ADVERTISEMENT

‘ಅಮಾವಾಸ್ಯೆ ದಿನ ಜನಿಸಿದ 9 ಮಕ್ಕಳಿಗೆ ಉಚಿತ ಶಿಕ್ಷಣ’

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2019, 19:45 IST
Last Updated 28 ಸೆಪ್ಟೆಂಬರ್ 2019, 19:45 IST
ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿದ ಶಿವಮೂರ್ತಿ ಮುರುಘಾ ಶರಣರು ಹೆರಿಗೆಯಾದ ನಂತರದ ವಾರ್ಡ್‌ಗಳಲ್ಲಿ ಇದ್ದ ತಾಯಂದಿರಿಗೆ ಪೌಷ್ಟಿಕಾಂಶ ಆಹಾರದ ಬ್ಯಾಗ್‌ಗಳನ್ನು ವಿತರಿಸುತ್ತಿರುವುದು
ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿದ ಶಿವಮೂರ್ತಿ ಮುರುಘಾ ಶರಣರು ಹೆರಿಗೆಯಾದ ನಂತರದ ವಾರ್ಡ್‌ಗಳಲ್ಲಿ ಇದ್ದ ತಾಯಂದಿರಿಗೆ ಪೌಷ್ಟಿಕಾಂಶ ಆಹಾರದ ಬ್ಯಾಗ್‌ಗಳನ್ನು ವಿತರಿಸುತ್ತಿರುವುದು   

ಚಿತ್ರದುರ್ಗ: ‘ಜಿಲ್ಲಾ ಆಸ್ಪತ್ರೆಯಲ್ಲಿ ಮಹಾಲಯ ಅಮಾವಾಸ್ಯೆ ದಿನ ಜನಿಸಿದ ಐದು ಗಂಡು ಹಾಗೂ ನಾಲ್ಕು ಹೆಣ್ಣು ಮಕ್ಕಳಿಗೆ ಎಸ್‌ಜೆಎಂ ವಿದ್ಯಾಪೀಠದಿಂದ ಉಚಿತ ಶಿಕ್ಷಣ ನೀಡಲಾಗುವುದು’ ಎಂದು ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರು ಭರವಸೆ ನೀಡಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ಹೆರಿಗೆಯಾದ ಮಹಿಳೆಯರನ್ನು ಭೇಟಿ ಮಾಡಿ ಪೌಷ್ಟಿಕ ಆಹಾರದ ಬ್ಯಾಗ್‌ಗಳನ್ನು ವಿತರಿಸಿದ ನಂತರ ಅವರು ಮಾತನಾಡಿದರು.

‘ಅಮಾವಾಸ್ಯೆ ದಿನ ಜನಿಸಿದ ಮಕ್ಕಳು ಅಶುಭವಲ್ಲ; ಪೋಷಕರಿಗೆ ಅದು ಕೂಡ ಶುಭದ ಸಂಕೇತ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ದಿನದಂದು ಜನಿಸಿದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

ADVERTISEMENT

‘ಈ ಕಾರ್ಯಕ್ಕೆ ಇಲ್ಲಿ ಚಾಲನೆ ನೀಡಿದ್ದೇವೆ. ಆದರೆ, ಪ್ರತಿ ಬಾರಿಯ ಅಮಾವಾಸ್ಯೆಯ ದಿನ ಜನಿಸಿದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಿಲ್ಲ. ಬೇರೆಯವರಿಗೂ ಪ್ರೇರಣೆಯಾಗಿ ಅದನ್ನು ಮುಂದುವರಿಸಲಿ ಎಂಬ ಉದ್ದೇಶ ಹೊಂದಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಅಮಾವಾಸ್ಯೆ ಹಾಗೂ ಹುಣ್ಣಿಮೆ ನಿಸರ್ಗದತ್ತವಾಗಿ ಬಂದಿವೆ. ಆದರೆ, ಇವೆರಡೂ ಅಶುಭ ಎಂಬ ಮೌಢ್ಯ ಈಗಲೂ ಅನೇಕರಲ್ಲಿ ಬೇರೂರಿದೆ. ಅದನ್ನು ಜನರ ಮನಸ್ಸಿನಿಂದ ಕಿತ್ತು ಹಾಕಲಿಕ್ಕಾಗಿ ಮುರುಘಾ ಮಠದಲ್ಲಿ ಅಮಾವಾಸ್ಯೆ ದಿನ ಸಾಮೂಹಿಕ ಕಲ್ಯಾಣದಂಥ ಶುಭ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದೇವೆ. ಈಗ ಜನಿಸಿದ ಮಕ್ಕಳಿಗೆ ಆಶೀರ್ವದಿಸಿ, ತಾಯಂದಿರಿಗೆ ಸ್ಫೂರ್ತಿ ತುಂಬಲು ಆಸ್ಪತ್ರೆಗೆ ಭೇಟಿ ನೀಡಿದ್ದೇನೆ’ ಎಂದು ಹೇಳಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಫಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಬಸವರಾಜಪ್ಪ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.