ADVERTISEMENT

ಚಿತ್ರದುರ್ಗ: ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರ ಎಚ್ಚರಿಕೆ

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿಗೆ ಮನವಿ, ಅಧಿವೇಶನದಲ್ಲಿ ಚರ್ಚಿಸುವಂತೆ ಕೋರಿಕೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 11:52 IST
Last Updated 20 ಸೆಪ್ಟೆಂಬರ್ 2020, 11:52 IST
ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರಿಗೆ ಆಶಾ ಕಾರ್ಯಕರ್ತೆಯರು ಮನವಿ ಸಲ್ಲಿಸಿದರು.
ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರಿಗೆ ಆಶಾ ಕಾರ್ಯಕರ್ತೆಯರು ಮನವಿ ಸಲ್ಲಿಸಿದರು.   

ಚಿತ್ರದುರ್ಗ: ಮಾಸಿಕ ಗೌರವಧನವನ್ನು ಏರಿಕೆ ಮಾಡದ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ ಆಶಾ ಕಾರ್ಯಕರ್ತೆಯರು ಎಚ್ಚರಿಕೆ ನೀಡಿದ್ದಾರೆ.

ಆಲ್‌ ಇಂಡಿಯಾ ಯುನೈಟೆಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌ (ಎಐಯುಟಿಸಿ) ಹಾಗೂ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನಿಯೋಗ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದೆ. ಮಾಸಿಕ ಗೌರವ ಧನವನ್ನು ₹12 ಸಾವಿರಕ್ಕೆ ಏರಿಕೆ ಮಾಡುವುದು ಸೇರಿದಂತೆ ಇತರ ಬೇಡಿಕೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುವಂತೆ ಕೋರಿಕೊಂಡಿದ್ದಾರೆ.

ಕೊರೊನಾ ಸೋಂಕು ನಿಯಂತ್ರಣಕ್ಕೆ ಆಶಾ ಕಾರ್ಯಕರ್ತೆಯರು ಮುಂಚೂಣಿಯಲ್ಲಿದ್ದು ಶ್ರಮಿಸಿದ್ದಾರೆ. ಆದರೆ, ಸರ್ಕಾರ ಕೆಲಸಕ್ಕೆ ಸರಿಯಾದ ವೇತನ ಪಾವತಿ ಮಾಡುತ್ತಿಲ್ಲ. ಜುಲೈ 10ರಿಂದ 29ರವರೆಗೆ ಸೇವೆಯಿಂದ ಹೊರಗೆ ಉಳಿದು ಮುಷ್ಕರ ನಡೆಸಿದರೂ ಪ್ರಯೋಜನವಾಗಿಲ್ಲ. ಸರ್ಕಾರ ಪಡೆದಿದ್ದ ಗಡುವಿನ ಅವಧಿ ಮುಗಿದಿದ್ದು ಹೋರಾಟ ಮುಂದುವರಿಸುವುದು ಅನಿವಾರ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ಮಾಸಿಕ ಗೌರವಧನವನ್ನು ₹ 12 ಸಾವಿರಕ್ಕೆ ಏರಿಸುವ ಅಗತ್ಯವಿದೆ. ಈ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ವಿಫಲವಾಗಿದೆ. ಸರ್ಕಾರ ಈಗ ನೀಡುತ್ತಿರುವ ಗೌರವಧನ ಸಾಕಾಗುತ್ತಿಲ್ಲ. ಸೆ.22ರಂದು ಜಿಲ್ಲಾ ಕೇಂದ್ರದಲ್ಲಿ ಹಾಗೂ ಸೆ.23ರಂದು ಬೆಂಗಳೂರಿನಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.

ಐಯುಟಿಸಿ ಜಿಲ್ಲಾ ಸಂಚಾಲಕ ಎಚ್‌.ರವಿಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.