ADVERTISEMENT

ಕರ್ನಾಟಕದಲ್ಲಿ ಜನಿಸಿದ ದಾಖಲೆ ಒದಗಿಸಿ

ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ಗೆ ಮಾಜಿ ಸಚಿವ ಆಂಜನೇಯ ಸವಾಲು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 16:17 IST
Last Updated 25 ಸೆಪ್ಟೆಂಬರ್ 2020, 16:17 IST
ಎಚ್.ಆಂಜನೇಯ
ಎಚ್.ಆಂಜನೇಯ   

ಚಿತ್ರದುರ್ಗ: ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಅವರು ಕರ್ನಾಟಕದಲ್ಲಿ ಜನಿಸಿದ್ದರೆ ದಾಖಲೆ ಒದಗಿಸಲಿ ಎಂದು ಮಾಜಿ ಸಚಿವ ಎಚ್‌.ಆಂಜನೇಯ ಸವಾಲು ಹಾಕಿದ್ದಾರೆ.

ಮಹಾರಾಷ್ಟ್ರದಿಂದ ವಲಸೆ ಬಂದಿರುವ ಪ್ರಭು ಚವ್ಹಾಣ್‌ ಚರಿತ್ರೆ ಔರಾದ್‌ ಕ್ಷೇತ್ರದ ಜನರಿಗೆ ಗೊತ್ತಿದೆ. ಸಚಿವರ ತಂದೆ–ತಾಯಿ ಮೂಲತಃ ಮಹಾರಾಷ್ಟ್ರದವರು. ಸಚಿವರ ಮಕ್ಕಳ ವಿದ್ಯಭ್ಯಾಸ ಕೂಡ ಕರ್ನಾಟಕದಲ್ಲಿ ನಡೆದಿಲ್ಲ. ಸತ್ಯವನ್ನು ಸಾಭೀತುಪಡಿಸಲು ಸಚಿವರು ದಾಖಲೆಗಳನ್ನು ಬಹಿರಂಗಪಡಿಸಲಿ ಎಂದು ತಿರುಗೇಟು ನೀಡಿದ್ದಾರೆ.

‘ಮಹಾರಾಷ್ಟ್ರದಲ್ಲಿ ಬಂಜಾರ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರಿದೆ. ಔರಾದ್ ಮೀಸಲು ಕ್ಷೇತ್ರವಾದ ಬಳಿಕ ಚವ್ಹಾಣ್‌ ಕರ್ನಾಟಕಕ್ಕೆ ಬಂದಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇದು ಅಪ್ರಜಾತಾಂತ್ರಿಕ ನಡೆಯಾಗಿದ್ದು, ತನಿಖೆಯಾಗುವ ಅಗತ್ಯವಿದೆ. ಕೂಡಲೇ ಇವರನ್ನು ಸಚಿವ ಸಂಪುಟದಿಂದ ಕೈಬಿಟ್ಟು ಕರ್ನಾಟಕದ ಲಂಬಾಣಿ ಸಮುದಾಯದವರಿಗೆ ಸಚಿವ ಸ್ಥಾನ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

‘ನಾನು ಬಸವಣ್ಣನ ಅನುಯಾಯಿ ಆಗಿದ್ದು, ಸರ್ವ ಜಾತಿಯನ್ನು ಸಮಾನವಾಗಿ ಕಾಣುವ ಸಂವಿಧಾನದ ಪರಿಪಾಲಕ. ಯಾವುದೇ ಜಾತಿಯನ್ನು ವಿರೋಧಿಸಿಲ್ಲ. ಸಮಾಜ ಕಲ್ಯಾಣ ಸಚಿವರಾಗಿದ್ದ ಅವಧಿಯಲ್ಲಿಯೇ ಚವ್ಹಾಣ್‌ ಅವರ ಜಾತಿ ಪ್ರಮಾಣ ಪತ್ರದ ದೂರು ದಾಖಲಾಗಿತ್ತು. ತನಿಖೆ ನಡೆಸಿದ ನಾಗರಿಕ ಹಕ್ಕು ಜಾರಿ ನಿರ್ದೇಶನಾಯಲು 240 ಪುಟಗಳ ವರದಿ ಸಲ್ಲಿಸಿದೆ. ಈ ವರದಿಯಲ್ಲಿ ಸತ್ಯ ಅಡಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಸುಳ್ಳು ಜಾತಿ ಪ್ರಮಾಣ ಪತ್ರದ ಬಗ್ಗೆ ದೂರು ನೀಡಿದವರ ಮೇಲೆ ಪ್ರಭಾವ ಬೀರುವ ಶಕ್ತಿ ಸಚಿವರಿಗಿದೆ. ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಕೆಯಾಗಿದ್ದ ದೂರು ತನಿಖೆಯ ಹಂತದಲ್ಲಿರುವಾಗಲೇ ಹಿಂಪಡೆಯಲಾಗಿದೆ. ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಸರ್ಕಾರ ಅಥವಾ ಹೈಕೋರ್ಟ್‌ ಸಮರ್ಥನೆ ಮಾಡಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.