ADVERTISEMENT

ಆಶಾ ಕಾರ್ಯಕರ್ತೆಯರ ಮುಷ್ಕರ ಆರಂಭ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 12:04 IST
Last Updated 10 ಜುಲೈ 2020, 12:04 IST

ಚಿತ್ರದುರ್ಗ: ಕೊರೊನಾ ವಾರಿಯರ್ಸ್‌ಗಳಾಗಿ ಮೂರು ತಿಂಗಳಿಂದ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಶುಕ್ರವಾರದಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಿದ್ದಾರೆ.

ಗೌರವಧನವನ್ನು ₹ 12 ಸಾವಿರಕ್ಕೆ ಏರಿಕೆ ಮಾಡಬೇಕು ಹಾಗೂ ಕೊರೊನಾ ಸೋಂಕಿಗೆ ಸಂಬಂಧಿಸಿದ ಕೆಲಸಕ್ಕೆ ಪಿಪಿಇ ಕಿಟ್‌ ಸಹಿತ ಸುರಕ್ಷತಾ ಸಾಮಗ್ರಿ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲೆಯ ಒಂದೂವರೆ ಸಾವಿರಕ್ಕೂ ಅಧಿಕ ಆಶಾ ಕಾರ್ಯಕರ್ತೆಯರು ಕೆಲಸಕ್ಕೆ ಹಾಜರಾಗಲಿಲ್ಲ.

‘ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಆಶಾ ಕಾರ್ಯಕರ್ತೆಯರ ಕೆಲಸದ ಅವಧಿ ಹೆಚ್ಚಾಗಿದೆ. ನಿತ್ಯ ಬೆಳಿಗ್ಗೆ ಮನೆ ತೊರೆದರೆ ರಾತ್ರಿ 7 ಗಂಟೆಗೆ ಮರಳುತ್ತೇವೆ. ಅತ್ಯಂತ ಅಪಾಯಕಾರಿ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ, ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ಬೇಸರವಿದೆ’ ಎಂದು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷೆ ಗಿರಿಜಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಸರ್ಕಾರ ನೀಡುವ ₹ 4 ಸಾವಿರ ಗೌರವಧನದಲ್ಲಿ ಬದುಕು ನಡೆಸಲು ಸಾಧ್ಯವಿಲ್ಲ. ಹೆರಿಗೆ ಹಾಗೂ ಗರ್ಭಿಣಿಯರ ಆರೈಕೆಗೆ ಸಿಗುತ್ತಿದ್ದ ಧನಸಹಾಯಕ್ಕೂ ಕತ್ತರಿ ಹಾಕಲಾಗಿದೆ. ಕಾರ್ಯದೊತ್ತಡದ ನಡುವೆ ವೈಯಕ್ತಿಕ ಬದುಕಿಗೆ ಸಮಯ ಇಲ್ಲದಂತಾಗಿದೆ. ಕೌಟುಂಬಿಕ ಕಲಹ ಆರಂಭವಾಗಿದ್ದು, ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಗೌರವಯುತವಾಗಿ ಬದುಕಲು ಅಗತ್ಯವಿರುವ ವೇತನ ನಿಗದಿ ಮಾಡುವುದು ಸೂಕ್ತ’ ಎಂದು ಆಗ್ರಹಿಸಿದರು.

ಎಐಯುಟಿಯುಸಿ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಗೆ ಭೇಟಿ ನೀಡಿದ ಪ್ರತಿಭಟನಾಕಾರರು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಎಐಯುಟಿಯುಸಿ ಮುಖಂಡ ರವಿಕುಮಾರ್‌, ಆಶಾ ಕಾರ್ಯಕರ್ತೆಯರಾದ ಲಕ್ಷ್ಮೀದೇವಿ, ಗುರುಶಾಂತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.