ADVERTISEMENT

ಎಪಿಎಂಸಿ ವಸತಿಗೃಹಗಳು ಅನಾಥ

ಕುಸಿದು ಬೀಳುವ ಮೊದಲು ಬಳಕೆಗೆ ಸಾರ್ವಜನಿಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 3:49 IST
Last Updated 1 ಆಗಸ್ಟ್ 2021, 3:49 IST
ಹಿರಿಯೂರಿನ ಎಪಿಎಂಸಿ ಆವರಣದಲ್ಲಿ ಎಪಿಎಂಸಿ ಸಿಬ್ಬಂದಿಗಾಗಿ ನಿರ್ಮಿಸಿದ್ದ ವಸತಿಗೃಹಗಳು ಶಿಥಿಲಗೊಂಡಿರುವುದು.
ಹಿರಿಯೂರಿನ ಎಪಿಎಂಸಿ ಆವರಣದಲ್ಲಿ ಎಪಿಎಂಸಿ ಸಿಬ್ಬಂದಿಗಾಗಿ ನಿರ್ಮಿಸಿದ್ದ ವಸತಿಗೃಹಗಳು ಶಿಥಿಲಗೊಂಡಿರುವುದು.   

ಹಿರಿಯೂರು: ನಗರದ ಕೃಷಿ ಮಾರುಕಟ್ಟೆ ಸಮಿತಿ ಆವರಣದಲ್ಲಿ (ಎಪಿಎಂಸಿ) ನಿರ್ಮಿಸಿರುವ ಸಿಬ್ಬಂದಿ ವಸತಿ ಗೃಹಗಳು ನಿಗದಿತ ಉದ್ದೇಶಕ್ಕೆ ಬಳಸದ ಕಾರಣ ಅನಾಥವಾಗಿದ್ದು, ಕಟ್ಟಡಗಳು ಕುಸಿದು ಬೀಳುವ ಮೊದಲು ಸಿಬ್ಬಂದಿ ವಾಸಕ್ಕೆ ಬಿಟ್ಟುಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

1998ರಲ್ಲಿ ಅರಣ್ಯ ಸಚಿವರಾಗಿದ್ದ ದಿ.ಡಿ. ಮಂಜುನಾಥ್, ಗೃಹಮಂಡಳಿ ಅಧ್ಯಕ್ಷರಾಗಿದ್ದ ಹಾಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರಿಂದ ಶಂಕುಸ್ಥಾಪನೆ ಮಾಡಿದ ಎರಡು ವಸತಿ ಗೃಹಗಳು ಮರುವರ್ಷವೇ ನಿರ್ಮಾಣಗೊಂಡಿದ್ದವು. ಆರಂಭದಲ್ಲಿ ಎರಡು ವರ್ಷ ಮಾತ್ರ ವಸತಿ ಗೃಹಗಳನ್ನು ವಾಸಕ್ಕೆ ಬಳಸಲಾಗಿತ್ತು. 20 ವರ್ಷಗಳಿಂದ ಬಳಸದ ಕಾರಣ ಗೃಹಗಳು ಶಿಥಿಲಗೊಂಡಿದ್ದರೂ 2014ರಲ್ಲಿ ಮತ್ತೆ ಎರಡು ವಸತಿ ಗೃಹಗಳನ್ನು ₹ 15 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರಸ್ತುತ ನಾಲ್ಕೂ ಗೃಹಗಳು ವಾಸಿಸುವವರಿಲ್ಲದೇ ಮುಳ್ಳುಕಂಟಿ ಬೆಳೆದು, ಕಿಟಕಿ–ಬಾಗಿಲು, ಗೇಟ್‌ಗಳೆಲ್ಲ ಹಾಳಾಗಿ, ಅನೈತಿಕ ಚಟುವಟಿಕೆಗಳ ತಾಣಗಳಾಗಿವೆ.

ವಸತಿ ಗೃಹಗಳಿಗೆ ನೀರು, ವಿದ್ಯುತ್, ರಸ್ತೆ ಒಳಗೊಂಡಂತೆ ಎಲ್ಲ ಸೌಕರ್ಯ ಕಲ್ಪಿಸಲಾಗಿದೆ. ಎಪಿಎಂಸಿ ಸಿಬ್ಬಂದಿ ವಾಸವಿದ್ದಿದ್ದರೆ ಇನ್ನೂ ಹತ್ತಾರು ವರ್ಷ ಈ ಕಟ್ಟಡಗಳು ಗಟ್ಟಿಮುಟ್ಟಾಗಿ ಇರುತ್ತಿದ್ದವು. ವಿಚಿತ್ರವೆಂದರೆ ಹಿರಿಯೂರಿನ ಎಪಿಎಂಸಿ ಮಾರುಕಟ್ಟೆ ಪೂರ್ಣಕಾಲಿಕ ಮಾರುಕಟ್ಟೆಯಲ್ಲ. ವರ್ಷದಲ್ಲಿ ಮೂರ್ನಾಲ್ಕು ತಿಂಗಳು ಮಾತ್ರ ನಡೆಯುತ್ತದೆ. ಕೃಷಿ ಮಾರುಕಟ್ಟೆ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳ ಸಂಖ್ಯೆ 13 ಇದ್ದು, ಪ್ರಸ್ತುತ ಕೇವಲ ಮೂವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇರುವ ಮೂವರಲ್ಲಿ ನಾಲ್ಕು ವಸತಿ ಗೃಹಗಳಿಗೆ ಹೋಗುವವರು ಯಾರು? ಎಂದು ಸಿಬ್ಬಂದಿಯೊಬ್ಬರು ಪ್ರಶ್ನೆ ಮಾಡುತ್ತಾರೆ.

