ADVERTISEMENT

ಕಾಲಭೈರವೇಶ್ವರಸ್ವಾಮಿ ರಥೋತ್ಸವ ರದ್ದು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 4:48 IST
Last Updated 26 ಏಪ್ರಿಲ್ 2021, 4:48 IST
ಹಿರಿಯೂರು ತಾಲ್ಲೂಕಿನ ವದ್ದೀಗೆರೆ ಗ್ರಾಮಕ್ಕೆ ತಹಶೀಲ್ದಾರ್ ಜಿ.ಎಚ್. ಸತ್ಯನಾರಾಯಣ್, ಸಿಪಿಐ ರಾಘವೇಂದ್ರ ಭೇಟಿ ನೀಡಿ ಪರಿಶೀಲಿಸಿದರು.
ಹಿರಿಯೂರು ತಾಲ್ಲೂಕಿನ ವದ್ದೀಗೆರೆ ಗ್ರಾಮಕ್ಕೆ ತಹಶೀಲ್ದಾರ್ ಜಿ.ಎಚ್. ಸತ್ಯನಾರಾಯಣ್, ಸಿಪಿಐ ರಾಘವೇಂದ್ರ ಭೇಟಿ ನೀಡಿ ಪರಿಶೀಲಿಸಿದರು.   

ಹಿರಿಯೂರು: ಸೋಮವಾರ ನಡೆಯಬೇಕಿದ್ದ ತಾಲ್ಲೂಕಿನ ಐಮಂಗಲ ಹೋಬಳಿಯ ವದ್ದೀಗೆರೆ ಗ್ರಾಮದ ಕಾಲಭೈರವೇಶ್ವರಸ್ವಾಮಿ (ಸಿದ್ದೇಶ್ವರಸ್ವಾಮಿ) ಜಾತ್ರಾ ಮಹೋತ್ಸವವನ್ನು ರದ್ದು ಪಡಿಸಿದ್ದು, ತಹಶೀಲ್ದಾರ್ ಜಿ.ಎಚ್. ಸತ್ಯನಾರಾಯಣ್, ಸಿಪಿಐ ರಾಘವೇಂದ್ರ ಸಿಬ್ಬಂದಿಯೊಂದಿಗೆ ಭಾನುವಾರ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ವದ್ದೀಗೆರೆ ಜಾತ್ರೆಗೆ ಪ್ರತಿ ವರ್ಷ 2 ಲಕ್ಷದಿಂದ 3 ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ, ಚಿತ್ರದುರ್ಗ ತಾಲ್ಲೂಕಿನ ಪಂಡರಹಳ್ಳಿಗಳಲ್ಲಿ ಸರ್ಕಾರದ ಮಾರ್ಗದರ್ಶನ ಮೀರಿ ಉತ್ಸವ ನಡೆದಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಸಾಕಷ್ಟು ಮುನ್ನೆಚ್ಚರಿಕೆ ಕೈಗೊಂಡಿದ್ದು, ದೇವಸ್ಥಾನದ ಮುಖ್ಯದ್ವಾರಕ್ಕೆ ಬೀಗ ಹಾಕಲಾಗಿದೆ.

ದೇವಸ್ಥಾನದ ಸುತ್ತಮುತ್ತ, ಗ್ರಾಮದ ಆಸುಪಾಸಿನಲ್ಲಿ ಅಂಗಡಿ, ವಾಣಿಜ್ಯ ಮಳಿಗೆ ಹಾಕುವುದಕ್ಕೆ, ತಾತ್ಕಾಲಿಕ ವಸತಿ ನಿರ್ಮಾಣಕ್ಕೆ, ಗ್ರಾಮದ 3 ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ, ಸಾರ್ವಜನಿಕವಾಗಿ ಪ್ರಾಣಿಬಲಿ ಕೊಡುವುದಕ್ಕೆ ನಿಷೇಧ ವಿಧಿಸಲಾಗಿದೆ. 28ರ ವರೆಗೆ ಹೊರಗಡೆಯಿಂದ ಬರುವ ಎತ್ತಿನ ಬಂಡಿ, ಕಾರು, ಬಸ್ಸು, ದ್ವಿಚಕ್ರ ವಾಹನ, ಟ್ರ್ಯಾಕ್ಟರ್, ಗೂಡ್ಸ್ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದ್ದು, ಪೊಲೀಸರು ಗ್ರಾಮಕ್ಕೆ ಪ್ರವೇಶಿಸುವ ಮಾರ್ಗದಲ್ಲಿ ಬಿಗಿ ಕಾವಲು ಹಾಕಿದ್ದಾರೆ.

ADVERTISEMENT

ಭಕ್ತರು ಯಾವುದೇ ಕಾರಣಕ್ಕೂ ವದ್ದೀಗೆರೆ ಗ್ರಾಮಕ್ಕೆ ಬರಬಾರದು. ರಥೋತ್ಸವದಂದು ತಮ್ಮ ತಮ್ಮ ಮನೆಗಳಲ್ಲಿಯೇ ಪೂಜೆ ಸಲ್ಲಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕು. ಕೋವಿಡ್ ಎರಡನೇ ಅಲೆ ತಡೆಯುವ ನಿಟ್ಟಿನಲ್ಲಿ ತಾಲ್ಲೂಕು ಆಡಳಿತಕ್ಕೆ ಸಹಕಾರ ನೀಡಬೇಕು ಎಂದು ತಹಶೀಲ್ದಾರ್ ಜಿ.ಎಚ್. ಸತ್ಯನಾರಾಯಣ್ ಮನವಿ ಮಾಡಿದ್ದಾರೆ.

ಬೀಡಾ ಸ್ಟಾಲ್ ಮಾಲೀಕರ ವಿರುದ್ಧ ಪ್ರಕರಣ: ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಯರಬಳ್ಳಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಬೀಡಾ ಸ್ಟಾಲ್ ಮುಂದೆ ಜನರನ್ನು ಗುಂಪಾಗಿ ಸೇರಿಸಿಕೊಂಡು ವ್ಯವಹಾರ ನಡೆಸುತ್ತಿದ್ದ ಇಬ್ಬರು ಮಾಲೀಕರ ಮೇಲೆ ಪ್ರತ್ಯೇಕ ಪ್ರಕರಣ ದಾಖಲಿಸಿ, ಬಂಧಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನಗರದ ಪ್ರಧಾನ ರಸ್ತೆ, ಹುಳಿಯಾರು ರಸ್ತೆಯಲ್ಲಿ ಭಾನುವಾರ ನಿಷೇಧಾಜ್ಞೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.