
ಚಳ್ಳಕೆರೆ: ಬಳ್ಳಾರಿಯಲ್ಲಿ ಈಚೆಗೆ ನಡೆದ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಜಿಲ್ಲಾ ಘಟಕದ ಕಾರ್ಯಕರ್ತರು ಮಂಗಳವಾರ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ರೈತ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ‘ಬಳ್ಳಾರಿಯಲ್ಲಿ ಈಚೆಗೆ ನಡೆದ ಗಲಭೆಯಲ್ಲಿ ಖಾಸಗಿ ಅಂಗರಕ್ಷಕರು ಜನರ ಮೇಲೆ ಗುಂಡಿನ ದಾಳಿ ನಡೆಸಿರುವುದು ಪೊಲೀಸ್ ಅವ್ಯವಸ್ಥೆಯನ್ನು ಎತ್ತಿ ತೋರುತ್ತದೆ’ ಎಂದು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ರುದ್ರಮ್ಮನಹಳ್ಳಿ ತಿಪ್ಪೇಸ್ವಾಮಿ ಮಾತನಾಡಿ, ‘ಕಾಂಗ್ರೆಸ್ ಬೆಂಬಲದಿಂದಲೇ ಬಳ್ಳಾರಿಯಲ್ಲಿ ಗಲಭೆ ನಡೆದಿದೆ. ಈ ಪ್ರಕರಣದ ನೆಪದಲ್ಲಿ ಅಮಾನತ್ತುಗೊಳಿಸಿರುವ ರಕ್ಷಣಾ ಅಧಿಕಾರಿಯನ್ನು ಕರ್ತವ್ಯಕ್ಕೆ ಹಾಜರಾಗಲು ಕೂಡಲೇ ಸೂಚನೆ ನೀಡಬೇಕು. ಗಲಭೆಯಲ್ಲಿ ಮೃತಪಟ್ಟ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಇಲ್ಲವೇ ₹ 1 ಕೋಟಿ ಪರಿಹಾರ ನೀಡಬೇಕು’ ಎಂದು ಮನವಿ ಮಾಡಿದರು.
ಮನ್ನೇಕೋಟೆ ತಿಪ್ಪೆರುದ್ರಪ್ಪ, ರೈತ ಮುಖಂಡ ಟಿ.ಗಂಗಾಧರ, ಹಿರೇಹಳ್ಳಿ ನಾಗೆಂದ್ರಪ್ಪ ಮಾತನಾಡಿದರು. ಮನವಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ತಹಶೀಲ್ದಾರ್ ರೇಹಾನ್‍ಪಾಷ ಕಾರ್ಯಕರ್ತರಿಗೆ ಭರವಸೆ ನೀಡಿದರು.
ರೈತ ಸಂಘದ ಕಾರ್ಯಕರ್ತ ಐನಹಳ್ಳಿ ವೀರೇಶ್, ಪಾಲನಾಯಕನಕೋಟೆ ತಿಪ್ಪೇಸ್ವಾಮಿ, ಹಿರೇಹಳ್ಳಿ ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ಮರ್ಲಹಳ್ಳಿ ರವಿಕುಮಾರ್, ಓಬ್ಯಾನಾಯ್ಕ, ಕೆ.ಟಿ.ತಿಪ್ಪೇಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.