ADVERTISEMENT

ಸಹಾಯಧನ ನಿರೀಕ್ಷೆಯಲ್ಲಿ ಅಡಿಕೆ ಬೆಳೆಗಾರ

ಜಿ.ಬಿ.ನಾಗರಾಜ್
Published 25 ಸೆಪ್ಟೆಂಬರ್ 2023, 6:32 IST
Last Updated 25 ಸೆಪ್ಟೆಂಬರ್ 2023, 6:32 IST
ಹೊಳಲ್ಕೆರೆ ತಾಲ್ಲೂಕಿನ ಅಡಿಕೆ ತೋಟ
ಹೊಳಲ್ಕೆರೆ ತಾಲ್ಲೂಕಿನ ಅಡಿಕೆ ತೋಟ   

ಚಿತ್ರದುರ್ಗ: ರಾಜ್ಯದ ಬೆಳೆಗಾರರ ಗಮನ ಸೆಳೆದ ಅಡಿಕೆ ಮಾರುಕಟ್ಟೆಯು ಚಿತ್ರದುರ್ಗ ತಾಲ್ಲೂಕಿನ ಭೀಮಸಮುದ್ರದಲ್ಲಿದೆ. ಹಲವು ದಶಕಗಳಿಂದ ಈ ಭಾಗದಲ್ಲಿ ಅಡಿಕೆ ಪ್ರಧಾನ ಬೆಳೆಯಾಗಿದೆ ಎಂಬುದರ ಸೂಚಕದಂತೆ ಇದು ಗೋಚರಿಸುತ್ತಿದೆ. ಆದರೂ, ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಹಾಗೂ ಹನಿ ನೀರಾವರಿಯ ಸಹಾಯಧನಕ್ಕೆ ಅಡಿಕೆ ಬೆಳೆಯನ್ನು ಪರಿಗಣಿಸುತ್ತಿಲ್ಲ.

ತೋಟಗಾರಿಕೆ ಇಲಾಖೆಯ ಸಾಂಪ್ರದಾಯಿಕ ಬೆಳೆಯ ವ್ಯಾಪ್ತಿಯಲ್ಲಿ ಅಡಿಕೆ ಸೇರಿಲ್ಲ. ಜಿಲ್ಲೆಯ 53,000 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಕೃಷಿ ನಡೆಸಲಾಗುತ್ತಿದ್ದರೂ ಸರ್ಕಾರದಿಂದ ಪ್ರೋತ್ಸಾಹ ಸಿಗುತ್ತಿಲ್ಲ ಎಂಬ ಕೊರಗು ಬೆಳೆಗಾರರನ್ನು ಕಾಡುತ್ತಿದೆ. ಕರಾವಳಿ, ಮಲೆನಾಡು ಹಾಗೂ ಅರೆಮಲೆನಾಡು ಪ್ರದೇಶದಲ್ಲಿ ಅಡಿಕೆಗೆ ನೀಡುವ ಸಹಾಯಧನವನ್ನು ಚಿತ್ರದುರ್ಗ ಜಿಲ್ಲೆಯ ಬೆಳೆಗಾರರಿಗೂ ಕಲ್ಪಿಸಬೇಕು ಎಂಬ ಕೂಗು ಬಲವಾಗುತ್ತಿದೆ.

