ ಶರಣರ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಮಠದಲ್ಲಿ ಆತಂಕ, ಸರಣಿ ಸಭೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2022, 19:45 IST
Last Updated 27 ಆಗಸ್ಟ್ 2022, 19:45 IST
ಚಿತ್ರದುರ್ಗದ ಮುರುಘಾ ಮಠಕ್ಕೆ ಶನಿವಾರ ಭೇಟಿ ನೀಡಿದ ವಿವಿಧ ಮಠಾಧೀಶರು ಶಿವಮೂರ್ತಿ ಮುರುಘಾ ಶರಣರೊಂದಿಗೆ ಚರ್ಚಿಸಿ ಹೊರಬಂದರು. ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಸೇವಾಲಾಲ್‌ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಇದ್ದಾರೆ.
ಚಿತ್ರದುರ್ಗದ ಮುರುಘಾ ಮಠಕ್ಕೆ ಶನಿವಾರ ಭೇಟಿ ನೀಡಿದ ವಿವಿಧ ಮಠಾಧೀಶರು ಶಿವಮೂರ್ತಿ ಮುರುಘಾ ಶರಣರೊಂದಿಗೆ ಚರ್ಚಿಸಿ ಹೊರಬಂದರು. ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಸೇವಾಲಾಲ್‌ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಇದ್ದಾರೆ.   

ಚಿತ್ರದುರ್ಗ: ಜಾತಿ ಭೇದವಿಲ್ಲದೇ ಭಕ್ತಗಣ ಸಂಪಾದಿಸಿದ್ದ ಮುರುಘಾ ಮಠದಲ್ಲೀಗ ಆತಂಕ ಮಡುಗಟ್ಟಿದೆ. ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಹಿಂದೆಯೇ ಭಕ್ತಗಣದಲ್ಲಿ ಮಠವು ಚರ್ಚೆಯ ಕೇಂದ್ರವಾಗಿದೆ.

ಶರಣರ ವಿರುದ್ಧ ದೂರು ದಾಖಲಾದ ಹಿಂದೆಯೇ ಮಠದ ಸಲಹಾ ಸಮಿತಿ ಸದಸ್ಯರು, ಹಿತೈಷಿಗಳು, ವಕೀಲರು ಹಾಗೂ ಇತರ ಮಠಾಧೀಶರು ಶರಣರೊಂದಿಗೆ ಸುದೀರ್ಘವಾಗಿ ಚರ್ಚಿಸಿದರು. ಅಲ್ಲದೆ, ಸರಣಿ ಸಭೆಗಳನ್ನು ನಡೆಸಿದರು.

ಮುರುಘಾ ಮಠವು ಇಡೀ ದಿನ ಬಿರುಸಿನ ಚಟುವಟಿಕೆಗೆ ಸಾಕ್ಷಿಯಾಯಿತು. ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಮಠಕ್ಕೆ ಧಾವಿಸಿದರು. ಶರಣರಿಗೆ ಧೈರ್ಯ ತುಂಬಿದರು. ಕಾನೂನು ಹೋರಾಟದಲ್ಲಿ ಜೊತೆಗೆ ನಿಲ್ಲುವುದಾಗಿ ಭರವಸೆ ಮೂಡಿಸಿದರು. ಮಠದ ಆಡಳಿತಾಧಿಕಾರಿ ಎಸ್‌.ಕೆ.ಬಸವರಾಜನ್‌ ವಿರುದ್ಧ ಆಕ್ರೋಶ ಹೊರಹಾಕಿದರು.

ADVERTISEMENT

‘ಅನಿರೀಕ್ಷಿತವಾಗಿ ಆಪತ್ತು ಬಂದಿದೆ. ತಪ್ಪು ಮಾಡದ ನನಗೆ ಖಂಡಿತ ಭೀತಿ ಇಲ್ಲ. ಕಾನೂನಾತ್ಮಕವಾಗಿ ಆರೋಪ ಎದುರಿಸುತ್ತೇನೆ. ಆರೋಪಮುಕ್ತವಾಗಿ ಹೊರಗೆ ಬರುವ ವಿಶ್ವಾಸವಿದೆ ಎಂದು ಶಿವಮೂರ್ತಿ ಮುರುಘಾ ಶರಣರು ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು‘ ಎಂದು ಮೂಲಗಳು ಮಾಹಿತಿ ನೀಡಿವೆ.

