ADVERTISEMENT

ಆರು ಸಾವಿರ ಪೊಲೀಸರ ನೇಮಕಾತಿ ಶೀಘ್ರ : ಗೃಹ ಸಚಿವ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 19:45 IST
Last Updated 10 ಡಿಸೆಂಬರ್ 2019, 19:45 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಚಿತ್ರದುರ್ಗ: ಪೊಲೀಸ್‌ ಇಲಾಖೆಯನ್ನು ಇನ್ನಷ್ಟು ಬಲಪಡಿಸಲು ಮುಂದಿನ ಎರಡು ವರ್ಷದಲ್ಲಿ ಆರು ಸಾವಿರ ಪೊಲೀಸ್‌ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸೀಬಾರದಲ್ಲಿರುವ ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಅವರ ಸಮಾಧಿಗೆ ಮಂಗಳವಾರ ಭೇಟಿ ನೀಡಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ಸಾವಿರ ಪಿಎಸ್‌ಐ ಹಾಗೂ ಐದು ಸಾವಿರ ಕಾನ್‌ಸ್ಟೆಬಲ್‌ಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. ಎರಡು ವರ್ಷದಲ್ಲಿ ಅವರು ಸೇವೆಗೆ ಲಭ್ಯವಾಗಲಿದ್ದಾರೆ. ಪೊಲೀಸ್‌ ಠಾಣೆಗೆ ಮೂಲ ಸೌಲಭ್ಯ ಒದಗಿಸಿ ಮೇಲ್ದರ್ಜೆಗೆ ಏರಿಸಲಾಗುವುದು. ಸಂವಹನ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆ ತರಲಾಗುವುದು. ಹೆದ್ದಾರಿ ಗಸ್ತು ನಡೆಸಲು 75 ವಾಹನಗಳು ರಸ್ತೆಗೆ ಇಳಿಯಲಿವೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಅಪರಾಧ ಕೃತ್ಯಗಳ ತನಿಖೆಯನ್ನು ಇನ್ನಷ್ಟು ತ್ವರಿತಗೊಳಿಸಲು ಜಿಲ್ಲಾ ಹಂತದ ವಿಧಿ ವಿಜ್ಞಾನ ಪ್ರಯೋಗಾಲಯಗಳನ್ನು (ಎಫ್‌ಎಸ್‌ಎಲ್‌) ಇನ್ನಷ್ಟು ಸಬಲಗೊಳಿಸಲು ನಿರ್ಧರಿಸಲಾಗಿದೆ. ಬೆಂಗಳೂರಿನಲ್ಲಿರುವ ರಾಜ್ಯ ಮಟ್ಟದ ಪ್ರಯೋಗಾಲಯದ ಮಾದರಿಯಲ್ಲೇ ಅವುಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ತನಿಖೆಯಲ್ಲಿ ಆಗುತ್ತಿರುವ ವಿಳಂಬ ಇನ್ನುಮುಂದೆ ತಪ್ಪಲಿದೆ’ ಎಂದು ಹೇಳಿದರು.

‘ಸೈಬರ್‌ ಅಪರಾಧ ತನಿಖೆಗೆ ಸ್ಥಾಪಿಸಿದ ಠಾಣೆಗಳನ್ನು ಇನ್ನಷ್ಟು ಸಶಕ್ತಗೊಳಿಸಲು ಚಿಂತನೆ ನಡೆದಿದೆ. ತಂತ್ರಜ್ಞರ ಸೇವೆಯನ್ನು ಠಾಣೆಯ ಹಂತದಲ್ಲಿ ಬಳಸಿಕೊಳ್ಳುವ ಬಗ್ಗೆ ಚರ್ಚಿಸಲಾಗಿದೆ. ಸೈಬರ್‌ ತಂತ್ರಜ್ಞರ ನೆರವು ಸಿಕ್ಕರೆ ತ್ವರಿತ ತನಿಖೆಗೆ ಸಹಕಾರಿಯಾಗಲಿದೆ. ಮೀಸಲು ಪೊಲೀಸ್‌ ಪಡೆಯ ಕಾನ್‌ಸ್ಟೆಬಲ್‌ ಕಾರ್ಯವೈಖರಿ ಸುಧಾರಣೆಗೆ ಚರ್ಚೆ ನಡೆಯುತ್ತಿದೆ. ಕಾರಾಗೃಹ ಸುಧಾರಣೆಗೆ ಪ್ರತ್ಯೇಕ ಮಂಡಳಿ ಇದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

‘ಮಹಿಳೆಯರ ಸುರಕ್ಷತೆಗೆ ಸರ್ಕಾರ ಒತ್ತು ನೀಡಿದೆ. ರಾತ್ರಿ ಗಸ್ತು ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ. ತುರ್ತು ಕರೆಗಳಿಗೆ ಸೃಷ್ಟಿಸಿದ ಕೇಂದ್ರೀಕೃತ ವ್ಯವಸ್ಥೆಯನ್ನು ಇನ್ನಷ್ಟು ಸಬಲಗೊಳಿಸುವ ಕಾರ್ಯ ನಡೆಯುತ್ತಿದೆ. ಪೊಲೀಸ್‌, ಅಗ್ನಿಶಾಮಕ ಹಾಗೂ ಆಂಬುಲೆನ್ಸ್‌ಗಳು 5ರಿಂದ 7 ನಿಮಿಷದಲ್ಲಿ ಘಟನಾ ಸ್ಥಳ ತಲುಪಲಿವೆ. ಪೊಲೀಸ್‌ ತರಬೇತಿ ಶಾಲೆಯಲ್ಲಿ ಮಹಿಳೆಯರಿಗೆ ತರಬೇತಿಗಳನ್ನು ನೀಡಲು ನಿರ್ಧರಿಸಲಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.