ADVERTISEMENT

ಸ್ವಂತ ಮನೆಗಳಿವೆ: ‘1998ರಲ್ಲಿ ನಿರ್ಮಾಣಗೊಂಡಿರುವ ವಸತಿ ಗೃಹಗಳನ್ನು ಕೆಲವು ವರ್ಷ ಮಾತ್ರ ಬಳಸಲಾಗಿತ್ತು. ಹಾಲಿ ಇರುವ ಮೂವರು ಸಿಬ್ಬಂದಿಗೂ ಸ್ವಂತ ಮನೆಗಳಿರುವ ಕಾರಣ ಗೃಹಗಳು ಖಾಲಿ ಇವೆ. ಬೇರೆ ಇಲಾಖೆಗಳ ಯಾರಾದರೂ ಸರ್ಕಾರಿ ಅಧಿಕಾರಿಗಳು ಬಂದಲ್ಲಿ ದುರಸ್ತಿ ಮಾಡಿಸಿ ಕೊಡುತ್ತೇವೆ. ಒಮ್ಮೆ ಅಬಕಾರಿ ಇಲಾಖೆಯವರು ಬಾಡಿಗೆಗೆ ಕೇಳಿ ನಂತರ ಸುಮ್ಮನಾದರು’ ಎನುತ್ತಾರೆ ಪ್ರಭಾರ ಕಾರ್ಯದರ್ಶಿ ತಿಪ್ಪೇಸ್ವಾಮಿ.

ಅನೈತಿಕ ಚಟುವಟಿಕೆ: ವಸತಿ ಗೃಹಗಳು ಖಾಲಿ ಇರುವ ಕಾರಣ ಸಂಜೆಯಾದಾಕ್ಷಣ ಕುಡಿತ ಮತ್ತಿತರ ಅನೈತಿಕ ಚಟುವಟಿಕೆಗಳು ಆರಂಭವಾಗುತ್ತವೆ. ಅಕ್ಕಪಕ್ಕದ ಮನೆಯವರು ತೀವ್ರ ಕಿರಿಕಿರಿ ಅನುಭವಿಸುತ್ತಿದ್ದಾರೆ. ಹಳೆಯ ವಸತಿ ಗೃಹಗಳ ಕಿಟಕಿಗಳು ಹಾಳಾಗಿವೆ. ಕಾಂಪೌಂಡ್ ಬಿದ್ದು ಹೋಗಿದೆ. ಗೇಟ್ ಗಳು ಕಣ್ಮರೆಯಾಗಿವೆ. ತಾಲ್ಲೂಕಿನಲ್ಲಿ ವಿವಿಧ ಇಲಾಖೆಗಳ ನೂರಾರು ಅಧಿಕಾರಿಗಳು ವರ್ಗಾವಣೆಗೊಂಡು ಬಂದಾಗ ಸರಿಯಾದ ಮನೆಗಳು ಸಿಗುತ್ತಿಲ್ಲ. ಹೀಗಾಗಿ ಎಪಿಎಂಸಿ ಆಡಳಿತ ಮಂಡಳಿ ತಕ್ಷಣ ವಸತಿ ಗೃಹಗಳನ್ನು ರಿಪೇರಿ ಮಾಡಿಸಿ, ಲೋಕೋಪಯೋಗಿ ಇಲಾಖೆಯ ಮೂಲಕ ಬಾಡಿಗೆ ನಿಗದಿ ಮಾಡಿಸಿ ಸರ್ಕಾರಿ ಅಧಿಕಾರಿಗಳಿಗೆ ಬಾಡಿಗೆ ಕೊಟ್ಟಲ್ಲಿ ಎಪಿಎಂಸಿಗೆ ಆದಾಯ ಬರುತ್ತದೆ. ಜೊತೆಗೆ ಸರ್ಕಾರದ ಆಸ್ತಿಯೂ ಉಳಿಯುತ್ತದೆ’ ಎಂದು ತಾಲ್ಲೂಕು ರೈತ ಸಂಘ ಮತ್ತು ಹಸಿರುಸೇನೆ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ
ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.