ADVERTISEMENT

ಸಾಲ– ರೈತರ ಮನೆ, ಆಸ್ತಿ ಜಪ್ತಿ ಮಾಡುವರಿಗೆ ಬಿಸಿ ಮುಟ್ಟಿಸುತ್ತೇವೆ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 11:02 IST
Last Updated 24 ಸೆಪ್ಟೆಂಬರ್ 2022, 11:02 IST
   

ಚಿತ್ರದುರ್ಗ: ರೈತ ವಿರೋಧಿ ಕಾಯ್ದೆಗಳಿಗೆ ತಿದ್ದುಪಡಿ ತರುವುದರ ಮೂಲಕ ರೈತರಿಗೆ ಸಾಲ ತೀರಿಸುವ ಅವಕಾಶ ಮಾಡಿಕೊಟ್ಟು, ಮನೆ, ಆಸ್ತಿ ಜಪ್ತಿ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಗ್ರಾಮದ ತರಳಬಾಳು ಮಠದ ಅವರಣದಲ್ಲಿ ಶನಿವಾರ ಏರ್ಪಡಿಸಿದ್ದ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 30ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಅವರು ಮಾತನಾಡಿದರು.

'ರಾಜ್ಯದಲ್ಲಿ ಅತಿವೃಷ್ಟಿಯಿಂದ ಬೆಳೆನಷ್ಟವಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಹಣಕಾಸಿನ ಸಂಸ್ಥೆಗಳಾದ ಬ್ಯಾಂಕುಗಳು ಸಾಲ ವಸೂಲಿಗೆ ಮುಂದಾಗಿರುವುದು ಗಮನಕ್ಕೆ ಬಂದಿದೆ. ರೈತರ ಆಸ್ತಿ ಜಪ್ತಿಗೆ ನೋಟಿಸ್ ನೀಡುವ ಕಾರ್ಯಕ್ಕೆ ಅಂತ್ಯ ಹಾಡಲಾಗುವುದು' ಎಂದರು.

ADVERTISEMENT

'ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಆಗುವ ಅಂತಿಮ ಘಟ್ಟದಲ್ಲಿದೆ. ಕೇಂದ್ರ ಸಚಿವ ಸಂಪುಟದ ಅನುಮೋದನೆ ದೊರೆತ ತಕ್ಷಣವೇ ₹ 14 ಸಾವಿರ ಕೋಟಿ ನೆರವು ಸಿಗಲಿದೆ. ಈ ಯೋಜನೆ ಪೂರ್ಣಗೊಳ್ಳಲು ದೊಡ್ಡ ಹಣಕಾಸಿನ ಶಕ್ತಿ ಬರಲಿದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

