ADVERTISEMENT

ಚಿತ್ರದುರ್ಗ: ಪಿಎಫ್‌ಐ, ಎಸ್‌ಡಿಪಿಐ ನಿಷೇಧಕ್ಕೆ ಆಗ್ರಹ

ಗಲಭೆಕೋರರಿಂದ ಆಸ್ತಿನಷ್ಟ ವಸೂಲಿಗೆ ಬಜರಂಗದಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 16:28 IST
Last Updated 13 ಆಗಸ್ಟ್ 2020, 16:28 IST
ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಬಜರಂಗದಳದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಬಜರಂಗದಳದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.   

ಚಿತ್ರದುರ್ಗ: ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಪುಲಕೇಶಿ ನಗರದಲ್ಲಿ ನಡೆದ ಗಲಭೆಯಲ್ಲಿ ಉಂಟಾಗಿರುವ ಆಸ್ತಿ ನಷ್ಟದ ಮೊತ್ತವನ್ನು ಆರೋಪಿಗಳಿಂದ ವಸೂಲಿ ಮಾಡಬೇಕು ಎಂದು ಒತ್ತಾಯಿಸಿ ಬಜರಂಗದಳದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಹಾಗೂ ಪಾಪ್ಯುಲರ್‌ ಫ್ರೆಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ನಿಷೇಧಿಸುವಂತೆ ಆಗ್ರಹಿಸಿದರು.

ಬೆಂಗಳೂರಿನಲ್ಲಿ ನಡೆದ ಗಲಭೆ ಪೂರ್ವ ನಿಯೋಜಿತ. ಘಟನೆ ಏಕಾಏಕಿ ನಡೆದಿಲ್ಲ ಎಂಬುದಕ್ಕೆ ಸಾಕಷ್ಟು ಪುರಾವೆ ಸಿಕ್ಕಿವೆ. ದೂರು ನೀಡುವ ನೆಪದಲ್ಲಿ ಠಾಣೆ ಬಳಿಗೆ ಬಂದವರು 10 ನಿಮಿಷದಲ್ಲಿ ಗಲಾಟೆ ಆರಂಭಿಸಿದ್ದಾರೆ. ವಾಹನಗಳಿಗೆ ಬೆಂಕಿ ಹಾಕಿ, ಕಟ್ಟಡಗಳನ್ನು ಧ್ವಂಸಗೊಳಿಸಿದ್ದಾರೆ. ಹಿಂದೂ ಧರ್ಮೀಯರ ಮನೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಗಲಭೆಯ ಹಿಂದೆ ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳ ಕೈವಾಡವಿದೆ. ಈ ಎರಡೂ ಸಂಘಟನೆಗಳ ಮುಖಂಡರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಗಲಭೆಗೆ ಆರ್ಥಿಕ ನೆರವು ನೀಡಿದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು. ಘಟನೆಗೆ ಕುಮ್ಮಕ್ಕು ನೀಡಿದ ಜನಪ್ರತಿನಿಧಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಜನಪ್ರತಿನಿಧಿ ಎಂಬಂತೆ ವರ್ತನೆ ಮಾಡಿಲ್ಲ. ಪೊಲೀಸರಿಗೆ ಸರಿಯಾದ ಮಾಹಿತಿ ನೀಡದೇ ಇರುವುದು ಗಲಭೆ ತೀವ್ರಗೊಳ್ಳಲು ಕಾರಣವಾಗಿದೆ. ಈ ಪ್ರಕರಣದ ತನಿಖೆಯ ಹೊಣೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಬೇಕು ಎಂದು ಒತ್ತಾಯಿಸಿದರು.

ಬಜರಂಗದಳದ ವಿಭಾಗ ಸಂಚಾಲಕ ಪ್ರಭಂಜನ್‌, ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಬದ್ರಿನಾಥ್‌, ಬಜರಂಗದಳ ಜಿಲ್ಲಾ ಸಂಚಾಲಕ ಸಂದೀಪ್‌, ಜಿಲ್ಲಾ ಗೋರಕ್ಷಕ ಪ್ರಮುಖ ಪಿ.ರುದ್ರೇಶ್, ನಗರ ಘಟಕದ ಅಧ್ಯಕ್ಷ ಶ್ರೀನಿವಾಸ್‌, ಮುಖಂಡರಾದ ವಿಠಲ್‌, ರಂಗಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.