
ಚಿತ್ರದುರ್ಗ: ‘ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇದ್ದ ಎಲ್ಲ ಅಡೆತಡೆಗಳು ನಿವಾರಣೆಯಾಗಿವೆ. ಫೆಬ್ರುವರಿ ಅಂತ್ಯಕ್ಕೆ ಕಾಲುವೆಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಲಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದರು.
ತಾಲ್ಲೂಕಿನ ಚಿಕ್ಕಸಿದ್ದವ್ವನಹಳ್ಳಿ ಹಾಗೂ ಗೋನೂರು ಬಳಿಯ ಅಕ್ವಾಡಕ್ಟ್ ಕಾಲುವೆ ನಿರ್ಮಾಣ ಕಾಮಗಾರಿಯನ್ನು ಭಾನುವಾರ ವೀಕ್ಷಿಸಿ ಮಾತನಾಡಿದ ಅವರು, ‘ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಹತ್ತಿರದ ವೈ ಜಂಕ್ಷನ್‌ನಿಂದ ಗೋನೂರು ಅಕ್ವಾಡಕ್ಟ್‌ವರೆಗೆ 114 ಕಿ.ಮೀ ಕಾಲುವೆ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ’ ಎಂದರು.
‘ಚಿತ್ರದುರ್ಗ ಶಾಖಾ ಕಾಲುವೆಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸುವ ಸಂದರ್ಭದಲ್ಲಿ ಕಡೂರಿನ 22, ಹೊಸದುರ್ಗದ 32, ಹೊಳಲ್ಕೆರೆಯ 30, ಹಿರಿಯೂರು ಹಾಗೂ ಚಿತ್ರದುರ್ಗದ ತಲಾ 3 ಸೇರಿ 90 ಕೆರೆಗಳಿಗೆ ಅವುಗಳ ಸಾಮರ್ಥ್ಯದ ಶೇ 50ರಷ್ಟು ನೀರು ತುಂಬಿಸಲಾಗುತ್ತದೆ. ಇದರಿಂದ ಹಿರಿಯೂರು, ಚಿತ್ರದುರ್ಗ, ಹೊಳಲ್ಕೆರೆ ಮತ್ತು ಚಳ್ಳಕೆರೆ ತಾಲ್ಲೂಕಿನ 73,946 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೌಲಭ್ಯ ದೊರಕಲಿದೆ’ ಎಂದರು.
‘ಗೋನೂರು ಬಳಿಯ 1.94 ಕಿ.ಮೀ. ಉದ್ದದ ಅಕ್ವಾಡಕ್ಟ್ ಕಾಮಗಾರಿಯನ್ನು ಆಗಸ್ಟ್ ಅಂತ್ಯಕ್ಕೆ ಪೂರ್ಣಗೊಳಿಸಿ ಜಗಳೂರು, ಮೊಳಕಾಲ್ಮುರು, ಚಳ್ಳಕೆರೆ ಮತ್ತು ಪಾವಗಡ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಲಾಗುವುದು. 120 ಅಡಿ ಎತ್ತರ ಗೋನೂರು ಅಕ್ವಾಡಕ್ಟ್ ರಾಜ್ಯದಲ್ಲಿಯೇ ಅತ್ಯಂತ ಎತ್ತರದ ಅಕ್ವಾಡಕ್ಟ್ ಆಗಿದೆ’ ಹೇಳಿದರು.
‘ವಿಶ್ವೇಶ್ವರ ಜಲ ನಿಗಮದಿಂದ ₹2,600 ಕೋಟಿ ವೆಚ್ಚದಲ್ಲಿ ಹೊಳಲ್ಕೆರೆ, ಚಿತ್ರದುರ್ಗ, ಹಿರಿಯೂರು ಹಾಗೂ ಚಳ್ಳಕೆರೆ ತಾಲ್ಲೂಕಿನಲ್ಲಿ ಹನಿ ನೀರಾವರಿ ಹಾಗೂ ಕೆರೆ ತುಂಬುವ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಟೆಂಡರ್ ಕರೆಯಲಾಗಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುತ್ತದೆ. ಯೋಜನೆಗೆ ಕೇಂದ್ರ ಸರ್ಕಾರ 2022-23ರ ಬಜೆಟ್‌ನಲ್ಲಿ ಘೋಷಿಸಿದ್ದ ₹5,300 ಕೋಟಿಯನ್ನು ಬಿಡುಗಡೆ ಮಾಡಬೇಕು’ ಎಂದು ಸುಧಾಕರ್ ಆಗ್ರಹಿಸಿದರು.