ಕೃಷಿ ಭೂಮಿಯಲ್ಲಿ ಗುಂಡಿ ತೋಡಿ ಸಸಿ ನಾಟಿ ಮಾಡಲು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವಕಾಶವಿದೆ. ತೋಟಕ್ಕೆ ಹನಿ ನೀರಾವರಿ ಸೌಲಭ್ಯ ಕಲ್ಪಿಸಲು ಸರ್ಕಾರ ಸಹಾಯಧನ ಒದಗಿಸುತ್ತಿದೆ. ಆದರೆ, ಈ ಸೌಲಭ್ಯ ಜಿಲ್ಲೆಯ ರೈತರಿಗೆ ಲಭ್ಯವಾಗುತ್ತಿಲ್ಲ. ಸಹಾಯಧನದ ವ್ಯಾಪ್ತಿಗೆ ಅಡಿಕೆ ಬೆಳೆಯನ್ನೂ ಸೇರಿಸುವಂತೆ ರೈತರು ಬೇಡಿಕೆ ಸಲ್ಲಿಸುತ್ತಏ ಇದ್ದಾರೆ. ಸರ್ಕಾರ ಈ ಬೇಡಿಕೆಯನ್ನು ಗಂಭೀರವಾಗ ಪರಿಗಣಿಸುತ್ತಿಲ್ಲ ಎಂಬ ಅಸಮಾಧಾನ ಬೆಳೆಗಾರರನ್ನು ಕಾಡುತ್ತಿದೆ.

ADVERTISEMENT

ತೆಂಗು ಜಿಲ್ಲೆಯ ಪ್ರಮುಖ ತೋಟಗಾರಿಕೆ ಬೆಳೆ. ದಾಳಿಂಬೆಯತ್ತ ರೈತರು ಒಲವು ತೋರಿದ್ದರೂ ಬೆಲೆಯ ಅನಿಶ್ಚಿತತೆಯಿಂದ ಬೆಳೆಯಿಂದ ವಿಮುಖರಾಗಿದ್ದಾರೆ. ತೆಂಗಿಗೆ ನಿರೀಕ್ಷಿತ ಬೆಲೆ ಲಭ್ಯವಾಗದ ಕಾರಣಕ್ಕೂ ಬೆಳೆ ವಿಸ್ತರಣೆಗೆ ರೈತರು ಆಸಕ್ತಿ ತೋರುತ್ತಿಲ್ಲ. ಮೆಕ್ಕೆಜೋಳ, ಶೇಂಗಾ, ಸಿರಿಧಾನ್ಯ ಬೆಳೆಯುತ್ತಿದ್ದ ರೈತರೂ ಅಡಿಕೆಯತ್ತ ಆಕರ್ಷಿತರಾಗಿದ್ದಾರೆ. ಅಡಿಕೆಗೆ ಸಿಗುತ್ತಿರುವ ಬೆಲೆ, ಬೆಳೆ ನಿರ್ವಹಣೆಗೆ ಹೆಚ್ಚು ಕಷ್ಟಪಡಬೇಕಾಗಿಲ್ಲ ಎಂಬ ಕಾರಣಕ್ಕೂ ಕೃಷಿಕರು ಅಡಿಕೆಯತ್ತ ವಾಲುತ್ತಿದ್ದಾರೆ. ಕಳೆದ ಐದು ವರ್ಷದಲ್ಲಿ ಅಡಿಕೆ ಬೆಳೆ ಹೆಚ್ಚಾಗುತ್ತಿದೆ.

ಜಿಲ್ಲೆಯ ಜನರ ಬಹುದಿನಗಳ ನೀರಾವರಿ ಕನಸಾಗಿದ್ದ ಭದ್ರಾ ಮೇಲ್ದಂಡೆ ಸಾಕಾರಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ನಾಲೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ವೇದಾವತಿ ನದಿಯ ಮೂಲಕ ವಿ.ವಿ.ಸಾಗರಕ್ಕೆ ಭದ್ರಾ ಜಲಾಶಯದ ನೀರು ತರಲಾಗಿದೆ. ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂಬ ಕಾರಣಕ್ಕೂ ಅಡಿಕೆ ತೋಟಗಳನ್ನು ನಿರ್ಮಿಸಲಾಗುತ್ತಿದೆ. ಹಿರಿಯೂರು, ಹೊಸದುರ್ಗ, ಚಿತ್ರದುರ್ಗ, ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಅಡಿಕೆ ಬೆಳೆ ನಾಲ್ಕು ವರ್ಷದಿಂದ ಹೆಚ್ಚು ವಿಸ್ತರಣೆಯಾಗಿದೆ.

