ADVERTISEMENT

ಚಳ್ಳಕೆರೆ | ದುಡಿಯುವ ತಾಯಂದಿರ ಮಕ್ಕಳ ಆರೈಕೆಗೆ ‘ಕೂಸಿನ ಮನೆ’

ಶಿವಗಂಗಾ ಚಿತ್ತಯ್ಯ
Published 25 ನವೆಂಬರ್ 2023, 6:36 IST
Last Updated 25 ನವೆಂಬರ್ 2023, 6:36 IST
ಚಳ್ಳಕೆರೆ ತಾಲ್ಲೂಕಿನ ನಗರಂಗೆರೆ ಗ್ರಾಮ ಪಂಚಾಯಿತಿಯಲ್ಲಿ ಸಿದ್ಧಗೊಂಡಿರುವ ‘ಕೂಸಿನ ಮನೆ’
ಚಳ್ಳಕೆರೆ ತಾಲ್ಲೂಕಿನ ನಗರಂಗೆರೆ ಗ್ರಾಮ ಪಂಚಾಯಿತಿಯಲ್ಲಿ ಸಿದ್ಧಗೊಂಡಿರುವ ‘ಕೂಸಿನ ಮನೆ’   

ಚಳ್ಳಕೆರೆ: ಗ್ರಾಮೀಣ ಪ್ರದೇಶಗಳಲ್ಲಿ ದುಡಿಯುವ ಮಹಿಳೆಯರ ಮೂರು ವರ್ಷದೊಳಗಿನ ಮಕ್ಕಳ ಸುರಕ್ಷತೆ ಮತ್ತು ಪೌಷ್ಟಿಕ ಆಹಾರ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಘೋಷಿಸಿದ್ದ ‘ಕೂಸಿನ ಮನೆ’ಗಳು ತಾಲ್ಲೂಕಿನಲ್ಲಿ ಶೀಘ್ರದಲ್ಲಿಯೇ ಕಾರ್ಯಾರಂಭಿಸಲಿವೆ.

ತಾಲ್ಲೂಕಿನ ಪರಶುರಾಂಪುರ, ಸಿದ್ದೇಶ್ವರನದುರ್ಗ, ಮಲ್ಲೂರಹಳ್ಳಿ, ಓಬಳಾಪುರ, ರೇಣುಕಾಪುರ, ತಳಕು, ಎನ್.ಮಹಾದೇವಪುರ, ಬೆಳಗೆರೆ, ಸಾಣಿಕೆರೆ, ನಗರಂಗೆರೆ ಸೇರಿ ತಾಲ್ಲೂಕಿನ 10 ಗ್ರಾಮ ಪಂಚಾಯಿತಿಗಳಲ್ಲಿ ಕೂಸಿನ ಮನೆಗಳು ಸಜ್ಜುಗೊಂಡಿವೆ.

ಶಿಶುಪಾಲನಾ ಕೇಂದ್ರಗಳು ಆರಂಭವಾದರೆ ಮಕ್ಕಳನ್ನು ನೋಡಿಕೊಳ್ಳಲು ನರೇಗಾ ಮಹಿಳಾ ಕೂಲಿ ಕಾರ್ಮಿಕರನ್ನೇ ‘ಕೇರ್‌ ಟೇಕರ್ಸ್‌’ ಎಂದು ಗುರುತಿಸಿ ಅವರಿಗೆ ಟ್ರೇನಿಂಗ್‌ ನೀಡಲಾಗುತ್ತದೆ. ಕೇರ್‌ಟೇಕರ್ಸ್‌ಗೆ ದಿನಕ್ಕೆ ಸಿಗುವ ಖಾತ್ರಿ ಎಷ್ಟಿದೆಯೋ ಅಷ್ಟನ್ನು ಅವರಿಗೆ ಪಾವತಿಸಲಾಗುತ್ತದೆ.

