ADVERTISEMENT

ನೀರೆರುಚುವ ಹಬ್ಬದ ಜತೆ ಬಾಡೂಟದ ಘಮ

ಯುಗಾದಿ ಸಂಭ್ರಮ ಸಂಪನ್ನ – ಜಿಲ್ಲೆಯಲ್ಲಿ ಹೊಸ ವರ್ಷದ ತೊಡಕು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2025, 15:45 IST
Last Updated 1 ಏಪ್ರಿಲ್ 2025, 15:45 IST
ಗ್ರಾಹಕರಿಂದ ತುಂಬಿದ ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯಲ್ಲಿನ ಕುರಿ–ಕೋಳಿ ಮಾಂಸ ಮಾರಾಟ ಕೇಂದ್ರಗಳು
ಗ್ರಾಹಕರಿಂದ ತುಂಬಿದ ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯಲ್ಲಿನ ಕುರಿ–ಕೋಳಿ ಮಾಂಸ ಮಾರಾಟ ಕೇಂದ್ರಗಳು   

ಚಿತ್ರದುರ್ಗ: ಜಿಲ್ಲೆಯಾದ್ಯಂತ ಮಂಗಳವಾರ ಯುಗಾದಿ ‘ಹೊಸ ವರ್ಷದ ತೊಡಕಿನ’ ಸಂಭ್ರಮ ಕಳೆಗಟ್ಟಿತು. ಬೆಳಿಗ್ಗೆಯಿಂದಲೇ ಮಟನ್‌ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂದಿತು.

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ, ಸೋಮವಾರ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿತ್ತು. ಮಂಗಳವಾರ ನೀರು ಎರಚುವ ಹಬ್ಬದ ಜತೆಗೆ ಬಾಡೂಟದೊಂದಿಗೆ ‘ಹೊಸ ವರ್ಷದ ತೊಡಕು’ ಆಚರಿಸಲಾಯಿತು.

ಹಬ್ಬದ ಮಾರನೇ ದಿನ ವರ್ಷ ತೊಡಕು ಆಚರಿಸುವುದು ರೂಢಿ. ಅದರಂತೆ ಮಂಗಳವಾರ ಹೊಸ ವರ್ಷದ ತೊಡಕಿಗೆ ಸಿದ್ಧವಾದ ಜನರು ಮುಂಜಾನೆಯೇ ಮಾಂಸ ಖರೀದಿಗಾಗಿ ಅಂಗಡಿಗಳ ಎದುರು ಸರತಿ ಸಾಲಿನಲ್ಲಿ ಕಾಯುತ್ತಿದ್ದರು.

ADVERTISEMENT

ನಗರದ ಜೋಗಿಮಟ್ಟಿ ರಸ್ತೆ, ಕರುವಿನಕಟ್ಟೆ ರಸ್ತೆ, ಹೊಳಲ್ಕೆರೆ ರಸ್ತೆ, ಮಟನ್‌ ಮಾರುಕಟ್ಟೆಯ ಸುತ್ತಮುತ್ತಲಿನ ಕೋಳಿ, ಮೀನು ಹಾಗೂ ಕುರಿ ಮಾಂಸದ ಅಂಗಡಿಗಳು ಗ್ರಾಹಕರಿಂದ ಗಿಜಿಗುಡುತ್ತಿದ್ದವು. ಕೋಳಿ, ಕುರಿ ಮಾಂಸ ಹಾಗೂ ಮೀನಿನ ಅಂಗಡಿ ಮಾಲೀಕರು ನಸುಕಿನಲ್ಲೇ ಮಳಿಗೆಗಳ ಬಾಗಿಲು ತೆರೆದು ವಹಿವಾಟು ಆರಂಭಿಸಿದರು. ಗ್ರಾಮೀಣ ಭಾಗದಲ್ಲಿ ಕುರಿ ಹಾಗೂ ಮೇಕೆಗಳನ್ನು ಕೊಯ್ದು ಗುಡ್ಡೆ ಮಾಂಸ ಮಾರಾಟ ಮಾಡಲಾಯಿತು.

ತಮಗೆ ಇಷ್ಟವಾದ ಬ್ರಾಯ್ಲರ್‌, ಫಾರಂ, ನಾಟಿಕೋಳಿ, ಕುರಿ ಮಾಂಸ, ತಲೆ, ಕಾಲು, ಮೀನು ಖರೀದಿಸಿದರು. ಒಮ್ಮೆಲೆ ಹೆಚ್ಚು ಗ್ರಾಹಕರು ಜಮಾಯಿಸಿದ್ದರಿಂದ ಮಾಂಸದ ಅಂಗಡಿಗಳಲ್ಲಿ ನೂಕುನುಗ್ಗಲು ಉಂಟಾಯಿತು.

