
ಹಿರಿಯೂರು: ಅಕ್ಷರದ ಅರಿವು ಮೂಡಿಸಿ ಬದುಕಿನ ನೆಲೆ ತೋರಿಸಿದ ಶಾಲೆಯ ಋಣವನ್ನು ತೀರಿಸಲು ಹಳೆಯ ವಿದ್ಯಾರ್ಥಿಗಳು ಒಟ್ಟುಗೂಡಿ ದೃಢ ನಿರ್ಧಾರ ತೆಗೆದುಕೊಂಡ ಪರಿಣಾಮ, ಖಾಸಗಿ ಸಂಸ್ಥೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಅಭಿವೃದ್ಧಿಗೊಂಡಿರುವ ತಾಲ್ಲೂಕಿನ ಹೊಸಯಳನಾಡು ಗ್ರಾಮದ ಕೆಪಿಎಸ್‌ನಲ್ಲಿ ಈಗ ವಾರ್ಷಿಕೋತ್ಸವ ಸಂಭ್ರಮ ಮನೆಮಾಡಿದೆ.
ಡಿ.27ರಂದು ಸಂಜೆ 5 ಗಂಟೆಗೆ ಶಾಲೆಯ ವಾರ್ಷಿಕೋತ್ಸವ ಹಮ್ಮಿಕೊಂಡಿದ್ದು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎನ್. ತಿಮ್ಮಶೆಟ್ರು ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಚಿತ್ರನಟ ರಮೇಶ್ ಅರವಿಂದ್ ಹಾಗೂ ಶಾಲೆಯ ಮಹಾಪೋಷಕ ನಾ. ತಿಪ್ಪೇಸ್ವಾಮಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
1963–64ರಲ್ಲಿ ಭೀಮನಬಂಡೆ ಗ್ರಾಮಾಂತರ ಪ್ರೌಢಶಾಲೆ ಹೆಸರಿನಲ್ಲಿ ಆರಂಭಗೊಂಡು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿರುವ ಶಾಲೆ ಪ್ರಸ್ತುತ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಪರಿವರ್ತನೆಗೊಂಡಿದೆ. ಸಿ. ತಿಮ್ಮಯ್ಯ, ಪಿ.ಟಿ. ಈಶ್ವರಪ್ಪ, ಸೀತಾರಾಮಯ್ಯ, ಕುನ್ನೇಗೌಡರು, ಮಂಗಮ್ಮ ಹಾಗೂ ಇತರರು ಶಾಲೆ ಆರಂಭಕ್ಕೆ ಮುನ್ನುಡಿ ಬರೆದರು. ಪ್ರೌಢಶಾಲೆ ವಿದ್ಯಾಭ್ಯಾಸಕ್ಕೆ ಹಿರಿಯೂರು ನಗರಕ್ಕೆ ಹೋಗಿರುವುದು ತಪ್ಪಿತು. 1983ರಲ್ಲಿ ಇದು ಪದವಿ ಪೂರ್ವ ಕಾಲೇಜಾಗಿ ಮೇಲ್ದರ್ಜೆಗೇರಿತು.
‘50 ವರ್ಷ ಹಳೆಯದಾಗಿದ್ದ ಕಾರಣ, ನೂತನ ಕಟ್ಟಡ ನಿರ್ಮಿಸಲು ನಿರ್ಧರಿಸಿ, ಹಳೆಯ ವಿದ್ಯಾರ್ಥಿಗಳ ಒಕ್ಕೂಟ ರಚಿಸಿಕೊಂಡು ಕಾರ್ಯಪ್ರವೃತ್ತರಾದೆವು. ಆರೇಳು ವರ್ಷದಲ್ಲಿ ನಾಲ್ಕು ಕೊಠಡಿಗಳಿದ್ದ ಜಾಗದಲ್ಲಿ 52 ಕೊಠಡಿಗಳಿರುವ ಕಟ್ಟಡ ತಲೆ ಎತ್ತಿನಿಂತಿತು’ ಎಂದು ಸಂಘದ ಮಹಾಪೋಷಕ ನಾ. ತಿಪ್ಪೇಸ್ವಾಮಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಕೆಪಿಎಸ್ ಪರಿಕಲ್ಪನೆಗೆ ನಾಂದಿ ಹಾಡಿದ ಶಾಲೆ