ADVERTISEMENT

ಮಕ್ಕಳ ಆರೈಕೆ ಮತ್ತು ಪೋಷಣೆಗೆ ನರೇಗಾ ಮಹಿಳಾ ಕೂಲಿ ಕಾರ್ಮಿಕರನ್ನೇ ‘ಕೇರ್‌ ಟೇಕರ್ಸ್‌’ ಎಂದು ಗುರುತಿಸಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ತರಬೇತಿ ನೀಡಲಾಗುತ್ತಿದೆ. ಕೇರ್‌ಟೇಕರ್ಸ್‌ಗೆ ದಿನಕ್ಕೆ ಸಿಗುವ ಖಾತ್ರಿ ಎಷ್ಟಿದೆಯೋ ಅಷ್ಟನ್ನು ಪಾವತಿಸಲಾಗುತ್ತದೆ. ಇದರಿಂದ ಜಾಬ್‍ಕಾರ್ಡ್ ಹೆಚ್ಚಳದ ಜತೆಗೆ ನರೇಗಾ ಕಾಮಗಾರಿ ಅನುಷ್ಠಾನ ಪರಿಣಾಮಕಾರಿಯಾಗಲಿದೆ. ಜತೆಗೆ ದುಡಿಯುವ ತಾಯಂದಿರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕೂಸಿನ ಮನೆ ನಿರ್ವಹಣೆ-ಮೇಲ್ವಿಚಾರಣೆಗಾಗಿ ಐಸಿಡಿಎಸ್ ಮೇಲ್ವಿಚಾರಕಿ, ಶಾಲೆ ಮುಖ್ಯಶಿಕ್ಷಕರು, ಆರೋಗ್ಯ ಕೇಂದ್ರದ ಸುರಕ್ಷ ಅಧಿಕಾರಿಗಳು, ಕೇರ್‌ಟೇಕರ್ಸ್‌, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಮಹಿಳಾ ಒಕ್ಕೂಟದ ಅಧ್ಯಕ್ಷರು, ಪಿಡಿಒ ಹಾಗೂ ಇಬ್ಬರು ತಾಯಂದಿರನ್ನು ಒಳಗೊಂಡ ಸಮಿತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಚನೆಗೊಂಡಿದೆ.

ಮೇಲ್ವಿಚಾರಣಾ ಸಮಿತಿ ಬೇಡಿಕೆಯಂತೆ ಸ್ಥಳೀಯ ಆಹಾರ ಪದ್ಧತಿ ಆಧರಿಸಿ ನಿಗದಿತ ಸಮಯಕ್ಕೆ ಪೌಷ್ಟಿಕಾಂಶಯುಕ್ತ ಉತ್ತಮ ಗುಣಮಟ್ಟದ ಸಮತೋಲಿತ ಆಹಾರವನ್ನು ಮಕ್ಕಳಿಗೆ ಒದಗಿಸಲಾಗುತ್ತದೆ. ಮಕ್ಕಳಿಗೆ ಪ್ರೀತಿಯಿಂದ ತಿಂಡಿ ತಿನ್ನಿಸುವುದು. ಬಣ್ಣ ಬಣ್ಣದ ಚಿತ್ರಗಳನ್ನು ತೋರಿಸುವುದು. ಆಟಿಕೆಗಳನ್ನು ಕೊಡುವುದು. ಶಿಕ್ಷಣದ ಬಗ್ಗೆ ಬಗ್ಗೆ ಆಸಕ್ತಿ ಮೂಡಿಸುವಂತೆ ಆಟ ಆಡಿಸುವುದು. ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ತಿಳಿಸುವುದು, ಹಾಡು, ಅಭಿನಯ, ನೃತ್ಯ, ಕಥೆ ಹೇಳುವ  ಕೆಲಸವನ್ನು ಕೇರ್‌ ಟೇಕರ್ಸ್‌ ಮಾಡಲಿದ್ದಾರೆ.

ತಾಲ್ಲೂಕಿನ 10 ಗ್ರಾಮ ಪಂಚಾಯಿತಿಗಳಲ್ಲಿ ಕೂಸಿನ ಮನೆಗಳು ಸಿದ್ಧಗೊಂಡಿದ್ದು ಶೀಘ್ರದಲ್ಲಿಯೇ ಕಾರ್ಯಾರಂಭಿಸಲಿವೆ. ಮಕ್ಕಳಿಗೆ ಅಗತ್ಯ ಪೌಷ್ಟಿಕ ಆಹಾರ ಪ್ರಥಮ ಚಿಕಿತ್ಸೆ ಕಿಟ್ ಹಾಗೂ ಕಲಿಕಾ ಸಾಮಗ್ರಿಗಳನ್ನು ಇಲಾಖೆಯಿಂದ ಒದಗಿಸಲಾಗುವುದು.
ಎಚ್.ಶಶಿಧರ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 100 ಜನ ದುಡಿಯುವ ವರ್ಗದ ತಾಯಂದಿರಿದ್ದು 3 ವರ್ಷದೊಳಗಿನ 30 ಮಕ್ಕಳನ್ನು ಗುರುತಿಸಲಾಗಿದೆ. ಮಕ್ಕಳ ಸ್ನೇಹಿ ಶೌಚಾಲಯ ವಯಸ್ಕರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ.
ರಾಮಚಂದ್ರಪ್ಪ ನಗರಂಗೆರೆ, ಗ್ರಾಮ ಪಂಚಾಯಿತಿ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.