ADVERTISEMENT

ಮೀಸಲಾತಿ ಹೆಚ್ಚಿಸದಿದ್ದರೆ ರಾಜಕೀಯ ನಿವೃತ್ತಿ: ಸಚಿವ ಬಿ.ಶ್ರೀರಾಮುಲು ಘೋಷಣೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 12:48 IST
Last Updated 13 ಅಕ್ಟೋಬರ್ 2019, 12:48 IST
ಬಿ.ಶ್ರೀರಾಮುಲು
ಬಿ.ಶ್ರೀರಾಮುಲು   

ಚಿತ್ರದುರ್ಗ: ಪರಿಶಿಷ್ಟ ಪಂಗಡಕ್ಕೆ ರಾಜ್ಯದಲ್ಲಿರುವ ಮೀಸಲಾತಿ ಪ್ರಮಾಣವನ್ನು ಶೇ 7.5ಕ್ಕೆ ಏರಿಕೆ ಮಾಡಬೇಕು ಎಂಬ ಬೇಡಿಕೆ ಎರಡು ತಿಂಗಳಲ್ಲಿ ಇತ್ಯರ್ಥವಾಗುವ ಸಾಧ್ಯತೆ ಇದೆ. ಮೀಸಲಾತಿ ಪ್ರಮಾಣ ನಿರೀಕ್ಷೆಯಷ್ಟು ಏರಿಕೆಯಾಗದೇ ಇದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಘೋಷಣೆ ಮಾಡಿದರು.

ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದ ಅವರು, ‘ನಾಯಕ ಸಮುದಾಯಕ್ಕೆ ಕೇಂದ್ರ ಸರ್ಕಾರ ಶೇ 7.5ರಷ್ಟು ಮೀಸಲಾತಿ ಕಲ್ಪಿಸಿದೆ. ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ ಕೂಡ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿವೆ. ಆದರೂ, ಸಮುದಾಯಕ್ಕೆ ಜನಸಂಖ್ಯೆ ಆಧಾರಿತ ಮೀಸಲಾತಿ ಸೌಲಭ್ಯ ಸಿಕ್ಕಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣದ ಏರಿಕೆಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಎಚ್‌.ಎಸ್‌.ನಾಗಮೋಹನದಾಸ್‌ ನೇತೃತ್ವದ ಸಮಿತಿ ರಚನೆಯಾಗಿದೆ. ಹಿಂದಿನ ಸರ್ಕಾರ ಸಮಿತಿಗೆ ಕಾಲಮಿತಿ ನಿಗದಿ ಮಾಡಿರಲಿಲ್ಲ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಎರಡು ತಿಂಗಳಲ್ಲಿ ವರದಿ ನೀಡುವಂತೆ ಸಮಿತಿಗೆ ಶಿಫಾರಸು ಮಾಡಿಸಲಾಗಿದೆ’ ಎಂದರು.

ADVERTISEMENT

‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುವ ಹಗಲು ಕನಸು ಕಾಣುತ್ತಿದ್ದಾರೆ. ಅಧಿಕಾರ ಕಳೆದುಕೊಂಡು ಹತಾಷರಾಗಿ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ ಸರ್ಕಾರದ ಕಾರ್ಯವೈಖರಿಯನ್ನು ಸಹಿಸದ ಅವರು, ನೆರೆ ಸಂತ್ರಸ್ತರ ವಿಚಾರ ಮುಂದಿಟ್ಟುಕೊಂಡು ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.