ADVERTISEMENT

ಬಸವ ಸಾಹಿತ್ಯ ವಿಸ್ತರಣೆಗೆ ₹5 ಕೋಟಿ ಮೀಸಲು

ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ.ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 5:40 IST
Last Updated 16 ಜನವರಿ 2026, 5:40 IST
ಹೊಳಲ್ಕೆರೆಯಲ್ಲಿ ನಡೆದ ಸಿದ್ದರಾಮೇಶ್ವರ ಜಯಂತಿ ಸಮಾರೋಪ ಸಮಾರಂಭದಲ್ಲಿ ಸಚಿವ ಎಂ.ಬಿ.ಪಾಟೀಲ, ಸಂಸದ ಬಿ.ವೈ.ರಾಘವೇಂದ್ರ ಭಾಗವಹಿಸಿದ್ದರು 
ಹೊಳಲ್ಕೆರೆಯಲ್ಲಿ ನಡೆದ ಸಿದ್ದರಾಮೇಶ್ವರ ಜಯಂತಿ ಸಮಾರೋಪ ಸಮಾರಂಭದಲ್ಲಿ ಸಚಿವ ಎಂ.ಬಿ.ಪಾಟೀಲ, ಸಂಸದ ಬಿ.ವೈ.ರಾಘವೇಂದ್ರ ಭಾಗವಹಿಸಿದ್ದರು    

ಹೊಳಲ್ಕೆರೆ: ‘ಬಸವ ಸಾಹಿತ್ಯವನ್ನು ಜಾಗತಿಕ ಮಟ್ಟಕ್ಕೆ ಪಸರಿಸುವ ಉದ್ದೇಶ ಇದ್ದು, ಇದಕ್ಕೆ ವಿಜಯಪುರದ ಬಿಎಲ್‌ಡಿಇ ಸಂಸ್ಥೆಯಲ್ಲಿರುವ ವಚನ ಪಿತಾಮಹ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ₹5 ಕೋಟಿ ನಿಧಿ ಮೀಸಲಿಡಲಾಗಿದೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಪಟ್ಟಣದಲ್ಲಿ ಗುರುವಾರ ನಡೆದ ಸಿದ್ದರಾಮೇಶ್ವರ ಜಯಂತಿ ಸಮಾರೋಪ ಸಮಾರಂಭದಲ್ಲಿ ಲೇಖಕ ಎಸ್.ಕೆ.ಕೊಪ್ಪ ಬರೆದಿರುವ ‘ಸಮತಾ ಯೋಗಿ ಸಿದ್ದರಾಮ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ವಚನ ಸಾಹಿತ್ಯವನ್ನು ಜಗತ್ತಿನ ಪ್ರಮುಖ ಭಾಷೆಗಳಿಗೆ ಅನುವಾದಿಸಿ ಪ್ರಸಿದ್ಧ ವಿಶ್ವವಿದ್ಯಾಲಯಗಳಿಗೆ ತಲುಪಿಸಬೇಕಿದೆ. ಜಗತ್ತಿನ ಶ್ರೇಷ್ಠ ಚಿಂತಕರು, ಸಾಹಿತಿಗಳು, ವಿದ್ಯಾರ್ಥಿಗಳಿಗೆ ವಚನ ಸಾಹಿತ್ಯ, ಶರಣ ಸಾಹಿತ್ಯ, ಲಿಂಗಾಯತ ಧರ್ಮವನ್ನು ಅರ್ಥ ಮಾಡಿಸಬೇಕಿದೆ. ಇದಕ್ಕಾಗಿ ಯೋಜನೆ ರೂಪಿಸಿದ್ದು, ₹2 ಕೋಟಿ ಇದ್ದ ನಿಧಿಯನ್ನು ₹5 ಕೋಟಿಗೆ ಹೆಚ್ಚಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಕಾಯಕ ಯೋಗಿ ಸಿದ್ದರಾಮೇಶ್ವರರು ಕೆರೆ, ಕಟ್ಟೆಗಳನ್ನು ಕಟ್ಟಿಸುವ ಮೂಲಕ ರೈತರಿಗೆ ಬೆಳಕಾಗುವ ಜತೆಗೆ ವಚನ ಸಾಹಿತ್ಯದ ಉಳಿವಿಗೂ ಕೊಡುಗೆ ನೀಡಿದರು. ಕಿರಾಣಿ ಅಂಗಡಿ, ರಸ್ತೆ, ಕಸದ ಗುಂಡಿಗಳಲ್ಲಿ ಬಿದ್ದಿದ್ದ ವಚನಗಳನ್ನು ಸಂಗ್ರಹಿಸಿ ಮುಂದಿನ ಪೀಳಿಗೆಗೂ ದೊರೆಯುವಂತೆ ಮಾಡಿದರು’ ಎಂದು ಹೇಳಿದರು.