ಚಳ್ಳಕೆರೆ ತಾಲ್ಲೂಕಿನಲ್ಲಿ ವಿಸ್ತರಣೆಗೊಂಡಿರುವ ಅಡಿಕೆ

‘ಅಡಿಕೆ ಬೆಳೆಯ ಸಹಾಯಧನವನ್ನು ಕರಾವಳಿ ಮತ್ತು ಮಲೆನಾಡಿಗೆ ಸೀಮಿತಗೊಳಿಸಿದ ಸರ್ಕಾರದ ನಿರ್ಧಾರ ಸರಿಯಲ್ಲ. ಬೆಳೆ ವಿಸ್ತೀರ್ಣವಾಗದಂತೆ ತಡೆಯುವ ಲಾಬಿ ಕೂಡ ಇದರಲ್ಲಿ ಅಡಗಿರುವ ಗುಮಾನಿ ಕಾಡುತ್ತಿದೆ. ಕಡಿಮೆ ಮಳೆ ಬೀಳುವ ಪ್ರದೇಶದ ಕೃಷಿಕರಿಗೆ ಹನಿ ನೀರಾವರಿ ಸೌಲಭ್ಯಕ್ಕೆ ಸಹಾಯಧನ ನೀಡಿದರೆ ಅನುಕೂಲವಾಗುತ್ತದೆ. ಮಧ್ಯ ಕರ್ನಾಟಕ ಭಾಗದ ರೈತರತ್ತಲೂ ಸರ್ಕಾರ ಗಮನ ಹರಿಸಬೇಕು’ ಎಂದು ಚಳ್ಳಕೆರೆ ತಾಲ್ಲೂಕಿನ ಭರಮಸಾಗರದ ಧನ್ಯಪ್ರಸಾದ್‌ ಒತ್ತಾಯಿಸುತ್ತಾರೆ.Quote - ಅಡಿಕೆಗಷ್ಟೇ ಸಹಾಯಧನ ನೀಡುವುದಿಲ್ಲವೆಂದು ತೋಟಗಾರಿಕೆ ಇಲಾಖೆ ಹೇಳಿದೆ. ಎಲೆಬಳ್ಳಿ ಬಾಳೆ ಮೆಣಸನ್ನು ಮಿಶ್ರ ಬೆಳೆಯಾಗಿ ಬೆಳೆಯುವಂತೆ ಸಲಹೆ ನೀಡುತ್ತಿದ್ದಾರೆ ಧನ್ಯಪ್ರಸಾದ್‌ ಭರಮಸಾಗರ ಚಳ್ಳಕೆರೆ ತಾಲ್ಲೂಕು

