ಚಿತ್ರದುರ್ಗ: ‘ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮ ಹಾಗೂ ಅದರಡಿ ಬರುವ ವಿವಿಧ ಜಾತಿಗಳ 12 ನಿಗಮಗಳಲ್ಲಿ ವ್ಯಾಪರ ಭ್ರಷ್ಟಾಚಾರವಾಗಿರುವ ದೂರು ಕೇಳಿ ಬಂದಿವೆ. ಕರ್ತವ್ಯ ಲೋಪ ಎಸಗಿರುವ ನಿಗಮದ ಜಿಲ್ಲಾ ಅಧಿಕಾರಿ ಶಿಲ್ಪಾ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಬೇಕು. ಜೊತೆಗೆ ಅವರ ವಿರುದ್ಧ ಪ್ರಕರಣ ದಾಖಲು ಮಾಡಿ ಕ್ರಮ ಜರುಗಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಜಿಲ್ಲಾಧಿಕಾರಿ, ಜಿ.ಪಂ ಸಿಇಒಗೆ ಸೂಚನೆ ನೀಡಿದರು.
ನಗರದ ಜಿ.ಪಂ ಸಭಾಂಗಣದಲ್ಲಿ ಸೋಮವಾರ ನಡೆದ ಮುಂದುವರಿದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿಗಮದ ಅಧಿಕಾರಿಗಳ ಕಾರ್ಯ ನಿರ್ವಹಣೆ ವಿರುದ್ಧ ಆಕ್ರೋಶ ವ್ಯಕ್ತವಾಯಿತು.
ವಿಷಯ ಪ್ರಸ್ತಾಪಿಸಿದ ಶಾಸಕ ಜಿ.ಬಿ.ಗೋವಿಂದಪ್ಪ, ‘ಅರಸು ಅಭಿವೃದ್ಧಿ ನಿಗಮದ ಅಧಿಕಾರಿಗಳು ಫಲಾನುಭವಿಗಳಿಂದ ಲಂಚ ಪಡೆಯುತ್ತಿದ್ದಾರೆ. ಪ್ರತಿ ಕೆಲಸಕ್ಕೂ ಇಂತಿಷ್ಟು ಎಂದು ಹಣ (ರೇಟ್ ಕಾರ್ಡ್) ನಿಗದಿ ಮಾಡಿದ್ದಾರೆ. ನಿಗಮದ ಜಿಲ್ಲಾ ಅಧಿಕಾರಿ ನೇರವಾಗಿ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ’ ಎಂದು ಆರೋಪಿಸಿದರು.
‘ಜಿಲ್ಲಾ ಅಧಿಕಾರಿ ಶಿಲ್ಪಾ ಅವರು ಪ್ರತಿ ಪ್ರಗತಿ ಪರಿಶೀಲನೆಗೂ ಹಾಜರಾಗುವುದಿಲ್ಲ. ಕುಂಟು ನೆಪ ಹೇಳಿಕೊಂಡು ಸಭೆಯಿಂದ ಹೊರಗುಳಿಯುತ್ತಾರೆ. ಜಿಲ್ಲೆಯ 6 ತಾಲ್ಲೂಕುಗಳಲ್ಲೂ ಭ್ರಷ್ಟಾಚಾರ ಎಸಗಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು. ಇದಕ್ಕೆ ಶಾಸಕರಾದ ಟಿ.ರಘುಮೂರ್ತಿ, ಎಂ.ಚಂದ್ರಪ್ಪ ದನಿಗೂಡಿಸಿದರು.
ಉತ್ತರಿಸಿದ ನಿಗಮದ ಅಧಿಕಾರಿ ದೇವೇಂದ್ರಪ್ಪ, ‘ನಿಗಮದ ಜಿಲ್ಲಾ ಅಧಿಕಾರಿಗೆ ಅಪಘಾತವಾಗಿ ರಜೆ ಪಡೆದಿದ್ದಾರೆ’ ಎಂದರು.
