ಚಿತ್ರದುರ್ಗ: ಇಂಪಾದ ಚಿತ್ರಗೀತೆಗಳು, ಭರತನಾಟ್ಯದ ಹೆಜ್ಜೆ ಹೆಜ್ಜೆಗಳು, ಪಾಶ್ಚಾತ್ಯ ನೃತ್ಯ, ಅಮ್ಮನ ಕುರಿತಾದ ಕವನ ವಾಚನ, ಘಮಘಮಿಸುವ ಅಡುಗೆ, ರಸಪ್ರಶ್ನೆ, ಬಹುಮಾನ...ಇವುಗಳ ಜೊತೆಗೆ ಮಹಿಳೆಯರ ಆರೋಗ್ಯದ ಕಾಳಜಿ ಮಾತುಗಳು.
‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಶನಿವಾರ ನಗರದ ದುರ್ಗದ ಸಿರಿ ಹೋಟೆಲ್ ಸಭಾಂಗಣದಲ್ಲಿ ನಡೆದ ಭೂಮಿಕಾ ಕ್ಲಬ್ ಕಾರ್ಯಕ್ರಮದಲ್ಲಿ ಕಂಡುಬಂದ ವಿಶೇಷತೆಗಳಿವು. ‘ಫ್ರೀಡಂ ಆಯಿಲ್’ ಸಹಯೋಗದಲ್ಲಿ ನಡೆದ ಕಾರ್ಯಕ್ರಮ ಮಹಿಳೆಯರ ಪ್ರತಿಭೆಗೆ ವೇದಿಕೆ ಒದಗಿಸಿತು. 2 ಗಂಟೆಗೂ ಹೆಚ್ಚು ಕಾಲ ನಡೆದ ಸಮಾರಂಭ ವಿವಿಧ ಚಟುವಟಿಕೆಗಳ ಮೂಲಕ ಮಹಿಳೆಯರು ಮನಸೂರೆಗೊಂಡಿತು.
ಮಹಿಳೆಯರು ಎಲ್ಲವನ್ನೂ ಮರೆತು ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾಗಿ ಬಹುಮಾನ ಗೆದ್ದರು. ನೃತ್ಯ, ಹಾಡುಗಳನ್ನು ಮನಸಾರೆ ಅನುಭವಿಸಿ ಆನಂದಿಸಿದರು. ಮಹಿಳೆಯರಿಂದ, ಮಹಿಳೆಯರಿಗಾಗಿ, ಮಹಿಳೆಯರಿಗೋಸ್ಕರ ನಡೆದ ಈ ಕಾರ್ಯಕ್ರಮ ಹಲವು ಚಟುವಟಿಕೆಗಳಿಗೆ ಸಾಕ್ಷಿಯಾಯಿತು. ರಸಪ್ರಶ್ನೆಗಳಿಗೆ ತಟ್ಟನೆ ಉತ್ತರ ನೀಡಿ ತಮ್ಮ ಪ್ರತಿಭೆ ತೋರಿದರು.
ಆರಂಭದಲ್ಲಿ ಗಾಯಕ ಎ.ಸತ್ಯನಾರಾಯಣ ಅವರು ಚಿತ್ರಗೀತೆಗಳನ್ನು ಹಾಡಿ ಸಮಾರಂಭಕ್ಕೆ ರಂಗು ತುಂಬಿದರು. ‘ಮನಮೆಚ್ಚಿದ ಮಡದಿ’ ಚಿತ್ರದ ‘ತುಟಿಯ ಮೇಲೆ ತುಂಟ ಕಿರುನಗೆ’ ಗೀತೆ, ‘ರಾಜ ನನ್ನ ರಾಜ’ ಚಿತ್ರದ ‘ನಿನದೇ ನೆನಪು ದಿನವೂ ಮನದಲ್ಲಿ’ ಗೀತೆಗಳು ಗಮನ ಸೆಳೆದವು. ನಂತರ ನಡೆದ ಚಟುವಟಿಕೆಯಲ್ಲಿ ‘ಕುದುರೆ ಓಡುತ್ತೆ, ಕಂಕುಮ ಚೆಲ್ಲುತ್ತೆ’ ಪದಪುಂಜವನ್ನು ವೇಗಗತಿಯಲ್ಲಿ ಹೇಳಿ ಬಹುಮಾನ ಪಡೆಯಲು ಹಲವು ಮಹಿಳೆಯರು ಪ್ರಯತ್ನಿಸಿದರು. ಅವರ ತೊದಲು ನುಡಿ ತುಟಿಯ ಮೇಲೆ ನಗು ತರಿಸಿತು.