ಚಿತ್ರದುರ್ಗ ತಾಲ್ಲೂಕಿನಲ್ಲಿ ವಿಸ್ತರಣೆಗೊಂಡ ಅಡಿಕೆ
ಜಿಲ್ಲೆಯ ಸಾಂಪ್ರದಾಯಿಕ ಬೆಳೆಯ ವ್ಯಾಪ್ತಿಯಲ್ಲಿ ಅಡಿಕೆ ಇಲ್ಲ. ರೈತರ ಸಹಾಯಧನ ಬೇಡಿಕೆಯನ್ನು ಸಚಿವರ ಗಮನಕ್ಕೆ ತರಲಾಗಿದೆ
– ಸವಿತಾ, ಉಪ ನಿರ್ದೇಶಕಿ ತೋಟಗಾರಿಕೆ ಇಲಾಖೆ
ಅಡಿಕೆಗಷ್ಟೇ ಸಹಾಯಧನ ನೀಡುವುದಿಲ್ಲವೆಂದು ತೋಟಗಾರಿಕೆ ಇಲಾಖೆ ಹೇಳಿದೆ. ಎಲೆಬಳ್ಳಿ ಬಾಳೆ ಮೆಣಸನ್ನು ಮಿಶ್ರ ಬೆಳೆಯಾಗಿ ಬೆಳೆಯುವಂತೆ ಸಲಹೆ ನೀಡುತ್ತಿದ್ದಾರೆ
– ಧನ್ಯಪ್ರಸಾದ್‌ ಭರಮಸಾಗರ, ಚಳ್ಳಕೆರೆ ತಾಲ್ಲೂಕು
ಸಲಿಕೆ ಹಿಡಿದು ಶ್ರಮವಹಿಸಿ ಬೆಳೆಗೆ ನೀರುಣಿಸುವ ಅಗತ್ಯವಿಲ್ಲ. ಹನಿ ನೀರಾವರಿಯಿಂದ ಸುಲಭವಾಗಿ ಬೆಳೆ ಬೆಳೆಯಬಹುದು. ಸಹಾಯಧನ ನೀಡಿದರೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ
– ಶ್ರೀನಿವಾಸರೆಡ್ಡಿ ರಂಗವ್ವನಹಳ್ಳಿ ಚಳ್ಳಕೆರೆ ತಾಲ್ಲೂಕು
ಅಂತರ್ಜಲ ಆಶ್ರಯಿಸಿದ ಬೆಳೆಗಾರ
ಹೊಳಲ್ಕೆರೆ: ಅಡಿಕೆಯು ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು ಇಲ್ಲಿನ ರೈತರ ಬೆನ್ನೆಲುಬಾಗಿದೆ. ಅರೆಮಲೆನಾಡು ಭಾಗವಾಗಿರುವ ಹೊಳಲ್ಕೆರೆಯು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅಡಿಕೆ ಬೆಳೆಯುವ ತಾಲ್ಲೂಕು. ಇಲ್ಲಿನ ಮಣ್ಣು ಹವಾಮಾನ ಸಮೃದ್ಧ ಮಳೆಯು ಅಡಿಕೆ ಬೆಳೆಗೆ ಹೇಳಿ ಮಾಡಿಸಿದಂತೆ ಇದ್ದು ಹೆಚ್ಚು ಇಳುವರಿ ಕೊಡುತ್ತದೆ. ಅಡಿಕೆ ಬೆಲೆ ಕ್ವಿಂಟಲ್‌ಗೆ ₹ 40000ದಿಂದ ₹ 45000ದ ಆಸುಪಾಸಿನಲ್ಲಿ ಇರುವುದರಿಂದ ಇದಕ್ಕಿಂತ ಹೆಚ್ಚು ಲಾಭ ತಂದುಕೊಡುವ ಬೆಳೆ ಮತ್ತೊಂದಿಲ್ಲ ಎಂದು ನಂಬಿರುವ ರೈತರು ಅಡಿಕೆಗೆ ಮಾರು ಹೋಗಿದ್ದಾರೆ. ಕಳೆದ ವರ್ಷ 18785 ಹೆಕ್ಟೇರ್ ಪ್ರದೇಶದಲ್ಲಿದ್ದ ಅಡಿಕೆ ಬೆಳೆ ಈ ವರ್ಷ ಇನ್ನೂ 5000 ಹೆಕ್ಟೇರ್ ಹೆಚ್ಚುವರಿ ಪ್ರದೇಶವನ್ನು ಆಕ್ರಮಿಸಿಕೊಂಡಿದೆ. ಅಡಿಕೆ ಪ್ರದೇಶ ಇನ್ನೂ ವಿಸ್ತಾರಗೊಳ್ಳುತ್ತಲೇ ಇದ್ದು ಮುಂದೊಂದು ದಿನ ಮೆಕ್ಕೆಜೋಳ ಹತ್ತಿ ಸಿರಿಧಾನ್ಯ ತರಕಾರಿ ಪ್ರದೇಶಗಳು ಅಡಿಕೆ ಬೆಳೆಯಲ್ಲಿ ಲೀನವಾಗುವ ಸಂಭವ ಹೆಚ್ಚಾಗಿದೆ. ತಾಲ್ಲೂಕಿಗೆ ಶಾಶ್ವತ ನೀರಾವರಿ ಸೌಲಭ್ಯ ಇಲ್ಲ. ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ಕೆರೆ ತುಂಬಿಸುವ ಯೋಜನೆ ಇದೆಯಾದರೂ ಇನ್ನೂ ಕಾರ್ಯಗತ ಆಗಿಲ್ಲ. ಇಲ್ಲಿನ ಅಡಿಕೆ ಬೆಳೆಗಾರರು ಅಂತರ್ಜಲವನ್ನೇ ನಂಬಿದ್ದು ಕೊಳವೆ ಬಾವಿಗಳನ್ನು ಆಶ್ರಯಿಸಿದ್ದಾರೆ. ಕಳೆದ ವರ್ಷ ಹೆಚ್ಚು ಮಳೆ ಸುರಿದಿದ್ದರಿಂದ ಭವಿಷ್ಯದಲ್ಲೂ ಹೀಗೆಯೇ ಮಳೆ ಬರುತ್ತದೆ ಎಂದು ನಂಬಿ ಹೆಚ್ಚು ಅಡಿಕೆ ಸಸಿ ನಾಟಿ ಮಾಡಿದ್ದಾರೆ. ಐದು ವರ್ಷಗಳ ಹಿಂದೆ ಮಳೆ ಇಲ್ಲದೆ ಕೊಳವೆ ಬಾವಿಗಳು ಬತ್ತಿ ಹೋಗಿದ್ದವು. ಆಗ ಕೆಲವು ರೈತರು ಲಕ್ಷಗಟ್ಟಲೆ ಸಾಲ ಮಾಡಿ ಟ್ಯಾಂಕರ್ ಮೂಲಕ ನೀರು ಹಾಕಿಸಿ ತೋಟಗಳನ್ನು ಉಳಿಸಿಕೊಂಡಿದ್ದರು. ಹಣವಿಲ್ಲದವರು ಕೈಚೆಲ್ಲಿ ಕುಳಿತು ತೋಟ ಒಣಗಿಸಿಕೊಂಡಿದ್ದರು. ಆದರೆ ಆಗ ಅಡಿಕೆ ಪ್ರದೇಶ ಕಡಿಮೆ ಇತ್ತು. ಈಗ ಅದಕ್ಕಿಂದ ತೋಟಗಳ ವ್ಯಾಪ್ತಿ ಹಲವು ಪಟ್ಟು ಹೆಚ್ಚಾಗಿದ್ದು ಟ್ಯಾಂಕರ್ ನೀರು ಹಾಕಿಸಿ ತೋಟ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ಈ ವರ್ಷ ಮಳೆಗಾಲ ಮುಗಿಯುತ್ತಾ ಬಂದರೂ ಹಳ್ಳಗಳಲ್ಲಿ ನೀರು ಹರಿಯುವಷ್ಟು ಮಳೆ ಬಂದಿಲ್ಲ. ಕಳೆದ ವರ್ಷ ಹೆಚ್ಚು ಮಳೆ ಬಂದು ಕೆರೆಗಳು ತುಂಬಿದ್ದರಿಂದ ಇಲ್ಲಿಯವರೆಗೆ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದೆ. ಆದರೂ ಕೆಲವು ಭಾಗಗಳ ಕೊಳವೆ ಬಾವಿಗಳಲ್ಲಿ ನೀರು ಕಡಿಮೆ ಆಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಅಡಿಕೆ ಬೆಳೆಗಾರ ಸಂಕಷ್ಟಕ್ಕೆ ಸಿಲುಕುವುದು ಗ್ಯಾರಂಟಿ.