‘ಯಾರನ್ನು ಕೇಳಿ ರಜೆ ಪಡೆದಿದ್ದಾರೆ? ಅಪಘಾತವಾಗಿದ್ದರೆ ವೈದ್ಯಕೀಯ ಮಾಹಿತಿ ಕೊಡಿ’ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕೇಳಿದರು.
‘ಅವರು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಂದ ರಜೆ ಪಡೆದಿದ್ದಾರೆ’ ಎಂದು ದೇವೇಂದ್ರಪ್ಪ ಉತ್ತರಿಸಿದರು.
ಸಚಿವ ಡಿ.ಸುಧಾಕರ್ ಅವರು ತಕ್ಷಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ನಟರಾಜ್ ಅವರಿಗೆ ಕರೆ ಮಾಡಿದರು. ಶಿಲ್ಪಾ ಅವರು ನಿಗಮದ ಮುಖ್ಯ ಕಚೇರಿಯಿಂದಲೂ ರಜೆ ಪಡೆದಿಲ್ಲ. ಅಪಘಾತವಾಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂಬ ಉತ್ತರ ನಟರಾಜ್ ಅವರಿಂದ ಬಂತು.
ಜಿ.ಪಂ ಸಿಇಒ ಡಾ.ಎಸ್.ಆಕಾಶ್ ಮಾತನಾಡಿ, ‘ನಿಗಮದ ಜಿಲ್ಲಾ ಅಧಿಕಾರಿಯನ್ನು ತಕ್ಷಣವೇ ಕರ್ತವ್ಯದಿಂದ ಬಿಡುಗಡೆ ಮಾಡಲಾಗುವುದು. ಜೊತೆಗೆ ನಿಗಮದಲ್ಲಿ ನಡೆದಿರುವ ಚಟುವಟಿಕೆಗಳ ಬಗ್ಗೆ ತನಿಖೆ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ರೈಲ್ವೆ ಯೋಜನೆ ಕಾಮಗಾರಿ ವಿಳಂಬ: ದಾವಣಗೆರೆ– ಚಿತ್ರದುರ್ಗ– ತುಮಕೂರು ರೈಲ್ವೆ ಯೋಜನೆಯ ಪ್ರಗತಿಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರಶ್ನಿಸಿದರು. ರೈಲ್ವೆ ಇಲಾಖೆ ಅಧಿಕಾರಿ ಉತ್ತರಿಸಿ ‘ಒಟ್ಟು 3 ಹಂತಗಳಲ್ಲಿ ಯೋಜನೆ ರೂಪಿಸಲಾಗಿದ್ದು ಭೂಸ್ವಾಧೀನ, ಪರಿಹಾರ ವಿತರಣೆ ಪೂರ್ಣಗೊಂಡಿದೆ. ಚಿತ್ರದುರ್ಗದಿಂದ ಭರಮಸಾಗರದವರೆಗೆ ಈಗಾಗಲೇ ಕಾಮಗಾರಿ ಆರಂಭಗೊಂಡಿದೆ. ತಾವರೆಕೆರೆಯಿಂದ ಹಿರಿಯೂರುವರೆಗಿನ 2ನೇ ಹಂತದ ಕಾಮಗಾರಿ, ಹಿರಿಯೂರಿನಿಂದ ಚಿತ್ರದುರ್ಗದವರೆಗಿನ ಕಾಮಗಾರಿ ಟೆಂಡರ್ ಹಂತದಲ್ಲಿವೆ’ ಎಂದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಉತ್ತರಿಸಿ, ‘ಜಿಲ್ಲಾ ವ್ಯಾಪ್ತಿಯಲ್ಲಿ ಭೂಸ್ವಾಧೀನ ಮತ್ತು ಪರಿಹಾರ ವಿತರಣೆ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಿದೆ. ಇದರಲ್ಲಿ ಯಾವುದೇ ತಡವಾಗಿಲ್ಲ, ಬಾಕಿಯಾಗಿಲ್ಲ. ಆದರೆ ರೈಲ್ವೆ ಇಲಾಖೆ ನಡೆಸಬೇಕಾಗಿರುವ ಕಾಮಗಾರಿ ಅನುಷ್ಠಾನದಲ್ಲಿ ತಡವಾಗಿದೆ. ನಾವು ಕಾಮಗಾರಿ ಮೇಲ್ವಿಚಾರಣೆ ನಡೆಸಲು ಬರುವುದಿಲ್ಲ. ಶೀಘ್ರವಾಗಿ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ’ ಎಂದರು.
