ADVERTISEMENT

ಬಯಲು ಸೀಮೆ ಅಭಿವೃದ್ಧಿ ಮಂಡಳಿಯಲ್ಲಿ ಅಕ್ರಮ: ಕಾರ್ಯದರ್ಶಿ ಸೇರಿ ಮೂವರು ಅಮಾನತು

​ಪ್ರಜಾವಾಣಿ ವಾರ್ತೆ
Published 31 ಜುಲೈ 2023, 23:52 IST
Last Updated 31 ಜುಲೈ 2023, 23:52 IST
   

ಚಿತ್ರದುರ್ಗ: ಸರ್ಕಾರದ ಅನುಮತಿ ಪಡೆಯದೇ ₹ 406 ಕೋಟಿ ಮೊತ್ತದ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿದ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿ, ಉಪ ಕಾರ್ಯದರ್ಶಿ ಸೇರಿ ಮೂವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶಿಸಿದೆ.

14 ಜಿಲ್ಲೆ ಹಾಗೂ 70 ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯನ್ನು ಒಳಗೊಂಡಿರುವ ಬಯಲುಸೀಮೆ ಅಭಿವೃದ್ಧಿ ಮಂಡಳಿ ಚಿತ್ರದುರ್ಗದಲ್ಲಿ ಕೇಂದ್ರ ಕಚೇರಿ ಹೊಂದಿದೆ. 2022– 23ನೇ ಸಾಲಿನಲ್ಲಿ ಸರ್ಕಾರವು ಅನುಮೋದಿಸಿ ಬಿಡುಗಡೆಗೊಳಿಸಿದ ಅನುದಾನಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿಗೆ ನಿಯಮಬಾಹಿರವಾಗಿ ಆಡಳಿತಾತ್ಮಕ ಅನುಮೋದನೆ ನೀಡಿ ಕಡತಗಳಲ್ಲಿ ತಿದ್ದುಪಡಿ ಮಾಡಿರುವುದು ಪ್ರಾಥಮಿಕ ತನಿಖಾ ವರದಿಯಿಂದ ತಿಳಿದುಬಂದಿದೆ. ಇದರ ಆಧಾರದ ಮೇಲೆ ಕಾರ್ಯದರ್ಶಿ ಶ್ರೀಧರ ಬಿ.ಭಜಂತ್ರಿ, ಉಪ ಕಾರ್ಯದರ್ಶಿ ಎಚ್‌. ಕೃಷ್ಣನಾಯ್ಕ, ದ್ವಿತೀಯ ದರ್ಜೆ ಸಹಾಯಕ ಪಾಪಯ್ಯ ಅವರನ್ನು ಜುಲೈ 27ರಂದು ಅಮಾನತುಗೊಳಿಸಲಾಗಿದೆ.

ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಸರ್ಕಾರದ ಗಮನಕ್ಕೆ ತರದೇ ಅಂದಾಜು ₹ 406 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ವೈಯಕ್ತಿಕ ಹಿತಾಸಕ್ತಿ ಮೇರೆಗೆ ಕಾರ್ಯಾದೇಶ ನೀಡಿರುವುದು ಗೊತ್ತಾಗಿದೆ. ರಾಜ್ಯ ಸರ್ಕಾರ ಜುಲೈ 20ರಂದು ಐವರು ತನಿಖಾಧಿಕಾರಿಗಳ ತಂಡ  ಪರಿಶೀಲನೆ ನಡೆಸಿದಾಗ ಅವ್ಯವಹಾರ ಬಯಲಿಗೆ ಬಂದಿತ್ತು.

ADVERTISEMENT

ಮಂಡಳಿಗೆ ವಾರ್ಷಿಕ ಬಜೆಟ್‍ನಲ್ಲಿ ₹ 40 ಕೋಟಿಯಿಂದ ₹ 50 ಕೋಟಿ ಅನುದಾನ ಕಾಯ್ದಿರಿಸಲಾಗುತ್ತದೆ. ಇದಕ್ಕೆ ವಾರ್ಷಿಕ ಕ್ರಿಯಾ ಯೋಜನೆ ತಯಾರಿಸಿ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆದ ಬಳಿಕ ಸರ್ಕಾರದ ಗಮನಕ್ಕೆ ತಂದು, ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಸರ್ಕಾರ ಕಳೆದ ವರ್ಷ ₹ 150 ಕೋಟಿ  ಅನುದಾನ ನೀಡಿತ್ತು. ಈ ಬಾರಿ ₹ 38 ಕೋಟಿ ಅನುದಾನ ನೀಡಿದೆ. ಇಷ್ಟು ಮೊತ್ತಕ್ಕೆ ಮಾತ್ರ ಕ್ರಿಯಾ ಯೋಜನೆ ತಯಾರಿಸಬೇಕಿತ್ತು. ಅಂದರೆ ಈ ವರ್ಷದ ಅನುದಾನ ಕಾಯ್ದಿರಿಸುವ ಮುನ್ನವೇ ಮಂಡಳಿ ಕಾರ್ಯದರ್ಶಿ ₹ 406 ಕೋಟಿ ಕಾಮಗಾರಿಗೆ ಕಾರ್ಯಾದೇಶ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.