‘ಯೋಜನೆಗಾಗಿ ರಾಜ್ಯ ಸರ್ಕಾರ 2024-25ನೇ ಸಾಲಿನ ಬಜೆಟ್‌ನಲ್ಲಿ ₹1,250 ಕೋಟಿ ಅನುದಾನ ಹಂಚಿಕೆ ಮಾಡಿತ್ತು. ಇದರಲ್ಲಿ ಕೇಂದ್ರ ಸರ್ಕಾರದ ಅನುದಾನವನ್ನು ನಿರೀಕ್ಷಿಸಲಾಗಿತ್ತು. ಆದರೆ ಕೇಂದ್ರದಿಂದ ಯಾವುದೇ ಅನುದಾನ ಬರಲಿಲ್ಲ. ಆದರೆ ರಾಜ್ಯ ಸರ್ಕಾರವೇ ₹1,443 ಕೋಟಿ ಬಿಡುಗಡೆ ಮಾಡಿತ್ತು. ಇದು ಬಜೆಟ್‌ನಲ್ಲಿ ಹಂಚಿಕೆ ಮಾಡಿದ್ದಕ್ಕಿಂತಲೂ ಹೆಚ್ಚಿನ ಅನುದಾನವಾಗಿದೆ’ ಎಂದರು.
‘2025-26ನೇ ಸಾಲಿನಲ್ಲಿ ₹1,440.29 ಕೋಟಿ ಅನುದಾನ ಹಂಚಿಕೆ ಮಾಡಿದ್ದು, ಇದುವರೆಗೂ ₹520 ಕೋಟಿ ಬಿಡುಗಡೆಯಾಗಿದೆ. ಆರ್ಥಿಕ ವರ್ಷ ಪೂರ್ಣಗೊಳ್ಳಲು ಇನ್ನೂ 3 ತಿಂಗಳು ಬಾಕಿ ಇದ್ದು, ಉಳಿದ ಹಣವನ್ನು ಸಹ ಸರ್ಕಾರ ಬಿಡುಗಡೆ ಮಾಡಲಿದೆ’ ಎಂದು ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಲು ಕೋರಲಾಗುತ್ತದೆ. ಚಿತ್ರದುರ್ಗ ಶಾಖಾ ಕಾಲುವೆಯ ಕಾಮಗರಿಗೆ ಅಗತ್ಯವಿರುವ ₹ 300 ಕೋಟಿಯನ್ನು ಮಾರ್ಚ್ ಅಂತ್ಯದೊಳಗೆ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು.ಡಿ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ
‘ಯೋಜನೆ ಪೂರ್ಣಗೊಳ್ಳಲು ಇನ್ನೂ ₹10,000 ಕೋಟಿ ಅಗತ್ಯವಿದೆ. ಮುಂಬರುವ ಆಯವ್ಯಯದಲ್ಲಿ ಹೆಚ್ಚಿನ ಅನುದಾನ ನೀಡಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು’ ಎಂದು ವಿವರಿಸಿದರು.
ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ, ಮುಖ್ಯ ಎಂಜಿನಿಯರ್ ಎಫ್.ಎಚ್.ಲಮಾಣಿ, ಅಧೀಕ್ಷಕ ಎಂಜಿನಿಯರ್ ಕೆ.ಟಿ.ಹರೀಶ್, ಕಾರ್ಯಪಾಲಕ ಎಂಜಿನಿಯರ್ ಚಂದ್ರಪ್ಪ ಬಾರಿಕರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.