ಮಳೆ ಅಡ್ಡಿಯಾಗಿಲ್ಲ: ‘ಜಿಲ್ಲಾ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಮಳೆ ಅಡ್ಡಿಯಾಗಿದೆ’ ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ನಾಗರಾಜ್ ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ‘ಮಳೆ ನಿಂತು ತಿಂಗಳಾಗುತ್ತಿದೆ. ಬೇಕಿದ್ದರೆ ಕೃಷಿ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ, ಜಿಲ್ಲಾ ರಸ್ತೆಗಳ ಅಭಿವೃದ್ಧಿ ಕೆಲಸ ಮಾಡದ ಕಾರಣ ಜನರು ಶಾಸಕರನ್ನು ಪ್ರಶ್ನಿಸುತ್ತಿದ್ದಾರೆ. ಶೀಘ್ರವೇ ಕಾಮಗಾರಿ ಆರಂಭಿಸಿ’ ಎಂದು ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ–173ರ ಹೊಸದುರ್ಗ– ಹೊಳಲ್ಕೆರೆ ಭಾಗದಲ್ಲಿ ಕಾಮಗಾರಿ ಸಮರ್ಪಕವಾಗಿ ಮಾಡಿಲ್ಲ ಎಂದು ಶಾಸಕರು ಆರೋಪಿಸಿದರು. ಎಂಜಿನಿಯರ್ ವೆಂಕಟ ಶೇಷಾದ್ರಿ ಉತ್ತರಿಸಿ ‘ಭೂಸ್ವಾಧೀನ ಸಮಸ್ಯೆಯಾಗಿದೆ’ ಎಂದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಎಂ.ಚಂದ್ರಪ್ಪ ‘ಭೂಸ್ವಾಧೀನದ ಸಮಸ್ಯೆಯಾಗಿಲ್ಲ, ಸಭೆಗೆ ಸುಳ್ಳು ಮಾಹಿತಿ ನೀಡಬೇಡಿ’ ಎಂದು ಹೇಳಿದರು.
ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಇದ್ದರು.
ಅಪಾಯಕಾರಿ ವೃತ್ತ; ಸುರಕ್ಷತೆ ಕಲ್ಪಿಸಿ
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ‘ಹೊಳಲ್ಕೆರೆಯಿಂದ ಚಿತ್ರದುರ್ಗಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ–13ರ ಪ್ರಮುಖ ವೃತ್ತ ಅತ್ಯಂತ ಅಪಾಯಕಾರಿಯಾಗಿದೆ. 3 ಕಡೆಯಿಂದ ವೇಗವಾಗಿ ಬರುವ ವಾಹನಗಳು ಒಂದೇ ಕಡೆ ಸಂದಿಸುತ್ತವೆ. ಕೊಂಚ ಎಚ್ಚರ ತಪ್ಪಿದರೂ ದೊಡ್ಡ ದುರ್ಘಟನೆಯೇ ನಡೆಯುತ್ತದೆ. ಈಗಾಗಲೇ ನಾನು ಹಲವು ಬಾರಿ ಪೊಲೀಸರಿಗೆ ತಿಳಿಸಿದ್ದೇನೆ. ಅಪಾಯ ಸಂಭವಿಸುವ ಮೊದಲು ಅಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಹಂಪ್ ಅಥವಾ ರಿಫ್ಲೆಕ್ಟರ್ ಅಳವಡಿಸಬೇಕು’ ಎಂದು ಒತ್ತಾಯಿಸಿದರು. ರಾಷ್ಟ್ರೀಯ ಹೆದ್ದಾರಿ ವಿಭಾಗದ ಲೋಕೋಪಯೋಗಿ ಇಲಾಖೆ ಅಧಿಕಾರಿ ಉತ್ತರಿಸಿ ‘ಅದು ಶಿವಮೊಗ್ಗ ಕಚೇರಿ ವ್ಯಾಪ್ತಿಗೆ ಬರುತ್ತದೆ’ ಎಂದರು. ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ ‘ಮುಂದಿನ ಸಭೆಗೆ ಶಿವಮೊಗ್ಗ ಕಚೇರಿ ಅಧಿಕಾರಿಯನ್ನೂ ಕರೆಸಲಾಗುವುದು. ಅದಕ್ಕೂ ಮೊದಲು ಆ ವೃತ್ತದಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.