‘ಸರ್ಕಾರಗಳು ಈಗ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಆದರೆ 800 ವರ್ಷಗಳ ಹಿಂದೆಯೇ ಸಿದ್ದರಾಮೇಶ್ವರರು ಕೆರೆಗಳನ್ನು ನಿರ್ಮಿಸುವ ಮೂಲಕ ನೀರಾವರಿ ಕ್ರಾಂತಿಗೆ ಮುನ್ನುಡಿ ಬರೆದಿದ್ದರು. ನಾವು ಯುವಕರಿಗೆ ಶಕ್ತಿ ನೀಡಬೇಕಿದೆ. ನಾನು ಸಂಸದನಾದ ನಂತರ ಶಿವಮೊಗ್ಗ– ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ₹500 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಪಟ್ಟಣದ ರೈಲು ನಿಲ್ದಾಣದ ಸಮೀಪ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಚನ್ನಗಿರಿ, ಹೊಳಲ್ಕೆರೆಯಲ್ಲಿ ಬೈಪಾಸ್ ರಸ್ತೆ ನಿರ್ಮಿಸುವ ಉದ್ದೇಶ ಇದೆ’ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಯಳನಾಡು ಸಂಸ್ಥಾನದ ಜ್ಞಾನ ಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಮೈಸೂರಿನ ಬಸವ ಜ್ಞಾನ ಕೇಂದ್ರದ ಮಾತೆ ಬಸವಾಂಜಲಿ ದೇವಿ, ನಂದಿಗುಡಿಯ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಅರಸೀಕೆರೆಯ ಅಭಿನವ ಬಸವಲಿಂಗ ಸ್ವಾಮೀಜಿ ಮಾತನಾಡಿದರು.

ಧಾರವಾಡದ ಜಲ, ನೆಲ ನಿರ್ವಹಣೆ ಸಂಸ್ಥೆಯ ನಿವೃತ್ತ ನಿರ್ದೇಶಕ ರಾಜೇಂದ್ರ ಪೋದ್ದಾರ ಅವರು ‘ಕೃಷಿ ಆಧಾರಿತ ಉಪ ಕಸುಬುಗಳು’ ಕುರಿತು, ದಾವಣಗೆರೆಯ ಸುಮತಿ ಜಯಪ್ಪ ‘ವಚನ ಸಾಹಿತ್ಯದಲ್ಲಿ ಮಹಿಳೆಯರ ಪಾತ್ರ’ ಕುರಿತು ಉಪನ್ಯಾಸ ನೀಡಿದರು. ಶಾಸಕ ಎಂ.ಚಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ ಸಮಾರಂಭದ ಕುರಿತು ಸಮಿತಿಯವರಿಗೆ ಮಾರ್ಗದರ್ಶನ ನೀಡಿದರು.

ಕೆಪಿಸಿಸಿ ಉಪಾಧ್ಯಕ್ಷ ಎಚ್‌.ಆಂಜನೇಯ, ಮಾಜಿ ಶಾಸಕ ಹೊನ್ನಾಳಿ ಗಂಗಣ್ಣ, ಎಸ್.ಎಂ.ನಾಗರಾಜು, ನಿವೃತ್ತ ಐಪಿಎಸ್ ಅಧಿಕಾರಿ ಸಿದ್ದರಾಮಪ್ಪ, ಎಸ್.ಆರ್.ಪಾಟೀಲ್, ಪುರಸಭೆ ಮಾಜಿ ಉಪಾಧ್ಯಕ್ಷೆ ನಾಗರತ್ನಾ ವೇದಮೂರ್ತಿ, ಸ್ವಾಗತ ಸಮಿತಿ ಅಧ್ಯಕ್ಷ ಶಶಿಧರ, ಪ್ರಧಾನ ಕಾರ್ಯದರ್ಶಿ ಎ.ವಿ.ಶಿವರುದ್ರಪ್ಪ, ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಕುಬೇರಪ್ಪ, ಸಮಿತಿಯ ಪದಾಧಿಕಾರಿಗಳು ಇದ್ದರು.

