
ಚಿತ್ರದುರ್ಗ: ‘ನಿಷ್ಠುರ, ನೇರ ನಡೆ-ನುಡಿ ವ್ಯಕ್ತಿತ್ವದ ಭೀಮಣ್ಣ ಖಂಡ್ರೆ ಹೋರಾಟದ ರಾಜಕಾರಣಿ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ದೇಶಕ್ಕಾಗಿ ಬದುಕನ್ನೇ ಅರ್ಪಿಸಿದ್ದರು’ ಎಂದು ಮಾಜಿ ಸಚಿವ ಎಚ್.ಆಂಜನೇಯ ಸ್ಮರಿಸಿದರು.
ಇಲ್ಲಿನ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸಂತಾಪ ಸಭೆಯಲ್ಲಿ ಭೀಮಣ್ಣ ಖಂಡ್ರೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
‘ಸ್ವಾತಂತ್ರ್ಯ ಚಳವಳಿಯಲ್ಲಿ ಮುಂಚೂಣಿಯಲ್ಲಿ ನಿಂತು ದೇಶಕ್ಕೆ ಸ್ವತಂತ್ರ ತಂದುಕೊಡುವಲ್ಲಿ ಶ್ರಮಿಸಿದ್ದರು. ದೇಶದಲ್ಲಿನ ಅಸಮಾನತೆ ವಿರುದ್ಧ ನಿರಂತರ ಹೋರಾಟ ನಡೆಸಿದ್ದು ಸ್ಮರಣೀಯ’ ಎಂದು ತಿಳಿಸಿದರು.
‘ರಾಜ್ಯ, ದೇಶದಲ್ಲಿ ಅನೇಕ ರಾಜಕಾರಣಿಗಳು ಆಡಳಿತ ನಡೆಸಿ ಕಣ್ಮರೆ ಆಗಿದ್ದಾರೆ. ಆದರೆ, ಭೀಮಣ್ಣ ಖಂಡ್ರೆ ಅಗಲಿಕೆ ಬಳಿಕವೂ ಜೀವಂತವಾಗಿ ಉಳಿಯಲಿದ್ದಾರೆ. ಹೈದ್ರಾಬಾದ್ ಕರ್ನಾಟಕಕ್ಕೆ ಅನುದಾನ, ಅಭಿವೃದ್ಧಿ ವಿಷಯದಲ್ಲಿ ಆಗುತ್ತಿದ್ದ ಅನ್ಯಾಯದ ವಿರುದ್ಧ ಸಿಡಿದೆದ್ದು ಜೀವ ಇರುವವರೆಗೂ ಹೋರಾಟ ನಡೆಸಿದ್ದು ಮಾದರಿ. ಮೈಸೂರು ಭಾಗಕ್ಕೆ ಹೆಚ್ಚು ಅನುದಾನ, ಅಭಿವೃದ್ಧಿಗೆ ಮನ್ನಣೆ ನೀಡುವುದು, ಇತರೆ ಪ್ರದೇಶಗಳನ್ನು ಕಡೆಗಣಿಸುವುದನ್ನು ಖಂಡ್ರೆ ಸದಾ ವಿರೋಧಿಸುತ್ತಿದ್ದರು’ ಎಂದರು.
‘ಪ್ರಜಾಪ್ರಭುತ್ವದಲ್ಲಿ ಯಾವುದೇ ವರದಿ, ಕಾನೂನು ಜಾರಿಗೊಳಿಸುವ ಮುನ್ನ ಚರ್ಚೆ ನಡೆಸಬೇಕು. ಬಳಿಕ ಸಾಧಕ-ಬಾಧಕ ವಿಮರ್ಶೆ ನಂತರ ರಾಜ್ಯ, ಸಮುದಾಯಕ್ಕೆ ಉತ್ತಮವಾಗುವುದು ಖಚಿತಗೊಂಡಲ್ಲಿ ಅನುಷ್ಠಾನಗೊಳಿಸಬೇಕು. ಆದರೆ, ಹಾವನೂರು ವರದಿ ಜಾರಿ ವಿಷಯದಲ್ಲಿ ಏಕಪಕ್ಷೀಯ ನಿರ್ಧಾರ ಸರಿಯಲ್ಲ ಎಂದು ತಮ್ಮ ಸಿಟ್ಟನ್ನು ಮುಖ್ಯಮಂತ್ರಿ ವಿರುದ್ಧವೇ ಬಹಿರಂಗವಾಗಿ ಹೊರಹಾಕಿದ್ದರು’ ಎಂದು ತಿಳಿಸಿದರು.
