ADVERTISEMENT

ಬಿಜೆಪಿ ಅಭ್ಯರ್ಥಿ ಬೆಂಬಲಿಸಲು ಮನವಿ

ಬಂಡಾಯ ಅಭ್ಯರ್ಥಿ ವಿರುದ್ಧ ಕಾಡುಗೊಲ್ಲರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 4:10 IST
Last Updated 27 ಅಕ್ಟೋಬರ್ 2020, 4:10 IST
ಎ.ಮುರುಳಿ
ಎ.ಮುರುಳಿ   

ಚಿತ್ರದುರ್ಗ: ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದವರನ್ನು ಬಿಜೆಪಿ ಉಚ್ಚಾಟಿಸಿದ್ದು, ಎಂ.ಚಿದಾನಂದಗೌಡ ಅವರನ್ನು ಕಾಡುಗೊಲ್ಲ ಸಮುದಾಯ ಬೆಂಬಲಿಸುತ್ತಿದೆ ಎಂದು ಕಾಡುಗೊಲ್ಲ ಸಮುದಾಯದ ಬಿಜೆಪಿ ನಾಯಕರು ಸೋಮವಾರ ಘೋಷಣೆ ಮಾಡಿದರು.

‘ಚಿದಾನಂದಗೌಡ ಅವರು ಬಿಜೆಪಿಯ ಅಧಿಕೃತ ಅಭ್ಯರ್ಥಿ. ಪಕ್ಷದ ಒಳಿತಿಗಾಗಿ ಅವರ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಪಕ್ಷದ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿದ ಬಂಡಾಯಗಾರರನ್ನು ಪಕ್ಷ ಈಗಾಗಲೇ ಉಚ್ಚಾಟಿಸಿದೆ. ಅವರೊಂದಿಗೆ ತೆರಳಿದ ಸ್ಥಳೀಯ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಪಕ್ಷಕ್ಕೆ ಮರಳಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ವಿಧಾನಸಭಾ ಕ್ಷೇತ್ರವಾರು ಶಾಸಕರ ನೇತೃತ್ವದಲ್ಲಿ ಪ್ರಚಾರ ನಡೆಯುತ್ತಿದೆ. ಹಿರಿಯೂರು ಕ್ಷೇತ್ರದ ಶಾಸಕಿ ಕೆ.ಪೂರ್ಣಿಮಾ ಅವರ ನಡೆಯನ್ನು ಪಕ್ಷ ಗಮನಿಸುತ್ತಿದೆ. ಬಂಡಾಯ ಅಭ್ಯರ್ಥಿಗಳಿಗೆ ಪಕ್ಷದ ಬೆಂಬಲ ಇಲ್ಲ’ ಎಂದು ಬಂಡಾಯ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್‌ ಹೆಸರು ಉಲ್ಲೇಖಿಸದೇ ಮಾತನಾಡಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯ ಅಜ್ಜಪ್ಪ ಮಾತನಾಡಿ, ‘ಪರಿಶಿಷ್ಟ ಪಂಗಡ ಪಟ್ಟಿಗೆ ಸೇರುವ ಎಲ್ಲ ಅರ್ಹತೆಯನ್ನು ಕಾಡುಗೊಲ್ಲ ಸಮುದಾಯ ಹೊಂದಿದೆ. ಅಲೆಮಾರಿ ಹಾಗೂ ಅರೆ ಅಲೆಮಾರಿ ಲಕ್ಷಣಗಳಿರುವ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ ಅನ್ಯಾಯ ಮಾಡಲಾಗಿದೆ. ರಾಜ್ಯದಲ್ಲಿ 25 ಲಕ್ಷ ಕಾಡುಗೊಲ್ಲ ಜನಸಂಖ್ಯೆ ಇದೆ. ಪರಿಶಿಷ್ಟ ಪಂಗಡ ಪಟ್ಟಿಗೆ ಬಿಜೆಪಿ ಸೇರಿಸುವ ಭರವಸೆ ಇದೆ’ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ವೆಂಕಟೇಶ್‌ ಯಾದವ, ಎನ್‌.ಆರ್‌.ಲಕ್ಷ್ಮೀಕಾಂತ, ವಿಶ್ವನಾಥ್‌, ಆನಂದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.