ADVERTISEMENT

ನಿಜಲಿಂಗಪ್ಪ ಸ್ಮಾರಕ ರಕ್ಷಣೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2018, 14:40 IST
Last Updated 15 ಡಿಸೆಂಬರ್ 2018, 14:40 IST

ಚಿತ್ರದುರ್ಗ: ತಾಲ್ಲೂಕಿನ ಸೀಬಾರ ಸಮೀಪದಲ್ಲಿನ ರಾಷ್ಟ್ರನಾಯಕ ನಿಜಲಿಂಗಪ್ಪ ಅವರ ಸ್ಮಾರಕ ರಕ್ಷಿಸಬೇಕು ಎಂದು ಆಗ್ರಹಿಸಿ ಎಸ್‌.ಎನ್. ಟ್ರಸ್ಟ್‌ನವರು ‘ಸಕಾಲ ಮಿಷನ್’ ಆಡಳಿತಾಧಿಕಾರಿ ಕೆ. ಮಥಾಯ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಸ್ಮಾರಕದ ಮುಂಭಾಗ ಹಾಗೂ ಹಿಂಭಾಗದಲ್ಲಿ ಪ್ರಕೃತಿದತ್ತ ಗುಡ್ಡಗಾಡು ಪ್ರದೇಶಗಳಿವೆ. ಸ್ಮಾರಕದ ಸುತ್ತ 2 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಲ್ಲುಕ್ವಾರಿ ಗಣಿಗಾರಿಕೆ ನಡೆಸಬಾರದು ಎಂದು 2013 ರಲ್ಲಿ ಅಂದಿನ ಜಿಲ್ಲಾಧಿಕಾರಿ ಆದೇಶಿಸಿದ್ದರೂ ಈಗಲೂ ಮುಂದುವರೆಸಲಾಗುತ್ತಿದೆ. ಸ್ಪೋಟ ಸಂಭವಿಸಿದಾಗ ಅಲುಗಾಡಿದಂಥ ಅನುಭವ ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಲ್ಲುಕ್ವಾರಿ ಗಣಿಗಾರಿಕೆಯಿಂದ ಪ್ರತಿನಿತ್ಯ ಸಂಜೆ 6 ರಿಂದ 7 ಗಂಟೆ ಸುಮಾರಿಗೆ ಭಾರಿ ಸ್ಪೋಟ ನಡೆಯುತ್ತಲೇ ಇದೆ. ಇದರಿಂದಾಗಿ ನಿಜಲಿಂಗಪ್ಪ ಸ್ಮಾರಕವಷ್ಟೇ ಅಲ್ಲದೆ, ಸುತ್ತಮುತ್ತಲಿನ ಗ್ರಾಮಸ್ಥರಿಗೂ, ಸಮೀಪದ ಶಾಲೆಗಳಿಗೂ, ಮಾದಾರ ಚನ್ನಯ್ಯ, ಮೇದಾರ ಕೇತಯ್ಯ, ಛಲವಾದಿ, ಸೇವಾಲಾಲ್ ಗುರುಪೀಠಕ್ಕೂ, ಯೋಗವನ ಬೆಟ್ಟದ ವಿನ್ಯಾಸಕ್ಕೂ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಸ್ಪೋಟದಿಂದಾಗುವ ಅನಾಹುತಗಳ ಕುರಿತು ಮನವರಿಕೆ ಮಾಡಿಕೊಟ್ಟರು.

ADVERTISEMENT

ಸ್ಪೋಟ ತಡೆಯುವಂತೆ ಈಗಾಗಲೇ ಅನೇಕ ಜನಪ್ರತಿನಿಧಿಗಳಿಗೆ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆದು ಸ್ಮಾರಕದ ಜತೆಗೆ ಸುತ್ತಮುತ್ತಲಿನ ಎಲ್ಲ ಸ್ಥಳಗಳನ್ನು ರಕ್ಷಿಸಬೇಕು ಎಂದು ಕೋರಿದರು.

ಟ್ರಸ್ಟ್‌ನ ಸಂಯೋಜಕ ಷಣ್ಮುಖಪ್ಪ, ರುದ್ರಾಣಿ ಗಂಗಾಧರ್, ಮಹಡಿ ಶಿವಮೂರ್ತಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.