‘ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ ಸಮುದಾಯದಲ್ಲಿ ಜಾಗೃತಿ ಮೂಡಿಸಿದ್ದರು. ಶಿಕ್ಷಣ, ಉದ್ಯೋಗ ಸೇರಿ ವಿವಿಧ ರೀತಿ ಮುಖ್ಯವಾಹಿನಿಗೆ ತರಲು, ಮೀಸಲು ಸೌಲಭ್ಯ ಕಲ್ಪಿಸಲು ಶ್ರಮಿಸಿದರು. ಅವರೊಬ್ಬ ಅಪರೂಪದ, ಹೋರಾಟದ ರಾಜಕಾರಣಿ’ ಎಂದು ಬಣ್ಣಿಸಿದರು.
‘ತಮ್ಮ ಸಮುದಾಯ, ಪ್ರದೇಶಕ್ಕೆ ಅನ್ಯಾಯ ಆಗುವುದನ್ನು ಖಂಡ್ರೆ ಸಹಿಸಿಕೊಳ್ಳುತ್ತಿರಲಿಲ್ಲ. ಎಲ್.ಜಿ.ಹಾವನೂರು ವರದಿ ಜಾರಿಗೊಳಿಸಲು ದೇವರಾಜ ಅರಸು ಮುಂದಾಗುತ್ತಿದ್ದಂತೆ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಬೇಕೆಂದು ಪಟ್ಟು ಹಿಡಿದಿದ್ದರು. ಅವಕಾಶ ನೀಡದಿದ್ದ ಸಂದರ್ಭ ವರದಿ ಪ್ರತಿ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು’ ಎಂದು ನೆನಪಿಸಿಕೊಂಡರು.
‘103 ವರ್ಷಗಳ ಕಾಲ ಬದುಕಿದ ಭೀಮಣ್ಣ ಖಂಡ್ರೆ ಅವರ ಬದುಕು ನಮಗೆ ಮಾದರಿ ಆಗಬೇಕು. ಅವರಲ್ಲಿದ್ದ ಶಿಸ್ತು, ಬದ್ಧತೆ, ಪಕ್ಷನಿಷ್ಠೆಯನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಹೇಳಿದರು.
ಗ್ಯಾರಂಟಿ ಯೋಜನೆ ಅನುಷ್ಠಾನದ ಜಿಲ್ಲಾ ಘಟಕದ ಅಧ್ಯಕ್ಷ ಶಿವಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಿ.ಪಿ.ಪ್ರಕಾಶಮೂರ್ತಿ, ಆರತಿ ಮಹಡಿ, ಆರ್.ನರಸಿಂಹರಾಜು, ಮುಖಂಡರಾದ ಕುಮಾರಸ್ವಾಮಿ, ಡಿ.ಎನ್.ಮೈಲಾರಪ್ಪ, ಕೆ.ಪಿ.ಸಂಪತ್ ಕುಮಾರ್, ಮುನಿರಾ, ಆರ್.ಕೆ.ಸರ್ದಾರ್, ಅನಿಲ್ ಕೋಟಿ, ರವೀಂದ್ರ, ತಿಪ್ಪೇಸ್ವಾಮಿ, ಚೇತನ್ ಇದ್ದರು.
ಭೀಮಣ್ಣ ಖಂಡ್ರೆ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿದ್ದರೂ ಎಲ್ಲ ವರ್ಗ-ಧರ್ಮದ ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು. ಯಾವುದೇ ಜಾತಿಗೆ ಅನ್ಯಾಯವಾದರೂ ಖಂಡಿಸುತ್ತಿದ್ದರುಎಚ್.ಆಂಜನೇಯ ಮಾಜಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.