ADVERTISEMENT

ಹೊಳಲ್ಕೆರೆ| ತಾಳ್ಯ ಹೋಬಳಿ ಕೆರೆಗಳಿಗೂ ಭದ್ರಾ ನೀರು: ಶಾಸಕ ಎಂ.ಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 7:00 IST
Last Updated 23 ಜನವರಿ 2026, 7:00 IST
ಹೊಳಲ್ಕೆರೆ ತಾಲ್ಲೂಕಿನ ಶಿವಗಂಗ ಗ್ರಾಮದಲ್ಲಿ ₹1.2 ಕೋಟಿ ವೆಚ್ಚದ ಬೆಸ್ಕಾಂ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಚಂದ್ರಪ್ಪ ಚಾಲನೆ ನೀಡಿದರು.
ಹೊಳಲ್ಕೆರೆ ತಾಲ್ಲೂಕಿನ ಶಿವಗಂಗ ಗ್ರಾಮದಲ್ಲಿ ₹1.2 ಕೋಟಿ ವೆಚ್ಚದ ಬೆಸ್ಕಾಂ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಚಂದ್ರಪ್ಪ ಚಾಲನೆ ನೀಡಿದರು.   

ಹೊಳಲ್ಕೆರೆ: ಇನ್ನು ಎರಡು ತಿಂಗಳಲ್ಲಿ ತಾಳ್ಯ ಹೋಬಳಿ ಸೇರಿ ತಾಲ್ಲೂಕಿನ ಎಲ್ಲ ಕೆರೆಗಳಿಗೂ ಭದ್ರಾ ನೀರು ಹರಿಸಲಾಗುವುದು ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ತಾಲ್ಲೂಕಿನ ಶಿವಗಂಗಾ ಗ್ರಾಮದಲ್ಲಿ ₹1.2 ಕೋಟಿ ವೆಚ್ಚದ ಬೆಸ್ಕಾಂ ನೂತನ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ತಾಳ್ಯ ಹೋಬಳಿ ಭೌಗೋಳಿಕವಾಗಿ ಎತ್ತರದ ಪ್ರದೇಶದಲ್ಲಿದ್ದು, ಗುರುತ್ವಾಕರ್ಷಣೆಯಲ್ಲಿ ನೀರು ಹರಿಯುವುದಿಲ್ಲ. ಆದರೂ ತಾಳ್ಯ ಹೋಬಳಿ ಬರಪೀಡಿತ ಪ್ರದೇಶ ಎಂಬುದನ್ನು ಮನಗಂಡು ಏತನೀರಾವರಿ ಮೂಲಕ ಕೆರೆಗಳಿಗೆ ನೀರು ಹರಿಸುವ ಯೋಜನೆ ಜಾರಿಗೊಳಿಸಲಾಗಿದೆ. ಇದಕ್ಕಾಗಿ ಈಗಾಗಲೇ ಪಟ್ಟಣದ ಚಿಕ್ಕ ಕೆರೆಯಲ್ಲಿ₹130 ಕೋಟಿ ವೆಚ್ಚದಲ್ಲಿ ಜಾಕ್ ವೆಲ್ ನಿರ್ಮಿಸಿದ್ದು, 1,030 ಎಚ್‌ಪಿ ಸಾಮರ್ಥ್ಯದ ಮೂರು ಮೋಟಾರ್‌ಗಳನ್ನು ಅಳವಡಿಸಲಾಗಿದೆ. ಅಲ್ಲಿಂದ ಮಲಸಿಂಗನಹಳ್ಳಿ ಗುಡ್ಡದಲ್ಲಿ ನಿರ್ಮಿಸಿರುವ ಹೊಸ ಕೆರೆಗೆ ನೀರು ಹರಿಸಿ ಹಳೇಹಳ್ಳಿ, ಶಿವಗಂಗಾ, ತಾಳ್ಯ, ಟಿ.ಎಮ್ಮಿಗನೂರು, ಎಚ್.ಡಿ.ಪುರ, ನಂದನಹೊಸೂರು, ಕೆರೆಯಾಗಳ ಹಳ್ಳಿ ಕೆರೆಗಳಿಗೆ ನೀರು ತುಂಬಿಸಲಾಗುವುದು. ಭೂಮಿ, ಸೂರ್ಯ, ಚಂದ್ರ ಇರುವವರೆಗೆ ಈ ಕೆರೆಗಳಲ್ಲಿ ನೀರು ಇರಲಿದೆ’ ಎಂದರು.

ADVERTISEMENT

‘ರೈತರಿಗೆ ಗುಣಮಟ್ಟದ ವಿದ್ಯುತ್ ನೀಡುವ ಉದ್ದೇಶದಿಂದ ತಾಲ್ಲೂಕಿನ 17 ಕಡೆ ಪವರ್ ಸ್ಟೇಷನ್ ನಿರ್ಮಿಸಲು ಮಂಜೂರಾತಿ ಪಡೆಯಲಾಗಿದೆ. ಚಿಕ್ಕಜಾಜೂರು ಸಮೀಪದ ಕೋಟೆಹಾಳ್‌ನಲ್ಲಿ ₹500 ಕೋಟಿ ವೆಚ್ಚದಲ್ಲಿ 400 ಕೆ.ವಿ. ಸಾಮರ್ಥ್ಯದ ವಿದ್ಯುತ್ ಸ್ವೀಕರಣಾ ಕೇಂದ್ರ ನಿರ್ಮಿಸಲಾಗುವುದು. ಇದಕ್ಕೆ ಅಗತ್ಯವಾದ 13 ಎಕರೆ ಜಾಗವನ್ನು ಕೆಪಿಟಿಸಿಎಲ್‌ಗೆ ನೀಡಲಾಗಿದೆ. ಈ ಯೋಜನೆ ಜಾರಿಯಾದರೆ ನಿತ್ಯ 10 ಗಂಟೆ ಮೂರು ಫೇಸ್ ವಿದ್ಯುತ್ ಸಿಗಲಿದೆ. ಮುಂದಿನ 50 ವರ್ಷಗಳವರೆಗೆ ವಿದ್ಯುತ್ ಸಮಸ್ಯೆ ಇರುವುದಿಲ್ಲ. ತಾಲ್ಲೂಕಿನ ರೈತರು ಅಡಿಕೆ ತೋಟಗಳನ್ನೇ ನಂಬಿ ಬದುಕುತ್ತಿದ್ದು, ಈಗಲೂ ನಿತ್ಯ 6 ಗಂಟೆ ವಿದ್ಯುತ್ ನೀಡಲಾಗುತ್ತಿದೆ’ ಎಂದು ಹೇಳಿದರು.

ನಾರದಮುನಿ ವಸಂತ್ ಕುಮಾರ್, ಚಿತ್ರಹಳ್ಳಿ ಲವಕುಮಾರ್, ಗಿರೀಶ್, ಸತೀಶ್, ಮೌನೇಶ್, ಪ್ರಕಾಶ್, ದಿನೇಶ್, ಬೆಸ್ಕಾಂ ಎಇಇ ಜಯಣ್ಣ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.