* ಎಲ್‌ಕೆಜಿಯಿಂದ ಪಿಯುವರೆಗೆ ತರಗತಿಗಳನ್ನು ಹೊಂದಿ ಕೆಪಿಎಸ್ ಪರಿಕಲ್ಪನೆಗೆ ನಾಂದಿ ಹಾಡಿದ ಮೊದಲ ಶಾಲೆ ಎಂಬ ಖ್ಯಾತಿ
* ರಾಜ್ಯದಲ್ಲಿ ಪ್ರಥಮ ಬಾರಿಗೆ ಪಿಯು ವಿದ್ಯಾರ್ಥಿಗಳಿಗೆ ಸ್ವಂತ ಖರ್ಚಿನಲ್ಲಿ ಬಿಸಿಯೂಟ ಆರಂಭಿಸಿದ ಕೀರ್ತಿ
* ಹಿರಿಯೂರು ಸುತ್ತಮುತ್ತಲ 20 ಹಳ್ಳಿಗಳ ಮಕ್ಕಳನ್ನು ಕರೆತರಲು ದಾನಿಗಳ ನೆರವಿನಿಂದ ಎರಡು ಬಸ್ ವ್ಯವಸ್ಥೆ
* ಎಲ್‌ಕೆಜಿ ಯುಕೆಜಿ ತರಗತಿಗಳಿಗೂ ಪ್ರಯೋಗಾಲಯ ಇರುವುದು ಇಲ್ಲಿನ ವಿಶೇಷ; ಶಾಲೆಗೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ
* ಮೂರು ಕಂಪ್ಯೂಟರ್ ಕೊಠಡಿ ಇ–ಗ್ರಂಥಾಲಯ ₹2 ಕೋಟಿ ವೆಚ್ಚದಲ್ಲಿ ಪ್ರೌಢ ಮತ್ತು ಪಿಯು ವಿಭಾಗಕ್ಕೆ ಪ್ರತ್ಯೇಕ ಪ್ರಯೋಗಾಲಯ ವಿಜ್ಞಾನ ಪಾರ್ಕ್ ವಿಜ್ಞಾನ ಪ್ರಯೋಗಾಲಯ ಜಿಮ್ ಕ್ರೀಡಾ ಕೊಠಡಿ
* ಆಡಳಿತ ಮಂಡಳಿ ಹಾಗೂ ಶಿಕ್ಷಕರು ಸಭೆ ನಡೆಸಲು ಸುಸಜ್ಜಿತ ಸಭಾಂಗಣ ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣ ಬಾಲಕ ಬಾಲಕಿಯರು ಸಿಬ್ಬಂದಿಗೆ ಸುಸಜ್ಜಿತ ಶೌಚಾಲಯ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ
* ಆವರಣದಲ್ಲಿನ ಕೊಳವೆ ಬಾವಿಗೆ ಜಲಮರುಪೂರಣ ವ್ಯವಸ್ಥೆ ಆವರಣದಲ್ಲಿ 800ಕ್ಕೂ ಸಸಿಗಳ ಆರೈಕೆಗೆ ಹನಿ ನೀರಾವರಿ ವ್ಯವಸ್ಥೆ
* ಮಹಾಪೋಷಕ ನಾ. ತಿಪ್ಪೇಸ್ವಾಮಿ ಅವರು ನಿವೃತ್ತಿಯಿಂದ ಬಂದ ಹಣದಲ್ಲಿ ತಮ್ಮ ತಂದೆ ಹಾಗೂ ತಾಯಿಯ ಸ್ಮರಣಾರ್ಥ ₹40 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ 150 ಆಸನ ಸಾಮರ್ಥ್ಯದ ‘ಪ್ರೇರಣ’ ಹೆಸರಿನ ಸಭಾಂಗಣ
* ಇನ್ಫೊಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಅವರು ನಿರ್ಮಿಸಿಕೊಟ್ಟಿರುವ ₹4.60 ಕೋಟಿ ವೆಚ್ಚದ 800 ಆಸನ ಸಾಮರ್ಥ್ಯದ ಸುಸಜ್ಜಿತ ‘ಸುಜ್ಞಾನ ಸದನ’ ಸಭಾಂಗಣ
* ಎನ್. ತಿಮ್ಮಶೆಟ್ಟಿ ನೇತೃತ್ವದ ಎಸ್‌ಡಿಎಂಸಿಯ ಕಾರ್ಯನಿರ್ಹಣೆಗೆ ಶಾಲಾ ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಎಸ್‌ಡಿಎಂಸಿ ಎಂಬ ಗೌರವ ₹1 ಲಕ್ಷ ನಗದು ಬಹುಮಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.