ಲಾಸಿಕಾ ಫೌಂಡೇಷನ್ ಕಲಾವಿದೆಯರು ಹೊಸತನದ ಗೀತೆಗಳಿಗೆ ಭರತನಾಟ್ಯ ಮಾಡಿದರು. ವಿಘ್ನನಿವಾರಕನಿಗೆ ಸ್ತುತಿ ಮೂಲಕ ನಮನ ಸಲ್ಲಿಸಿದ ಕಲಾವಿದೆಯರು ಕುವೆಂಪು ಅವರ ಭೈರವಿ ನಾರಿ ಕಾವ್ಯಕ್ಕೆ ಹೆಜ್ಜೆ ಹಾಕಿದರು. ಕಲಾವಿದೆಯರ ಹೆಜ್ಜೆಗಳು ನೋಡುಗರ ಮನಸೂರೆಗಳ್ಳುವಲ್ಲಿ ಯಶಸ್ವಿಯಾದವು. ವಿದ್ವಾನ್ ಮಂಜುನಾಥ್ ಭಾಗವತ್ ಅವರ ಶಿಷ್ಯೆಯರು ಭರತನಾಟ್ಯದ ಮೂಲಕ ಕಾರ್ಯಕ್ರಮದ ಬೆಳಗು ಹೆಚ್ಚಿಸಿದರು.
ಯುವ ಕವಯಿತ್ರಿ ಸೌಮ್ಯಾ ಬನ್ನಾಡಿ ಅವರು ವಾಚಿಸಿದ ‘ಅಮ್ಮ’ ಕವಿತೆ ಭಾವುಕ ಸನ್ನಿವೇಶ ಸೃಷ್ಟಿಸಿತು. ಪ್ರಸ್ತತ ಸನ್ನಿವೇಶದಲ್ಲಿ ಮಹಿಳೆ ಅನುಭವಿಸುತ್ತಿರುವ ಸಮಸ್ಯೆಗಳನ್ನು ಪದ್ಯ ವಾಚನದ ಮೂಲಕ ಅನಾವರಣಗೊಳಿಸಿದರು. ನಿಸರ್ಗ ಅವರು ವಿವಿಧ ಚಿತ್ರಗೀತೆಗಳಿಗೆ ನೃತ್ಯ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡರು. ಕಲ್ಪನಾ ಮಂಜುನಾಥ್ ಅವರು ಹಾಡಿದ ‘ನಾನೊಂದು ಜೀವನದಿ ಹೆಣ್ಣು ನನ್ನ ಹೆಸರು’ ಭಾವಗೀತೆ ಮಹಿಳಾ ಧ್ವನಿಯನ್ನು ಪ್ರತಿಧ್ವನಿಸಿತು.
ಉಪ್ಪಿಟ್ಟಿನ ಸವಿ: ಅಡುಗೆ ಸ್ಪರ್ಧೆಗಾಗಿ ಹಲವು ಮಹಿಳೆಯರು ಹೆಸರು ನೋಂದಣಿ ಮಾಡಿಸಿಕೊಂಡಿದ್ದರು. ಲಾಟರಿ ಮೂಲಕ ಇಬ್ಬರ ಹೆಸರು ಮಾತ್ರ ಆಯ್ಕೆ ಮಾಡಲಾಯಿತು. ಅನಸೂಯಮ್ಮ ಮತ್ತು ಹೇಮಲತಾ ನಡುವೆ ಸ್ಥಳದಲ್ಲೇ ಉಪ್ಪಿಟ್ಟು ತಯಾರಿಸುವ ಸ್ಪರ್ಧೆ ನಡೆಯಿತು. ಕೇವಲ 10 ನಿಮಿಷದಲ್ಲಿ ಇಬ್ಬರೂ ಉಪ್ಪಿಟ್ಟು ತಯಾರಿಸಿದರು.