'ರಾಜ್ಯದಲ್ಲಿ 14 ಲಕ್ಷ ರೈತರ ಮಕ್ಕಳಿಗೆ ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆ ಜಾರಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಕೃಷಿ ಕಾರ್ಮಿಕರು, ನೇಕಾರರು, ಮೀನುಗಾರರು, ಟ್ಯಾಕ್ಸಿ ಚಾಲಕರ ಮಕ್ಕಳು ಸೇರಿ ದುಡಿಯುವ ವರ್ಗದ ಮಕ್ಕಳಿಗೆ ರೈತವಿದ್ಯಾನಿಧಿ ಯೋಜನೆ ವಿಸ್ತರಿಸಲಾಗುವುದು .ಯಾವುದೇ ಕಾರಣಕ್ಕೂ ಹಣಕಾಸಿನ ಅಡಚಣೆಯಿಂದ ರೈತರ ಮಕ್ಕಳ ವಿದ್ಯಾಭ್ಯಾಸ ಮೊಟಕಾಗಬಾರದು' ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, 'ರಾಜ್ಯಾದ್ಯಂತ ಉತ್ತಮ ಮಳೆಯಾಗಿದೆ. ಕೆರೆ, ಕಟ್ಟೆ ಜಲಾಶಯ ತುಂಬಿವೆ. ಕೆಲವು ಭಾಗದಲ್ಲಿ ಅತಿವೃಷ್ಟಿಯಿಂದ ಬೆಳೆ ನಾಶವಾಗಿದೆ. ಬೆಳೆ ನಾಶಕ್ಕೆ ಸೂಕ್ತ ಪರಿಹಾರ ನೀಡುವ ಭರವಸೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ. ಫಸಲ್ ಬೀಮಾ ಯೋಜನೆಯಡಿ ದೇಶಾದ್ಯಂತ ರೈತರು ₹ 26 ಸಾವಿರ ಕೋಟಿ ಬೆಳೆ ವಿಮೆ ಕಂತು ಪಾವತಿ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ರೈತ ಸಮೂಹಕ್ಕೆ ₹ 1‌ ಲಕ್ಷ ಕೋಟಿ ಪರಿಹಾರ ನೀಡಲಾಗಿದೆ' ಎಂದು ಹೇಳಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ‌.ಮಧುಸ್ವಾಮಿ ಮಾತನಾಡಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದಾಗ ಪರಿಸ್ಥಿತಿ ಸರಿ ಇರಲಿಲ್ಲ. ಪ್ರವಾಹ ಹಾಗೂ ಕೋವಿಡ್ ಕಾರಣಕ್ಕೆ ಹಲವು ಸಮಸ್ಯೆ ಎದುರಿಸಬೇಕಾಯಿತು. ಅವರ ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಅವರು ಸರ್ಕಾರ ನಡೆಸುವುದು ಸುಲಭವಾಗಿ ಇರಲಿಲ್ಲ. ಯಾರು ಏನೇ ಮಾತನಾಡಬಹುದು, ಆಕಾಶಕ್ಕೆ ಏಣಿ ಹಾಕುವುದಾಗಿ ಹೇಳಬಹುದು. ಆದರೆ, ಪರಿಸ್ಥಿತಿ ಭಿನ್ನವಾಗಿದೆ. ಎಲ್ಲವನ್ನೂ ಹೇಳುತ್ತ ಕೂರುವ ಕಾಲ ಇದಲ್ಲ ಎಂದು ಹೇಳಿದರು.

'ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯ ಅವರ ಲೇಖನ ಸಂಗ್ರಹ
'ಭ್ರಷ್ಟಾಚಾರ ಮೊದಲ ಹೆಜ್ಜೆ' ಕೃತಿ ಬಿಡುಗಡೆ ಮಾಡಿದ್ದೇನೆ. ಭ್ರಷ್ಟಾಚಾರದ ಮೂಲ ನಮ್ಮೆಲ್ಲರ ಆಲೋಚನೆಯಲ್ಲಿದೆ. ವ್ಯವಸ್ಥೆ ರಾಜಕಾರಣಿಗಳನ್ನು ಭ್ರಷ್ಟರನ್ನಾಗಿ ಮಾಡುತ್ತದೆ. ಜನರು ಜನಪ್ರತಿನಿಧಿಗಳನ್ನು ಸರಿಯಾಗಿ ಆಯ್ಕೆ ಮಾಡಿದರೆ ಭ್ರಷ್ಟಾಚಾರ ಕಡಿಮೆಯಾಗುತ್ತದೆ' ಎಂದರು.

ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾಧು ಸದ್ಧರ್ಮ ವೀರಶೈವ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಗುರುವಂದನೆ ಸಲ್ಲಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು‌. ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಎಂ.ಚಂದ್ರಪ್ಪ, ಎಂ.ಬಿ.ಪಾಟೀಲ್, ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಎ.ರವೀಂದ್ರನಾಥ್, ಬೆಳ್ಳಿ ಪ್ರಕಾಶ್, ಮಾಡಾಳು ವಿರೂಪಾಕ್ಷಪ್ಪ, ಎಸ್.ವಿ.ರಾಮಚಂದ್ರಪ್ಪ, ಲಿಡ್ಕರ್ ಅಧ್ಯಕ್ಷ ಪ್ರೊ.ಲಿಂಗಣ್ಣ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಇದ್ದರು.

ಬೆಂಗಳೂರಿನ ಗಾನಗಂಗಾ ಸಂಗೀತ ವಿದ್ಯಾಲಯದ ಗೀತಾ ಬತ್ತದ್ ವಚನ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಬೇಲೂರಿನ ಪೃಥ್ವಿ, ಹೊನ್ನಾಳಿಯ ಐಶ್ವರ್ಯ ಭರತನಾಟ್ಯ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.