
ನಾಯಕನಹಟ್ಟಿ: ಬೆಸ್ಕಾಂ ಅಧಿಕಾರಿಗಳ ಬೇಜಬ್ದಾರಿತನ ಮತ್ತು ನಿರ್ಲಕ್ಷ್ಯ ಧೋರಣೆಯ ವಿರುದ್ಧ ಶುಕ್ರವಾರ ರೈತ ಸಂಘದ ಪದಾಧಿಕಾರಿಗಳು ಮತ್ತು ರೈತರು ತಮಟೆ ಚಳವಳಿ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತ ಸಂಘರ್ಷ ಸಮಿತಿ, ಸಿಪಿಐಎಂ ಪ್ರಾಂತ ರೈತ ಸಂಘದ ನೂರಾರು ಪ್ರತಿಭಟನಕಾರರು ಶುಕ್ರವಾರ ಬೆಳಿಗ್ಗೆ ತಳಕು ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಮೆರವಣಿಗೆ ನಡೆಸಿ ನಂತರ ಬೆಸ್ಕಾಂ ಉಪವಿಭಾಗದ ಕಚೇರಿ ಆವರಣಕ್ಕೆ ಧಾವಿಸಿ ತಮಟೆ ಚಳವಳಿ ನಡೆಸಿದರು.
ಇದೇವೇಳೆ ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ‘ತಳಕು ಹೋಬಳಿಯು ನಿರಂತರವಾಗಿ ಬರಗಾಲಕ್ಕೆ ತುತ್ತಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಸ್ಕಾಂ ಅಧಿಕಾರಿಗಳು ಮಾತ್ರ ರೈತರ ಬಗ್ಗೆ ನಿರ್ಲಕ್ಷ್ಯ ತಾಳುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ತಳಕು ಹೋಬಳಿಯ ರೈತರ ಹತ್ತಾರು ಸಮಸ್ಯೆಗಳ ಈಡೇರಿಕೆಗಾಗಿ ಹಲವು ಬಾರಿ ಪ್ರತಿಭಟಿಸಿದರೂ ಅಧಿಕಾರಿಗಳು ಮಾತ್ರ ಮನವಿ ಸ್ವೀಕರಿಸಿ ಸುಮ್ಮನಾಗುತ್ತಿದ್ದಾರೆ’ ಎಂದು ದೂರಿದರು.
‘ಸರ್ಕಾರ ಹಿಂದೆ ನೀಡಿದಂತೆ ಪ್ರತಿಯೊಬ್ಬ ರೈತರಿಗೂ ಅಕ್ರಮ ಸಕ್ರಮ ಯೋಜನೆಯಲ್ಲಿ ಪ್ರತ್ಯೇಕ ವಿದ್ಯುತ್ ಪರಿವರ್ತಕಗಳನ್ನು ಒದಗಿಸಬೇಕು. ಅದರಲ್ಲೂ ತಳಕು ಹೋಬಳಿ ಮತ್ತು ಮೊಳಕಾಲ್ಮುರು ಭಾಗದ ರೈತರ ಸುಟ್ಟ ವಿದ್ಯುತ್ ಪರಿವರ್ತಕಗಳನ್ನು ಬಿ.ಜೆ.ಕೆರೆ ಟಿಸಿ ಬಂಕ್‌ನಿಂದಲೇ ದುರಸ್ತಿಗೊಳಿಸಿ ಕೊಡಬೇಕು. ಹೋಬಳಿಯಾದ್ಯಂತ ವಿದ್ಯುತ್ ಲೈನ್‌ಗಳ ಮೇಲೆ ಬೆಳೆದಿರುವ ಅನವಶ್ಯಕ ಗಿಡಗಂಟಿಗಳನ್ನು ತೆರವುಗೊಳಿಸಬೇಕು’ ಎಂದು ಆಗ್ರಹಿಸಿದರು.
‘ಕೆಲ ಬೆಸ್ಕಾಂ ಸಿಬ್ಬಂದಿ ಇಲ್ಲಸಲ್ಲದ ಸಬೂಬು ಹೇಳಿ ರೈತರಿಂದ ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ಸಿಬ್ಬಂದಿಯ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಹಿಂದೆ ಬೆಸ್ಕಾಂ ಅಧಿಕಾರಿಗಳು ನಡೆಸಿರುವ ಅಕ್ರಮಗಳ ಬಗ್ಗೆ ಇಲಾಖೆಯು ಉನ್ನತಮಟ್ಟದ ತನಿಖೆ ನಡೆಸಬೇಕು. ಪ್ರತಿ ಬಾರಿಯೂ ಪ್ರತಿಭಟನೆ ನಡೆಸಿ ನೀಡುವ ಮನವಿಪತ್ರಗಳಿಗೆ ಅಧಿಕಾರಿಗಳು ತೆಗೆದುಕೊಂಡ ಕ್ರಮದ ಬಗ್ಗೆ ಮಾಹಿತಿ ನೀಡಬೇಕು’ ಎಂದು ಆಗ್ರಹಿಸಿದರು.
ಸ್ಥಳಕ್ಕೆ ಬಂದ ಹಿರಿಯೂರು ವಿಭಾಗದ ಬೆಸ್ಕಾಂ ಕಾರ್ಯಕಾಲಕ ಎಂಜಿನಿಯರ್ ಅಶೋಕ್ ಹೆಂಡೆಗರ್, ‘ರೈತರ ಅಹವಾಲುಗಳನ್ನು ಆಲಿಸಿ ಶೀಘ್ರ ಎಲ್ಲ ಸಮಸ್ಯೆಗಳನ್ನು ಹಂತಹಂತವಾಗಿ ಈಡೇರಿಸುತ್ತೇವೆ. ರೈತರ ಸಮಸ್ಯೆಗಳಿಗೆ ಆಯಾ ಭಾಗದ ಬೆಸ್ಕಾಂ ಶಾಖಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಬೆಸ್ಕಾಂ ತಳಕು ಎಇಇ ಮಮತಾ, ಚಳ್ಳಕೆರೆ ಎಇಇ ಶಿವಪ್ರಸಾದ್, ಮೊಳಕಾಲ್ಮುರು ಇಎಎ ರಾಜು, ಸಹಾಯಕ ಎಂಜಿನಿಯರ್ ವೆಂಕಟೇಶ್, ರೈತ ಮುಖಂಡರಾದ ರವಿಕುಮಾರ್, ಪ್ರಶಾಂತ್‌ರೆಡ್ಡಿ, ಟಿ.ಗಂಗಾಧರ, ತಿಪ್ಪೇಸ್ವಾಮಿ, ರಾಜಣ್ಣ, ರಾಮಸ್ವಾಮಿ, ಹೇಮಣ್ಣ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.