ಹನಿ ನೀರಾವರಿ ಅನಿವಾರ್ಯ
ಚಳ್ಳಕೆರೆ: ವೇದಾವತಿ ನದಿಯಲ್ಲಿ ಆಗಾಗ ನೀರು ಹರಿಯುತ್ತಿದೆ. ನದಿಗೆ ಅಡ್ಡ ನಿರ್ಮಿಸಿದ ಚೆಕ್‌ ಡ್ಯಾಮ್‌ಗಳು ಭರ್ತಿಯಾಗುತ್ತಿವೆ. ಚೆಕ್‌ಡ್ಯಾಮ್‌ ಹಾಗೂ ನದಿ ಆಸುಪಾಸಿನ ಜಮೀನುಗಳಲ್ಲಿ ಈಗ ಅಡಿಕೆ ಬೆಳೆ ನಳನಳಿಸುತ್ತಿದೆ. ತಾಲ್ಲೂಕಿನ ಕಲಮರಹಳ್ಳಿ ಗೊರ್ಲತ್ತು ತೋರೆಬೀರನಹಳ್ಳಿ ಕೊನಿಗರಹಳ್ಳಿ ಬೆಳಗೆರೆ ಟಿ.ಎನ್. ಕೋಟೆ ಬೀರನಹಳ್ಳಿ ಗೋಸಿಕೆರೆ ವಡೇರಹಳ್ಳಿ ಸೂರನಹಳ್ಳಿ ಚೌಳೂರು ಪರಶುರಾಂಪುರ ಜುಂಜರಗುಂಟೆ ನಾಗಗೊಂಡನಹಳ್ಳಿ ಜಾಜೂರು ಹಾಲಗೊಂಡನಹಳ್ಳಿ ಮುಂತಾದ ಗ್ರಾಮದ ನೂರಾರು ಎಕರೆ ಪ್ರದೇಶದಲ್ಲಿ ಅಡಿಕೆ ಸಸಿ ನಾಟಿ ಮಾಡಲಾಗಿದೆ. ಈ ಮೊದಲು ಹತ್ತಿ ಈರುಳ್ಳಿ ಮೆಕ್ಕೆಜೋಳ ಮುಂತಾದ ಅಲ್ಪಾವಧಿ ಬೆಳೆ ಬೆಳೆದು ನಷ್ಟ ಅನುಭವಿಸಿದ್ದ ರೈತರು ವೇದಾವತಿ ನದಿ ನೀರಿನ ಫಲವಾಗಿ ಇದೀಗ ದೀರ್ಘಾವಧಿ ಅಡಿಕೆ ಕೃಷಿಯತ್ತ ಮುಖ ಮಾಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಸಾಕಾರಗೊಂಡರೆ ಕೆರೆಗಳಿಗೆ ನೀರು ಬರುತ್ತದೆ ಎಂಬ ಆಶಾಭಾವನೆ ರೈತರದಲ್ಲಿದೆ. ಅಡಿಕೆಗೆ ಹೆಚ್ಚು ಬೇಡಿಕೆ ಹಾಗೂ ಉತ್ತಮ ಬೆಲೆ ಇರುವ ಕಾರಣ ರೈತರು ಆಕರ್ಷಿತರಾಗುತ್ತಿದ್ದಾರೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ತೋಟ ಕಟ್ಟುತ್ತಿದ್ದಾರೆ. ನಾಟಿ ಮಾಡಿದ ಆರಂಭದ ಒಂದೆರಡು ವರ್ಷ ಅಡಿಕೆ ಬೆಳೆಗೆ ನೆರಳು ಬೇಕು. ಹಾಗಾಗಿ ನರೇಗಾ ಯೋಜನೆ ಸೌಲಭ್ಯ ಬಳಕೆ ಮಾಡಿಕೊಂಡು ಅಡಿಕೆ ಜತೆಗೆ ನುಗ್ಗೆ ಬಾಳೆ ಪಪ್ಪಾಯಿ ಅಂತರ ಬೆಳೆಯಾಗಿ ಪ್ರಯೋಗ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.