
ಹೊಸದುರ್ಗ: ತಾಲ್ಲೂಕಿನಾದ್ಯಂತ ಅವರೆಕಾಯಿ ಋತು ಆರಂಭವಾಗಿದೆ. ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಅವರೆಕಾಯಿಯ ಪರಿಮಳ ಎಲ್ಲೆಡೆ ಹರಡಿದೆ.
ನಾಟಿ ಅವರೆಯನ್ನು ಗ್ರಾಹಕರು ನಾ ಮುಂದು, ತಾ ಮುಂದು ಎಂದು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಸುಲಿದ ಕಾಳುಗಳ ಮಾರಾಟವೂ ನಡೆಯುತ್ತಿದೆ. ತಾಲ್ಲೂಕಿನ ಕಸಬಾ ಹಾಗೂ ಮಾಡದಕೆರೆ ಹೋಬಳಿಗಳಲ್ಲಿ ಅಲ್ಪ ಪ್ರಮಾಣದಲ್ಲಿ ಅವರೆ ಬೆಳೆಯಲಾಗುತ್ತದೆ. ಮತ್ತೋಡು ಹೋಬಳಿಯ ಅರೇಹಳ್ಳಿ, ಮತ್ತೋಡು, ನಾಕಿಕೆರೆ, ಕಿಟದಾಳ್, ಕೆಂಕೆರೆ, ಅಜ್ಜಿಕಂಸಾಗರ ಸೇರಿದಂತೆ ವಿವಿಧೆಡೆ ಬೆಳೆದ ಫಸಲನ್ನು ಇಲ್ಲಿನ ಮಾರುಕಟ್ಟೆಗೆ ತರಲಾಗುತ್ತಿದೆ.
ಸೊಗಡಿನ ಆವರೆ: ಈಗಂತೂ ವರ್ಷಪೂರ್ತಿ ಅವರೆಕಾಯಿ ಲಭ್ಯವಿದೆ. ಆದಾಯಕ್ಕೋಸ್ಕರ ಹೈಬ್ರೀಡ್ ಅವರೆ ಬೆಳೆಯಲಾಗುತ್ತದೆ. ಅವುಗಳಲ್ಲಿ ಸೊಗಡು ಹಾಗೂ ರುಚಿ ಕಡಿಮೆ. ಆದರೆ, ಅಕ್ಟೋಬರ್‌ನಿಂದ ಜನವರಿ ಅವಧಿಯಲ್ಲಿ ಬೆಳೆಯುವ ಅವರೆಕಾಯಿಗೆ ಬೇಡಿಕೆ ಹೆಚ್ಚಿರುತ್ತದೆ. ಈ ಋತುವಿನಲ್ಲಿ ಬೆಳೆದ ಅವರೆಗೆ ಸೊಗಡಿನ ಜೊತೆ ರುಚಿಯೂ ಅಧಿಕ.
ಮಿಶ್ರಬೆಳೆಯಾಗಿ ಅವರೆ: ಹೆಚ್ಚಿನ ರೈತರು ಮಿಶ್ರಬೆಳೆಯಾಗಿ ಅವರೆ ಬೆಳೆಯುತ್ತಾರೆ. ರಾಗಿ ಜೊತೆ ಅಕ್ಕಡಿಯಾಗಿ ಬೆಳೆಯುವ ವಾಡಿಕೆಯಿದೆ. ಹತ್ತಿ, ತೆಂಗು, ಅಡಿಕೆ ಸಸಿಗಳಿರುವ ತೋಟ, ಜಮೀನಿನ ಬದುಗಳಲ್ಲಿ ಹಾಗೂ ವಾಣಿಜ್ಯ ಬೆಳೆಯಾಗಿಯೂ ರೈತರು ಬೆಳೆಯುತ್ತಾರೆ.
‘ವ್ಯಾಪಾರಿಗಳು ತರೀಕೆರೆ, ಅಜ್ಜಂಪುರ, ಕಡೂರು, ಹುಳಿಯಾರು ಸೇರಿದಂತೆ ವಿವಿಧೆಡೆಯಿಂದ ಬಂದು ಅವರೆಕಾಯಿ ಖರೀದಿಸುತ್ತಾರೆ. ರೈತರಿಂದ ಕೆ.ಜಿಗೆ ₹ 60ಕ್ಕೆ ಖರೀದಿಸಿ, ₹ 80ಕ್ಕೆ ಮಾರಾಟ ಮಾಡುತ್ತಾರೆ. ನವೆಂಬರ್ ತಿಂಗಳಿನಿಂದ ದರ ತುಸು ಹೆಚ್ಚಾಗಿದೆ’ ಎಂದು ನಾಕಿಕೆರೆ ರೈತ ತಿಪ್ಪೇಸ್ವಾಮಿ ಹೇಳಿದರು.
ಅವರೆ ಬಳಸಿ ವಿವಿಧ ಖಾದ್ಯ ತಯಾರಿ
ಅವರೆಕಾಯಿ ಋತುವಿನಲ್ಲಿ ಎಲ್ಲರೂ ಮನೆಯಲ್ಲೂ ಅವರೆಕಾಳಿನ ಘಮ ಇರುತ್ತದೆ. ಅವರೆಕಾಳು ಬಳಸಿ ಮಾಡುವ ಸಾಂಬಾರ್ ಪಲ್ಯ ಉಪ್ಸಾರು ಉಪ್ಪಿಟ್ಟು ಚಿತ್ರಾನ್ನ ಅವಲಕ್ಕಿ ಹಿತುಕಿದ ಬೇಳೆ ಸಾಂಬಾರ್ ಹಿತುಕಿದ ಬೇಳೆ ಜೊತೆ ಮೊಟ್ಟೆ ಬಳಸಿ ಖಾದ್ಯ ತಯಾರಿಸಲಾಗುತ್ತದೆ. ಕೋಳಿ ಕುರಿ ಮಾಂಸದ ಅಡುಗೆಗೂ ಅವರೆಕಾಳು ಬಳಸಿ ವಿವಿಧ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಕಾಯಿ ಬಿಡಿಸುವುದು ಹುಳು ಬಾಧೆ ಸ್ವಲ್ಪ ಕಿರಿಕಿರಿ ಎನಿಸಿದರೂ ಎಲ್ಲರೂ ಇಷ್ಟಪಟ್ಟು ಅಡುಗೆಗೆ ಬಳಸುತ್ತಾರೆ ಎಂದು ಇಲ್ಲಿನ ಗೃಹಿಣಿ ಓಂಕಾರಮ್ಮ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.