
ಧರ್ಮಪುರ: ಸಮೀಪದ ಸಮುದ್ರದಹಳ್ಳಿಯಲ್ಲಿ ಅಂಗನವಾಡಿ ಕೊಠಡಿ ಇಲ್ಲದೆ ಮಕ್ಕಳು ಶೀಟ್‌ನಡಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ತಲೆದೋರಿದೆ. ನೂತನ ಕಟ್ಟಡ ಕಾಮಗಾರಿ ನನೆಗುದಿಗೆ ಬಿದ್ದಿದ್ದು ಮಕ್ಕಳಿಗೆ ಕಟ್ಟಡ ಭಾಗ್ಯವಿಲ್ಲವಾಗಿದೆ.
ಈ ಹಿಂದೆ ಇದ್ದ ಕೊಠಡಿ ಶಿಥಿಲವಾಗಿದೆ ಎಂದು 2012ರಲ್ಲಿ ಗ್ರಾಮ ಪಂಚಾಯಿತಿಯವರು ಅದನ್ನು ನೆಲಸಮಗೊಳಿಸಿದರು. ನಂತರ ಅಂಗನವಾಡಿ ಕೇಂದ್ರವು ಖಾಸಗಿಯವರ ಮನೆಯಲ್ಲಿ ಬಾಡಿಗೆ ಆಧಾರದ ಮೇಲೆ 2016ರವರೆಗೂ ನಡೆಯಿತು. ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಯೋಜನೆ ಅಡಿ ಕೊಠಡಿ ನಿರ್ಮಾಣಕ್ಕೆ 2016ರಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು. ಆದರೆ, ಕಟ್ಟಡ ಕಾಮಗಾರಿ ಪೂರ್ಣವಾಗದೇ ನನೆಗುದಿಗೆ ಬಿದ್ದಿದೆ.
ಅಪೂರ್ಣ ಕಟ್ಟಡ ಮಳೆಗಾಳಿಗೆ ಸಿಕ್ಕಿ ಶಿಥಿಲಾವಸ್ಥೆ ತಲುಪಿದೆ. 9 ವರ್ಷಗಳಿಂದಲೂ ಕೊಠಡಿ ನಿರ್ಮಾಣವಾಗದೇ ಮಕ್ಕಳು ಬಯಲಿನಲ್ಲಿ ಕುಳಿತು ಪಾಠ ಕೇಳಬೇಕಾಗಿದೆ.
ಪ್ರಾಥಮಿಕ ಶಾಲಾ ಆವರಣ:
ಕಟ್ಟಡ ಪೂರ್ಣವಾಗದ ಕಾರಣ ಅಂಗನವಾಡಿ ಕೇಂದ್ರವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣಕ್ಕೆ ಸ್ಥಳಾಂತರಿಸಿ ಹಳೇ ಅಡುಗೆ ಕೋಣೆಯಲ್ಲಿ ತರಗತಿ ನಡೆಸಲಾಗುತ್ತಿತ್ತು. ಅಡುಗೆ ಕೋಣೆಯಲ್ಲಿ ಸಿಲಿಂಡರ್ ಮತ್ತು ಆಹಾರ ದಾಸ್ತಾನು ಇರುವುದು ಅಪಾಯಕಾರಿಯಾಗಿತ್ತು. ಈ ಕಾರಣಕ್ಕೆ ಹೊರಗಡೆ ಶೀಟ್ ಶೆಡ್‌ನ ಕೆಳಗೆ ಮಕ್ಕಳನ್ನು ಕುಳ್ಳರಿಸಲಾಗುತ್ತಿದೆ.
ಇದರ ಪಕ್ಕದಲ್ಲಿಯೇ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶೌಚಾಲಯ ಇದೆ. ಅದು ದುರ್ವಾಸನೆ ಬೀರುತ್ತಿದೆ. ಈ ಕಾರಣಕ್ಕೆ ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಅಂಗನವಾಡಿಗೆ ಬರುವ ಮಕ್ಕಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಅಧಿಕಾರಿಗಳು ಇತ್ತ ಗಮನ ಹರಿಸಿ ಕಟ್ಟಡ ಕಾಮಗಾರಿಯನ್ನು ಬೇಗ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
‘ಹೆಚ್ಚುವರಿ ಅನುದಾನ ಬಳಸಿ ನಿರ್ಮಾಣ’ ‘ನರೇಗಾ ಯೋಜನೆ ಅಡಿ ಕೈಗೊಂಡ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ 9 ವರ್ಷಗಳಿಂದಲೂ ಪೂರ್ಣವಾಗಿಲ್ಲ. ಕಾಮಗಾರಿ ಪೂರ್ಣಗೊಳಿಸುವಂತೆ 2022ರಿಂದಲೂ ಗ್ರಾಮ ಪಂಚಾಯಿತಿ ಗಮನಕ್ಕೆ ಅನೇಕ ಬಾರಿ ತಂದಿದ್ದರೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ತಾಲ್ಲೂಕು ಪಂಚಾಯಿತಿ ಮತ್ತು ಶಾಸಕರ ಹೆಚ್ಚುವರಿ ಅನುದಾನ ಬಳಸಿಕೊಂಡು ಅಂಗನವಾಡಿ ಕಟ್ಟಡವನ್ನು ಪೂರ್ಣಗೊಳಿಸಲಾಗುವುದು’ ಎಂದು ಶಿಶು ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.