ಕೈಬೀಸಿಕೊಂಡು ಬರಬೇಡಿ
ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ ‘ಪ್ರಗತಿ ಪರಿಶೀಲನಾ ಸಭೆಗೆ ಅಧಿಕಾರಿಗಳು ಕೈಬೀಸಿಕೊಂಡು ಬರುವುದನ್ನು ಬಿಡಬೇಕು. ಸಮಗ್ರ ಮಾಹಿತಿ ಅಧಿಕಾರಿಗಳಲ್ಲಿ ಇಲ್ಲವಾಗಿದೆ. ಜಿಲ್ಲಾ ಪ್ರವಾಸ ಮಾಡದ ಕಾರಣ ಅವರಿಗೆ ಯೋಜನೆಗಳ ಮಾಹಿತಿ ಇಲ್ಲವಾಗಿದೆ’ ಎಂದರು. ಶಾಸಕ ಚಂದ್ರಪ್ಪ ಕೂಡ ‘ಇಲ್ಲಿ ನಾಟಕ ನೋಡಲು ಬರಬೇಡಿ’ ಎಂದರು. ಜಿಲ್ಲಾಧಿಕಾರಿ ವೆಂಕಟೇಶ್ ಉತ್ತರಿಸಿ ‘ಸಭೆಗೂ ಮೊದಲು ನಾವು ಪೂರ್ವಭಾವಿ ಸಭೆ ನಡೆಸಿದ್ದೇವೆ ಅಂಕಿಅಂಶಗಳಲ್ಲಿ ಸಾಕಷ್ಟು ತಿದ್ದುಪಡಿಯನ್ನೂ ಮಾಡಿದ್ದೇವೆ. ಆದರೂ ಅಧಿಕಾರಿಗಳಲ್ಲಿ ಸಮಗ್ರ ಮಾಹಿತಿ ಇಲ್ಲವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತೆಲುಗು ಸಂಭಾಷಣೆ..
ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಮಾಹಿತಿ ನೀಡಲು ಎಂಜಿನಿಯರ್ ರವಿ ತೇಜ್ ಬಂದಿದ್ದರು. ಅವರು ಇಂಗ್ಲಿಷ್‌ನಲ್ಲಿ ಸಭೆಗೆ ಉತ್ತರ ನೀಡಿದರು. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ಅವರನ್ನು ತೆಲುಗಿನಲ್ಲಿ ಪ್ರಶ್ನೆ ಕೇಳಿದರು. ನಂತರ ರವಿ ತೇಜ್ ತೆಲುಗಿನಲ್ಲೇ ಉತ್ತರ ಕೊಟ್ಟರು. ಅವರ ಸಂಭಾಷಣೆ ಬಹುತೇಕ ಅಧಿಕಾರಿಗಳಿಗೆ ಅರ್ಥವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.