ಬಂಧಿಸದಂತೆ ಭಕ್ತರ ಒತ್ತಡ: ಪ್ರಕರಣ ಸಂಬಂಧ ಮುರುಘಾ ಶರಣರನ್ನು ಬಂಧಿಸದಂತೆ ಸರ್ಕಾರ, ಪೊಲೀಸರ ಮೇಲೆ ಒತ್ತಡ ಸೃಷ್ಟಿಸುವ ಕುರಿತಂತೆ ಹಲವು ಭಕ್ತರು ಮಠದಲ್ಲಿ ನಡೆದ ಸರಣಿ ಸಭೆಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಮಠಕ್ಕೆ ನೂರಾರು ವರ್ಷಗಳ ಪರಂಪರೆ ಇದೆ. ಕಪ್ಪುಚುಕ್ಕೆ ಅಂಟಬಾರದು. ಆರೋಪ ಸಂಬಂಧಿಸಿ ಕೂಲಂಕಷವಾಗಿ ಪರಿಶೀಲನೆ, ತನಿಖೆ ನಡೆಯಬೇಕು. ಸತ್ಯಾಸತ್ಯತೆ ಪರಿಶೀಲಿಸದೇ ಕಾನೂನು ಕ್ರಮದ ದುಡುಕಿನ ನಿರ್ಧಾರ ಕೈಗೊಳ್ಳಬಾರದು. ಮಠಾಧೀಶರಿಗೆ ಸಂಬಂಧಿಸಿದ ವಿಚಾರವಾದರೂ ಪೊಲೀಸರು ಇಡುವ ಹೆಜ್ಜೆಗಳು ಭಕ್ತರಲ್ಲಿ ಇರುಸುಮುರುಸು ಉಂಟು ಮಾಡಬಾರದು’ ಎಂದು ಸಲಹಾ ಸಮಿತಿ ಸದಸ್ಯರೂ ಆಗಿರುವ ಜೆಡಿಎಸ್‌ ಮುಖಂಡ ಬಿ.ಕಾಂತರಾಜ ಒತ್ತಾಯಿಸಿದರು.

ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಕುಂಚಿಟಿಗ ಮಹಾಸಂಸ್ಥಾನ ಮಠದ ಶಾಂತವೀರ ಸ್ವಾಮೀಜಿ, ಬಂಜಾರ ಗುರುಪೀಠದ ಸೇವಾಲಾಲ್ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಛಲವಾದಿ ಗುರುಪೀಠದ ಬಸವ ನಾಗಿದೇವ ಸ್ವಾಮೀಜಿ, ಯಾದವ ಗುರುಪೀಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಮಡಿವಾಳ ಗುರುಪೀಠದ ಬಸವ ಮಡಿವಾಳ ಸ್ವಾಮೀಜಿ, ಕೇತೇಶ್ವರ ಸ್ವಾಮೀಜಿ, ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಇದ್ದರು.

ಮಠದ ಆಡಳಿತಾಧಿಕಾರಿ ವಿರುದ್ಧ ಆಕ್ರೋಶ

‘ಮುರುಘಾ ಶರಣರ ವಿರುದ್ಧದ ಆರೋಪ ಶುದ್ಧ ಸುಳ್ಳು. ಮಾನಸಿಕ ಕಿರುಕುಳ ನೀಡುವ ಉದ್ದೇಶದಿಂದ ಈ ಪ್ರಕರಣ ಹೆಣೆಯಲಾಗಿದೆ’ ಎಂದು ಮಠದ ಸಲಹಾ ಸಮಿತಿ ಸದಸ್ಯ ಎನ್.ಬಿ.ವಿಶ್ವನಾಥ್ ಹೇಳಿದರು.

ಸಲಹಾ ಸಮಿತಿ ಸಭೆಯ ಬಳಿಕ ಮಾತನಾಡಿದ ಅವರು, ‘ಈ ಆರೋಪ ಭಕ್ತರಿಗೆ ಆಘಾತ ತಂದಿದೆ. ದೂರಿನ ಹಿಂದೆ ಮುರುಘಾ ಮಠದ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಷಡ್ಯಂತ್ರ ಇದೆ. ಮಠಕ್ಕೆ ಮರಳಿದ ಅವರು ಪರಮಾಧಿಕಾರ ನಿರೀಕ್ಷೆ ಮಾಡಿದ್ದರು’ ಎಂದು ಆರೋಪಿಸಿದರು.

ಶರಣರು ಮುರುಘಾ ಮಠದ ಪೀಠಾಧ್ಯಕ್ಷರಾಗಿ ಎರಡೂವರೆ ದಶಕ ಕಳೆದಿದೆ. ಈವರೆಗೆ ಇಂತಹ ಯಾವುದೇ ಆರೋಪ ಕೇಳಿಬಂದಿಲ್ಲ. ಶ್ರೀಮಠದ ಪರಂಪರೆಗೆ ಧಕ್ಕೆಯಾಗಬಾರದು.

– ಎಂ. ಚಂದ್ರಪ್ಪ, ಶಾಸಕ, ಹೊಳಲ್ಕೆರೆ

ವ್ಯಕ್ತಿಯೊಬ್ಬರ ಅಧಿಕಾರ ದಾಹದಿಂದ ಈ ಬೆಳವಣಿಗೆ ಆಗಿದೆ. ಸಂಧಾನಕ್ಕೂ, ಸಂಘರ್ಷಕ್ಕೂ ಸಿದ್ಧ ಇದ್ದೇವೆ. ಗುರುಪರಂಪರೆಗೆ ದ್ರೋಹ ಬಗೆಯುವುದು ಅಕ್ಷಮ್ಯ

– ಮಹಾಂತ ರುದ್ರ ಸ್ವಾಮೀಜಿ, ಹೆಬ್ಬಾಳು ಶಾಖಾ ಮಠ, ದಾವಣಗೆರೆ

ಆರೋಪದ ಬಗ್ಗೆ ಸೂಕ್ತ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆಯಾಗಬೇಕು. ಹೆಣ್ಣುಮಕ್ಕಳಿಗೆ ಭದ್ರತೆ ಒದಗಿಸಬೇಕು

– ಜಿ.ಎಸ್‌.ಸೀಮಾ, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ, ಮೈಸೂರು ಜಿಲ್ಲಾ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.