ಸಮಾರಂಭದಲ್ಲಿ ಭಾಗವಹಿಸಿದ್ದ ಜನಸ್ತೋಮ 
ಸಿದ್ದರಾಮೇಶ್ವರರ ಜಯಂತಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಬರದೆ ವಂಚನೆ ಮಾಡಿದ್ದಾರೆ. ಇದು ಅವರು ನುಡಿದಂತೆ ನಡೆಯುತ್ತಿಲ್ಲ ಎನ್ನುವುದನ್ನು ತೋರುತ್ತದೆ 
ಸೇವಾಲಾಲ್ ಸ್ವಾಮೀಜಿ ಬಂಜಾರ ಗುರುಪೀಠ ಚಿತ್ರದುರ್ಗ
ಸಿದ್ದರಾಮೇಶ್ವರರ ಕಾಯಕ ತತ್ವವನ್ನು ಅನುಸರಿಸುತ್ತಿರುವ ನೊಳಂಬ ಲಿಂಗಾಯತ ಸಮಾಜಕ್ಕೆ ಜನಸಂಖ್ಯೆಗೆ ತಕ್ಕಂತೆ ರಾಜಕೀಯ ಸ್ಥಾನಮಾನ ನೀಡಬೇಕು 
ಎ.ವಿ.ಉಮಾಪತಿ ಮಾಜಿ ಶಾಸಕ

‘ಜಾತೀಯತೆ ಧರ್ಮಕ್ಕೆ ಮಾರಕ’

‘ಅಸ್ಪೃಶ್ಯತೆ ಮತ್ತು ಜಾತೀಯತೆಗಳು ಧರ್ಮದ ಉಳಿವಿಗೆ ಮಾರಕವಾಗಿವೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು. ‘ಸಮಾಜದಲ್ಲಿನ ಅಸ್ಪೃಶ್ಯತೆ ಜಾತೀಯತೆಯನ್ನು ತೊಲಗಿಸಲು ವಚನಕಾರರು 12ನೇ ಶತಮಾನದಲ್ಲೇ ಪ್ರಯತ್ನಿಸಿದ್ದರು.

ಆದರೆ ಆ ಪೀಡೆ ಇನ್ನೂ ನಮ್ಮಿಂದ ದೂರವಾಗಿಲ್ಲ. 1947ರಲ್ಲಿ ಧರ್ಮದ ಆಧಾರದಲ್ಲಿ ದೇಶವನ್ನು ವಿಂಗಡಿಸಲಾಯಿತು. ಆದರೆ ಅದನ್ನು ಒಪ್ಪಲು ಕೆಲವರು ಸಿದ್ಧರಿಲ್ಲ. ಹಿಂದೂಗಳು ಹಿಂದೂ ದೇವಾಲಯಗಳ ಮೇಲೆ ನೆರೆಯ ಬಾಂಗ್ಲಾ ದೇಶ ಪಾಕಿಸ್ತಾನದಲ್ಲಿ ದಾಳಿ ನಡೆಸಲಾಗುತ್ತಿದೆ. ನಾವು ಮಾತ್ರ ಜಾತ್ಯತೀತರು ಎಂದು ಹೇಳಿಕೊಂಡು ಓಡಾಡುತ್ತಿದ್ದೇವೆ. ಹೊರದೇಶದಲ್ಲಿನ ಹಿಂದೂಗಳ ಹತ್ಯೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ’ ಎಂದು ಹೇಳಿದರು. ‘ಚಿಕ್ಕಮಗಳೂರಿನಲ್ಲಿ ನಾನು ನಾಲ್ಕು ಬಾರಿ ಶಾಸಕನಾಗಲು ನೊಳಂಬ ಲಿಂಗಾಯತ ಸಮಾಜ ಕೈಜೋಡಿಸಿದೆ. ಮುಂದಿನ ವರ್ಷ ಸಿದ್ದರಾಮ ಜಯಂತಿಯನ್ನು ಚಿಕ್ಕಮಗಳೂರಿನಲ್ಲಿ ನಡೆಸಲು ಅವಕಾಶ ಕೊಡಬೇಕು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.