ADVERTISEMENT

ಧ್ವನಿ ಇಲ್ಲದವರ ದನಿ ‘ಅಮರಾವತಿ’

ಸಿನಿಮಾ ನಿರ್ದೇಶಕ ಬಿ.ಎಂ.ಗಿರಿರಾಜ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 13:12 IST
Last Updated 5 ಆಗಸ್ಟ್ 2019, 13:12 IST
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಭಾನುವಾರ ನಡೆದ ದುರ್ಗದ ಜನೋತ್ಸವದಲ್ಲಿ ಚಿತ್ರ ನಿರ್ದೇಶಕ ಬಿ.ಎಂ.ಗಿರಿರಾಜ ಪ್ರೇಕ್ಷಕರೊಂದಿಗೆ ಸಂವಾದ ನಡೆಸಿದರು
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಭಾನುವಾರ ನಡೆದ ದುರ್ಗದ ಜನೋತ್ಸವದಲ್ಲಿ ಚಿತ್ರ ನಿರ್ದೇಶಕ ಬಿ.ಎಂ.ಗಿರಿರಾಜ ಪ್ರೇಕ್ಷಕರೊಂದಿಗೆ ಸಂವಾದ ನಡೆಸಿದರು   

ಚಿತ್ರದುರ್ಗ: ಮನುಷ್ಯನ ಮೂಲಗುಣವಾದ ಜಡತ್ವ ಜೀವನವನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತಿದೆ. ಮತ್ತೊಬ್ಬರ ನೋವಿಗೆ, ದುಃಖಕ್ಕೆ ಸ್ಪಂದಿಸುವ ಮನಸ್ಥಿತಿಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಚಿತ್ರ ನಿರ್ದೇಶಕ ಬಿ.ಎಂ.ಗಿರಿರಾಜ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ತರಾಸು ರಂಗಮಂದಿರದಲ್ಲಿ ‘ಆವಿಷ್ಕಾರ’ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಭಾನುವಾರ ಏರ್ಪಡಿಸಿದ್ದ ದುರ್ಗದ ಜನೋತ್ಸವದಲ್ಲಿ ‘ಅಮರಾವತಿ’ ಚಲನಚಿತ್ರ ಪ್ರದರ್ಶನದ ಬಳಿಕ ಪ್ರೇಕ್ಷರೊಂದಿಗೆ ಅವರು ಸಂವಾದ ನಡೆಸಿದರು.

‘ರೈತರ ಆತ್ಮಹತ್ಯೆ, ಪೌರಕಾರ್ಮಿಕರ ನೋವು, ಶೋಷಿತ ಸಮುದಾಯದ ಅಳಲು ಮಧ್ಯಮ ವರ್ಗಕ್ಕೆ ಕೇಳಿಸುವುದಿಲ್ಲ. ಆತ್ಮಹತ್ಯೆ ಸಾಮಾನ್ಯ ಸಂಗತಿ ಎಂಬಂತೆ ಉಪೇಕ್ಷೆ ಮಾಡುತ್ತಿದ್ದೇವೆ. ಅತಿರೇಕದ ಸ್ಥಿತಿ ತಲುಪುವವರೆಗೂ ಯಾವುದೇ ಸಂಗತಿಗೆ ಸ್ಪಂದಿಸುತ್ತಿಲ್ಲ. ಇದು ನಿಜಕ್ಕೂ ವಿಪರ್ಯಾಸ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಪೌರಕಾರ್ಮಿಕರ ಜೀವನದ ಕುರಿತು ಸಿನಿಮಾ ಮಾಡಲು ಹಲವು ವರ್ಷ ಅಧ್ಯಯನ ನಡೆಸಿದೆ. 2006ರಿಂದಲೇ ಪೌರಕಾರ್ಮಿಕರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದೆ. ಬೆಂಗಳೂರಿನಲ್ಲಿ ಮೂರು ದಿನ ಕಸ ವಿಲೇವಾರಿ ಮಾಡದೇ ಪೌರಕಾರ್ಮಿಕರು ಮುಷ್ಕರ ನಡೆಸಿದಾಗ ಕಥಾವಸ್ತು ಸ್ಪಷ್ಟ ರೂಪ ಪಡೆಯಿತು. ಧ್ವನಿ ಇಲ್ಲದವರಿಗೆ ಧನಿಯಾಗುವ ಉದ್ದೇಶದಿಂದ ‘ಅಮರಾವತಿ’ ಸಿನಿಮಾ ಮಾಡಿದೆ’ ಎಂದು ಹೇಳಿದರು.

‘ಪೌರಕಾರ್ಮಿಕರ ಬದುಕು ಸುಧಾರಣೆಗೆ ಸರಿಯಾದ ಪ್ರಯತ್ನಗಳು ನಡೆಯುತ್ತಿಲ್ಲ. ಪೌರಕಾರ್ಮಿಕರ ಕೆಲಸಕ್ಕೆ ಯಂತ್ರೋಪಕರಣದ ನೆರವು ಪಡೆಯಲು ಗುತ್ತಿಗೆದಾರರು ಬಿಡುತ್ತಿಲ್ಲ. ಕಸ ವಿಲೇವಾರಿ ಉದ್ಯಮವಾಗಿ ಪರಿವರ್ತನೆಯಾಗಿದೆ. ನೂರಾರು ಕೋಟಿ ಬಂಡವಾಳ ಇಲ್ಲಿ ಹರಿಯುತ್ತದೆ. ಗುತ್ತಿಗೆದಾರರ ಲಾಬಿಗೆ ಅಧಿಕಾರಶಾಹಿ ಬೆನ್ನೆಲುಬಾಗಿ ನಿಂತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮೂರು ದಶಕಗಳ ಹೋರಾಟದ ಪರಿಣಾಮವಾಗಿ ಪೌರಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಇಳಿಸುವುದನ್ನು ನಿಷೇಧಿಸಲಾಗಿದೆ. ಪೌರಕಾರ್ಮಿಕರ ಬಗ್ಗೆ ಕನಿಕರ ವ್ಯಕ್ತಪಡಿಸುವ ಸುಶಿಕ್ಷಿತರು, ಅವರಿಗೆ ಗೌರವ ಕೊಡುವುದಿಲ್ಲ. ಅಪಾಯಕಾರಿ ವಸ್ತುಗಳನ್ನು ಕಸದೊಂದಿಗೆ ಸುರಿಯುತ್ತಾರೆ. ಕಸವನ್ನು ವಿಂಗಡಿಸಿ ನೀಡಬೇಕು ಎಂಬ ಕನಿಷ್ಠ ಪ್ರಜ್ಞೆ ಇನ್ನೂ ಬಂದಿಲ್ಲ’ ಎಂದು ಹೇಳಿದರು.

‘ಅಮರಾವತಿ’ ಸಿನಿಮಾ ಕಲವಿದರಾದ ಕಿರಣ್ ನಾಯಕ, ಹೇಮಂತ್ ಸುಶೀಲ್, ಎಐಡಿವೈಒ ಮುಖಂಡರಾದ ಎಚ್.ರವಿಕುಮಾರ್, ವಿಜಯ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.