ಚಿತ್ರದರ್ಗ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಇಚ್ಛಾಶಕ್ತಿ ಕೊರತೆಯಿಂದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಸ್ಥಗಿತಗೊಂಡಿದೆ. ತುಂಗಭದ್ರಾ ಹಿನ್ನೀರು ಯೋಜನೆಗೆ ಎಸ್‌ಸಿಪಿ–ಟಿಎಸ್‌ಪಿ ಅನುದಾನ ಬಳಸಿದಂತೆ ಭದ್ರಾ ಮೇಲ್ದಂಡೆ ಯೂಜನೆಗೂ ಮೀಸಲು ಅನುದಾನ ಬಳಕೆ ಮಾಡಬೇಕು’ ಎಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಒತ್ತಾಯಿಸಿದರು.
'₹ 5,300 ಕೋಟಿ ಅನುದಾನ ನೀಡಲು ತಾಂತ್ರಿಕ ಮಾಹಿತಿ ಒದಗಿಸುವಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಪತ್ರಗಳ ಮೇಲೆ ಪತ್ರ ಬರೆಯುತ್ತಿದೆ. ಇನ್ನೊಂದೆಡೆ ರಾಜ್ಯ ಸರ್ಕಾರ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ. ಇದರಿಂದಾಗಿ ಬಯಲು ಸೀಮೆಯ ಜಿಲ್ಲೆಗಳಿಗೆ ನೀರುಣಿಸುವ ಮಹತ್ವಕಾಂಕ್ಷಿ ಯೋಜನೆಗಳು ಸೊರಗಿವೆ. ತುಂಗಭದ್ರಾ ಹಿನ್ನೀರು ಯೋಜನೆ ಶೀಘ್ರಗತಿಯಲ್ಲಿ ನಡೆಯುತ್ತಿದ್ದು ಎಸ್‌ಸಿಪಿ, ಎಸ್‌ಟಿಪಿ ಅನುದಾನ ನೀಡುತ್ತದೆ. ಅದರಂತೆ ಭದ್ರಾ ಮೇಲ್ದಂಡೆ ಯೋಜನೆಗೂ ಈ ಹಣ ನೀಡಬೇಕು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
‘ವಿಜಯನಗರ ಜಿಲ್ಲೆಯ ಕೂಡ್ಲಿಗಿ, ದಾವಣಗೆರೆ ಜಿಲ್ಲೆಯ ಜಗಳೂರು, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ ಹಾಗೂ ತುಮಕೂರು ಜಿಲ್ಲೆಯ ಪಾವಗಡ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಪ್ರದೇಶಗಳಿಗೆ ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಕೂಡ್ಲಿಗಿ, ಜಗಳೂರು, ಮೊಳಕಾಲ್ಮೂರು, ಚಳ್ಳಕೆರೆ ವಿಧಾನಸಭೆ ಕ್ಷೇತ್ರಗಳು ಪರಿಶಿಷ್ಟ ಪಂಗಡ, ಪಾವಗಡ ಪರಿಶಿಷ್ಟ ಜಾತಿಗೆ ಮೀಸಲಾಗಿವೆ. ಹಾಗಾಗಿ ಈ ಸಮುದಾಯಗಳಿಗೆ ಕಾಯ್ದಿಟ್ಟ ಅನುದಾನ ಬಳಕೆ ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಸಮಜಾಯಿಷಿ ನೀಡಿದೆ’ ಎಂದರು.
‘ಹಿನ್ನೀರು ಯೋಜನೆಯ ಆಲೋಚನಾ ಕ್ರಮವನ್ನು ಭದ್ರಾ ಮೇಲ್ದಂಡೆಗೂ ಪರಿಗಣಿಸಬೇಕು. ಹೊಳಲ್ಕೆರೆ, ಪಾವಗಡ (ಪರಿಶಿಷ್ಟ ಜಾತಿ), ಮೊಳಕಾಲ್ಮುರು, ಚಳ್ಳಕೆರೆ, ಜಗಳೂರು ಕ್ಷೇತ್ರ (ಪರಿಶಿಷ್ಟ ಪಂಗಡ) ಸೇರಿ ಐದು ಮೀಸಲು ಕ್ಷೇತ್ರಗಳು ಬರುತ್ತವೆ. ಚಿತ್ರದುರ್ಗ ಲೋಕಸಭೆ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಹೀಗಾಗಿ ಭದ್ರಾ ಮೇಲ್ದಂಡೆ ಕಾಮಗಾರಿಗೆ ಮೀಸಲು ಅನುದಾನ ನೀಡಲು ಸಾಧ್ಯವಿದೆ’ ಎಂದರು.
‘ಕೃಷ್ಣಾ ಜಲಭಾಗ್ಯದ ರೀತಿ ಭದ್ರಾ ಮೇಲ್ದಂಡೆಗೂ ನೀರಾವರಿ ಬಾಂಡ್ ಬಿಡುಗಡೆ ಮಾಡಿ ಸಂಪನ್ಮೂಲ ಕ್ರೋಡೀಕರಣ ಮಾಡುವಂತೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಿಸಿತ್ತು. ಈಗಲೂ ಕಾಲ ಮಿಂಚಿಲ್ಲ. ಬಾಂಡ್ ಬಿಡುಗಡೆ ಮಾಡಿದರೆ ಕೊಂಡುಕೊಳ್ಳುವವರು ಇದ್ದಾರೆ. ಸರ್ಕಾರ ಈ ಬಗ್ಗೆಯೂ ಚಿಂತಿಸಲಿ. ಭದ್ರಾ ಮೇಲ್ದಂಡೆ ಅನುದಾನ ಬಿಡುಗಡೆ ಸಂಬಂಧ ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದೇವೆ. ಈಗಾಗಲೇ ಈ ಕುರಿತು ವಕೀಲರನ್ನು ಸಂಪರ್ಕಿಸಲಾಗಿದೆ’ ಎಂದರು.
ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹಂಪಯ್ಯನ ಮಾಳಿಗೆ ಧನಂಜಯ, ಮಾಜಿ ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು, ಉಪಾಧ್ಯಕ್ಷ ಮಲ್ಲಾಪುರ ತಿಪ್ಪೇಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.