ಚಿತ್ರದುರ್ಗ: ನೆಲೆ ಕಳೆದುಕೊಳ್ಳುವ ಭೀತಿಯಲ್ಲಿ ರುವ ಸುಡುಗಾಡು ಸಿದ್ಧ ಸಮುದಾಯಕ್ಕೆ ನೆಲೆ ಕಲ್ಪಿಸಲು ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಮುಂದಾಗಿದೆ.
ನಗರದ ಹೊರವಲಯದ ತಮಟಕಲ್ಲು ರಸ್ತೆಯ ಮೆದೇಹಳ್ಳಿಯಲ್ಲಿ ಕಳೆದ 15 ವರ್ಷಗಳಿಂದ 65 ಕುಟುಂಬಗಳು ಗುಡಿಸಲು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿವೆ.
ಈ ಸಮುದಾಯ ನೆಲೆ ನಿಂತ ಭೂಮಿ ‘ಖಾಸಗಿ ಸ್ವತ್ತು’ ಎಂಬುದು ಕೆಲ ದಿನಗಳ ಹಿಂದೆ ಇವರಿಗೆ ಖಾತ್ರಿಯಾಗಿದೆ. ಈ ಜಾಗ ಖಾಲಿ ಮಾಡಲು ಫೆ.1ರವರೆಗೆ ಸ್ವತ್ತಿನ ಮಾಲೀಕರು ಗಡುವು ವಿಧಿಸಿದ್ದಾರೆ. ಈ ಬಗ್ಗೆ ಜ.22ರಂದು ‘ನೆಲೆ ಕಳೆದುಕೊಳ್ಳುವ ಭೀತಿಯಲ್ಲಿ ಸಿದ್ಧರು’ ಶೀರ್ಷಿಕೆಯಲ್ಲಿ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ವರದಿಯನ್ನು ಗಮನಿಸಿದ ಬಯಲು ಸೀಮೆ ಪ್ರದೇಶಾ ಭಿವೃದ್ಧಿ ಮಂಡಳಿಯ ಅಧ್ಯಕ್ಷ ಎನ್.ಇ. ಜೀವನ್‌ಮೂರ್ತಿ ಸಮುದಾಯದ ನೆರವಿಗೆ ಧಾವಿಸಿದ್ದಾರೆ.
‘ಕುಡಿಯುವ ನೀರು, ವಿದ್ಯುತ್ ಸಂಪರ್ಕ ಇಲ್ಲದಿದ್ದರೂ ತಮಟಕಲ್ಲು ರಸ್ತೆಯಲ್ಲಿ ವಾಸವಿರುವ ಸುಡುಗಾಡು ಸಿದ್ಧರಿಗೆ ಸರ್ಕಾರ 2017-18 ರಲ್ಲಿ ಇಂಗಳದಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಎಕರೆ ಭೂಮಿಯನ್ನು ಮಂಜೂರು ಮಾಡಿದೆ. ಈ ಬೆಟ್ಟ, ಗುಡ್ಡದಂತ ಸ್ಥಳವನ್ನು ವಾಸಯೋಗ್ಯ ಬಡಾವಣೆಯಾಗಿ ಅಭಿವೃದ್ಧಿಪಡಿಸಿ ಹಸ್ತಾಂತರಿಸಲಾಗುವುದು’ ಎಂದು ಜೀವನ್ ಮೂರ್ತಿ ತಿಳಿಸಿದರು.
‘ಈ ಸಮುದಾಯಕ್ಕೆ ನೆರವು ನೀಡುವ ವಿಚಾರವನ್ನು ಸಚಿವರಾದ ಮುನಿರತ್ನ ಅವರ ಜತೆಗೆ ಚರ್ಚೆ ನಡೆಸಲಾಗಿದೆ. ಅವರು ಸಹ ಪೂರಕವಾಗಿ ಸ್ಪಂದಿಸಿದ್ದಾರೆ. ಜಿಲ್ಲಾಡಳಿತದಿಂದ ಈ ಜಾಗವನ್ನು ನಮ್ಮ ಸುರ್ಪದಿಗೆ ತೆಗೆದುಕೊಂಡು ಮೊದಲ ಹಂತದಲ್ಲಿ ಜಾಗವನ್ನು ಸಮತಟ್ಟುಗೊಳಿಸಲಾಗಿದೆ. ಬಳಿಕ ರಸ್ತೆ, ಚರಂಡಿ, ನೀರಿನ ಸೌಲಭ್ಯ ಕಲ್ಪಿಸಲಾಗುವುದು. ಬಳಿಕ ನಿವೇಶನ ಹಂಚಿಕೆ ಮಾಡಲಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.