
ಚಿತ್ರದುರ್ಗ: ‘12ನೇ ಶತಮಾನದ ವಚನ ಚಳವಳಿ ಸಮಾಜದ ಮೇಲೆ ಬೀರಿದ ಪ್ರಭಾವ ಅನನ್ಯವಾದುದು. ಶರಣರು ಅನುಭವ ಮಂಟಪದ ಮೂಲಕ ತಮ್ಮೊಳಗಿನ ಬೆಳಕನ್ನು ಕಂಡುಕೊಂದು ಜನಸಾಮಾನ್ಯರಿಗೂ ಬೆಳಕಾದರು’ ಎಂದು ಸಾಹಿತಿ ಗೀತಾ ಭರಮಸಾಗರ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಗಂಗಾಭಿಕ ಬೆಸ್ತರ ಸಂಘದ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಉಪನ್ಯಾಸ ನೀಡಿದ ಅವರು, ‘ಶಿವಶರಣ ಅಂಬಿಗರ ಚೌಡಯ್ಯ ತಮ್ಮ ತೀಕ್ಷ್ಣ ವಚನಗಳಿಂದ ವಚನಕ್ರಾಂತಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು’ ಎಂದು ತಿಳಿಸಿದರು.
‘ನ್ಯಾಯನಿಷ್ಠುರವಾದಿಯಾಗಿದ್ದ ಚೌಡಯ್ಯ, ಸಮಾಜದಲ್ಲಿದ್ದ ಜಾತಿ ಪದ್ಧತಿ, ಮೌಢ್ಯ, ಅನ್ಯಾಯಗಳನ್ನು ವಚನಗಳ ಮೂಲಕ ಕಟುವಾಗಿ ಟೀಕಿಸುತ್ತಿದ್ದರು. ಮನೋದಾಸ್ಯದ ವಿರುದ್ಧ ನಿಸ್ವಾರ್ಥ ರೀತಿಯಲ್ಲಿ ಹೋರಾಡಿ ವಿಶ್ವಮಾನವ ಸಂದೇಶ ಬಿತ್ತಿದರು’ ಎಂದರು.
‘ಸರ್ವಜ್ಞರ ವಚನಗಳನ್ನು ಸಿಡಿಲ ನುಡಿ ಎಂದು ಕರೆದರೆ, ಚೌಡಯ್ಯನವರ ವಚನಗಳನ್ನು ಛಡಿ ಏಟಿನ ನುಡಿ ಎಂದು ಬಣ್ಣಿಸಲಾಗಿದೆ. ಶೋಷಿತ ಸಮುದಾಯಗಳ ಆಶಯಗಳನ್ನು ಎತ್ತಿಹಿಡಿದು, ಸಮಾನತೆಯ ತತ್ವ ಸಾರುವ ಮೂಲಕ ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದ್ದಾರೆ’ ಎಂದು ಹೇಳಿದರು.
‘ಅಂಬಿಗರ ಚೌಡಯ್ಯನವರು ಸೇರಿದಂತೆ ಎಲ್ಲ ಶರಣರು ವಚನ ಸಾಹಿತ್ಯವನ್ನು ಉಳಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಜಗತ್ತಿನಲ್ಲಿ ಎಲ್ಲವೂ ನಶ್ವರವಾಗಿದ್ದು, ಸತ್ಯ ಮಾತ್ರ ಉಳಿಯುವಂತದ್ದು. ಸತ್ಯಂ, ಶಿವಂ, ಸುಂದರಂ ತತ್ವದಂತೆ ಸತ್ಯವೇ ದೇವರಿಗೆ ಪ್ರಿಯವಾದದ್ದು. ಪ್ರತಿಯೊಂದು ಸಮುದಾಯದಿಂದ ಬಂದ ಶರಣರು ಅಂದು ಒಂದಾಗಿ ಸತ್ಯಕ್ಕಾಗಿ ಹೋರಾಡಿದ್ದು, ಇಂದಿನ ಸಮಾಜಕ್ಕೆ ಮಾದರಿಯಾಗಿದೆ’ ಎಂದು ಉಪವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ ತಿಳಿಸಿದರು.
‘ಸಮುದಾಯವು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ತೀರಾ ಹಿಂದುಳಿದಿದೆ. ಈ ಹಿನ್ನಲೆಯಲ್ಲಿ ಮೀನುಗಾರಿಕೆ ಹರಾಜು ಪ್ರಕ್ರಿಯೆಯಲ್ಲಿ ಸಮುದಾಯಕ್ಕೆ ಆದ್ಯತೆ ನೀಡಿ, ಕುಲಕಸುಬುಗಳಿಗೆ ಒತ್ತು ನೀಡಬೇಕು’ ಎಂದು ಮುಖಂಡ ಚಂದ್ರಣ್ಣ ಮನವಿ ಮಾಡಿದರು.
ನಗರದಲ್ಲಿ ಅಂಬಿಗರ ಚೌಡಯ್ಯ ಸ್ಮಾರಕ ನಿರ್ಮಿಸಲು ಭೂಮಿ ಮಂಜೂರಾತಿ ಮಾಡಬೇಕು. ಜತೆಗೆ ಕುಲಕಸುಬಗಳಾದ ಮೀನುಗಾರಿಕೆ ಹಾಗೂ ಸುಣ್ಣ ಸುಡಲು ಸೂಕ್ತ ಸ್ಥಳಾವಕಾಶ ಕಲ್ಪಿಸುವಂತೆ ಗಂಗಾಭಿಕ ಬೆಸ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಡಿ.ರಂಗಯ್ಯ ಕೋರಿದರು.
ತಹಶೀಲ್ದಾರ್ ಬಿ.ಎಂ.ಗೋವಿಂದರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್, ಗಂಗಾಭಿಕ ಬೆಸ್ತರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಪಿ.ಶ್ರೀನಿವಾಸ್, ಉಪಾಧ್ಯಕ್ಷ ಕೃಷ್ಣಮೂರ್ತಿ, ಖಜಾಂಚಿ ರಂಗನಾಥ್, ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಇದ್ದರು.
12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಕ್ರಾಂತಿಯು ಕೇವಲ ಅಧಿಕಾರ ಅಥವಾ ಹಣಕೋಸ್ಕರ ನಡೆದಿದ್ದಲ್ಲ. ಅದು ಸತ್ಯವನ್ನು ಉಳಿಸುವುದಕ್ಕಾಗಿ ನಡೆದ ಮಹಾನ್ ಚಳುವಳಿ.ಮಹೆಬೂಬ್ ಜಿಲಾನಿ ಖುರೇಷಿ ಉಪವಿಭಾಗಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.