‘ಹೊಸ ವರ್ಷದ ತೊಡಕಿನ’ ನಿಮಿತ್ತ ಕೋಳಿ ಮತ್ತು ಕುರಿ ಮಾಂಸದ ಬೆಲೆ ಜತೆಗೆ ಕೊತ್ತಂಬರಿ ಸೊಪ್ಪು, ಪುದಿನ ಸೊಪ್ಪಿನ ಬೆಲೆ ಸಹ ಏರಿಕೆಯಾಗಿತ್ತು. ಆದರೆ ಯಾವುದಕ್ಕೂ ತಲೆ ಕಡೆಸಿಕೊಳ್ಳದ ಗ್ರಾಹಕರು ಖರೀದಿಯಲ್ಲಿ ತಲ್ಲಿನರಾಗಿದ್ದರು. ಸೌತೆಕಾಯಿ, ಈರುಳ್ಳಿ, ನಿಂಬೆ ಹಣ್ಣು ವ್ಯಾಪಾರ ಸಹ ಭರ್ಜರಿಯಾಗಿ ನಡೆಯಿತು.

ಮಾರುಕಟ್ಟೆಯಲ್ಲಿ ಗ್ರಾಮೀಣ ಪ್ರದೇಶದಿಂದ ರೈತರು ತಂದಿದ್ದ ನಾಟಿ ಕೋಳಿಗಳು ಕ್ಷಣ ಮಾತ್ರದಲ್ಲಿ ಮಾರಾಟವಾದವು. ಬಹುತೇಕ ಕುರಿ ಹಾಗೂ ಕೋಳಿ ಮಾಂಸದ ಅಂಗಡಿ ಮಾಲೀಕರು ಗ್ರಾಹಕರಿಂದ ಮುಂಗಡ ಹಣ ಪಡೆದು ನಂತರ ಮಾಂಸ ವಿತರಿಸಿದರು.

ಮಟನ್‌ ಕೈಮಾ, ಮಟನ್‌ ಕರಿ, ಪ್ರೈ, ಬಿರಿಯಾನಿ, ಪಿಶ್‌ ಕಬಾಬ್‌, ಚಿಕನ್‌ ಮಸಾಲ, ನಾಟಿಕೋಳಿ ಸಾರು, ಮಾಂಸದ ಸಾರು, ಮುದ್ದೆ ಸೇರಿದಂತೆ ಬಗೆ ಬಗೆಯ ಮಾಂಸದ ಖಾದ್ಯಗಳ ಅಡುಗೆ ಮಾಡಿ ಗಮಗಮ ಬಾಡೂಟ ಸವಿದು ಸಂಭ್ರಮಿಸಿದರು. ಮನೆಯವರೆಲ್ಲರೂ ಒಟ್ಟಿಗೆ ಕುಳಿತು ನಗುನಗುತ್ತಾ ಇಡೀ ದಿನ ಕಾಲ ಕಳೆದರು.

ಚಿತ್ರದುರ್ಗದ ಬುರುಜನಹಟ್ಟಿಯಲ್ಲಿ ನೀರೆರಚುವ ಹಬ್ಬದ ಸಂಭ್ರಮ

ನೀರೆರಚುವ ಸಂಭ್ರಮ

ಯುಗಾದಿ ಹೊಸ ವರ್ಷಾಚರಣೆಯಲ್ಲಿ ಚಂದ್ರನನ್ನು ನೋಡಿದ ಮರುದಿನ ಹಿರಿಯರು ಕಿರಿಯರು ನೀರೆರಚುವ ಹಬ್ಬದಾಟವನ್ನು ಸಡಗರದಿಂದ ಆಚರಿಸಿದರು. ನಗರದ ಕರುವಿನಕಟ್ಟೆ ವೃತ್ತ ಜೋಗಿಮಟ್ಟಿ ರಸ್ತೆ ಬುರುಜನಹಟ್ಟಿ ನೆಹರು ನಗರ ಬುದ್ಧ ನಗರ ಕೋಳಿ ಬುರುಜನಹಟ್ಟಿ ಕಬೀರಾನಂದ ನಗರ ಮುನ್ಸಿಪಲ್‌ ಕಾಲನಿ ಬಸವೇಶ್ವರ ಚಿತ್ರಮಂದಿರದ ರಸ್ತೆ ದವಳಗಿರಿ ಬಡಾವಣೆ ಮಾಳಪ್ಪನಹಟ್ಟಿ ಸೇರಿದಂತೆ ನಾನಾ ಕಡೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.