ADVERTISEMENT

ಎಟಿಎಂನಲ್ಲಿ ಹಣ ದೋಚಲು ಯತ್ನ: ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 3:15 IST
Last Updated 6 ಅಕ್ಟೋಬರ್ 2020, 3:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಹೊಸದುರ್ಗ: ಇಲ್ಲಿನ ಕೆನರಾ ಬ್ಯಾಂಕ್‌ನ ಎಟಿಎಂ ಯಂತ್ರಕ್ಕೆ ರಹಸ್ಯವಾಗಿ ಸ್ಕಿಮ್ಮಿಂಗ್‌ ಯಂತ್ರ ಮತ್ತು ಕ್ಯಾಮೆರಾ ಅಳವಡಿಸುವ ಮೂಲಕ ಕಳ್ಳರು ಹಣ ದೋಚುವ ಯತ್ನ ನಡೆಸಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ.

ಪಟ್ಟಣದ ಬೆಸ್ಕಾಂನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರನೊಬ್ಬ ಎಟಿಎಂನಲ್ಲಿ ಹಣ ಬಿಡಿಸಿಕೊಳ್ಳಲು ಹೋಗಿದ್ದರು. ಆಗ ಎಟಿಎಂ ಯಂತ್ರದಲ್ಲಿ ಹೆಚ್ಚಿನ ಡಿವೈಸ್‌ ಇರುವುದು ಕಂಡು ಬಂದಿದೆ. ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಅದರಲ್ಲಿ ಕ್ಯಾಮೆರಾ ಇರುವುದು ಪತ್ತೆಯಾಗಿದೆ. ಆಗ ಎಟಿಎಂ ಯಂತ್ರಕ್ಕೆ ಅಳವಡಿಸಿದ್ದ ಹೆಚ್ಚುವರಿ ಡಿವೈಸ್‌ಗಳನ್ನು ಅನ್‌ಇನ್‌ಸ್ಟಾಲ್‌ ಮಾಡಿ ಪೊಲೀಸ್‌ ಠಾಣೆಗೆ ಒಪ್ಪಿಸಿದ್ದಾರೆ.

ಸ್ಕಿಮ್ಮಿಂಗ್‌ ಯಂತ್ರ ಮತ್ತು ಕ್ಯಾಮೆರಾ ಸಹಾಯದಿಂದ ಗ್ರಾಹಕರ ಎಟಿಎಂ ಕಾರ್ಡ್‌ ನಂಬರ್‌ ಸಹಿತ ರಹಸ್ಯ ಸಂಖ್ಯೆಗಳನ್ನು ಸ್ಕ್ಯಾನ್‌ ಮಾಡಲಾಗುತ್ತದೆ. ನಂತರ ನಕಲಿ ಕಾರ್ಡ್‌ ಸಿದ್ಧ ಮಾಡಿಕೊಂಡು ಗ್ರಾಹಕರ ಹಣ ಡ್ರಾ ಮಾಡಿಕೊಳ್ಳುತ್ತಾರೆ. ಪಟ್ಟಣದ ಹತ್ತಾರು ಕಡೆಗಳಲ್ಲಿರುವ ಎಟಿಎಂ ಯಂತ್ರಗಳಿಗೂ ಈ ರೀತಿಯ ಸ್ಕಿಮ್ಮಿಂಗ್‌ ಯಂತ್ರ ಮತ್ತು ಕ್ಯಾಮೆರಾ ಅಳವಡಿಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಿರುವ ಗ್ರಾಹಕರು, ಈ ಬಗ್ಗೆ ಬ್ಯಾಂಕ್‌ ವ್ಯವಸ್ಥಾಪಕರು ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

ದೂರು ದಾಖಲು: ಎಟಿಎಂನಲ್ಲಿ ಹಣ ದೋಚಲು ಯತ್ನಿಸಿದ ದುಷ್ಕರ್ಮಿಗಳು ಮುಖ ಹಾಗೂ ದೇಹಕ್ಕೆ ಬಟ್ಟೆ ಸುತ್ತಿಕೊಂಡು ಸ್ಕಿಮ್ಮಿಂಗ್‌ ಯಂತ್ರ ಮತ್ತು ಕ್ಯಾಮೆರಾ ಅಳವಡಿಸಿದ್ದಾರೆ. ಈ ಬಗ್ಗೆ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುವುದು ಎಂದು ಸಿಪಿಐ ಎಂ.ಡಿ.ಫೈಜುಲ್ಲಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.