ಮಹಾಂತಮ್ಮ, ಶರ್ಮಿಳಾ, ಪ್ರಮೀಳಾ ಅವರು ಇಬ್ಬರೂ ಮಾಡಿದ್ದ ಉಪ್ಪಿಟ್ಟು ರುಚಿ ನೋಡಿ ವಿಜೇತೆಯನ್ನಾಗಿ ಅನಸೂಯಮ್ಮ ಅವರನ್ನು ಆಯ್ಕೆ ಮಾಡಿದರು. ವಿಜೇತರಿಗೆ ಪ್ರೀಡಂ ಆಯಿಲ್ ಉತ್ತರ ಕರ್ನಾಟಕ ಎಎಸ್‌ಎಂ ಕಲ್ಪೇಶ್ ಅವರು ಬಹುಮಾನ ವಿತರಣೆ ಮಾಡಿದರು. ಸಮಾರಂಭದಲ್ಲಿ ಭಾಗವಹಿಸಿದ್ದ ಇತರರು ಇಬ್ಬರೂ ತಯಾರಿಸಿದ ಉಪ್ಪಿಟ್ಟು ಸವಿದರು.
ನಗರಸಭಾ ಮಾಜಿ ಅಧ್ಯಕ್ಷೆ, ಸಮಾಜ ಸೇವಕಿ ಸುನೀತಾ ಮಲ್ಲಿಕಾರ್ಜುನ್ ಸಮಾರಂಭ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ‘ಭೂಮಿಯನ್ನು ಹೆಣ್ಣಿಗೆ ಹೋಲಿಕೆ ಮಾಡುತ್ತಾರೆ. ಭೂಮಿಕಾ ಹೆಸರಿನಲ್ಲಿ ಮಹಿಳೆಯರ ಕಾರ್ಯಕ್ರಮ ನಡೆಸುತ್ತಿರುವುದು ತುಂಬಾ ಸಂತಸದ ಸಂಗತಿಯಾಗಿದೆ. ಇತ್ತೀಚೆಗೆ ಮಹಿಳೆಯರಿಗಾಗಿ ಹಲವು ವೇದಿಕೆಗಳು ಸೃಷ್ಟಿಯಾಗುತ್ತಿವೆ. ಮಹಿಳೆಯರು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುತ್ತಿದ್ದಾರೆ’ ಎಂದರು.
‘ಮಹಿಳೆಯರಿಗೆ ಭದ್ರತೆ ದೊರೆತರೆ ಎಲ್ಲಾ ರೀತಿಯ ಸಾಧನೆಗಳನ್ನು ಮಾಡಲು ಶಕ್ತರಾಗಿರುತ್ತಾರೆ. ನಾವು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಸಾಧನೆ ಮಾಡಿ ತೋರಿಸುತ್ತಾರೆ. ಮಹಿಳೆಯರಿಗೆ ಪ್ರೋತ್ಸಾಹ ಬೇಕಾಗಿದೆ. ಸಮಾಜದಲ್ಲಿ ಸಂರಕ್ಷಿತೆ ಎಂಬ ಭಾವನೆ ಮೂಡಿದರೆ ಉನ್ನತ ಸಾಧನೆ ಮಾಡುತ್ತಾರೆ’ ಎಂದು ಹೇಳಿದರು.
ನಗರಸಭಾ ಮಾಜಿ ಸದಸ್ಯೆ ಶ್ಯಾಮಲಾ ಶಿವಪ್ರಕಾಶ್ ಮಾತನಾಡಿ ‘ಹೆತ್ತವಳು, ಹೊತ್ತವಳು ಭೂಮಿತಾಯಿ. ಭೂಮಿಯನ್ನು ನಾವು ದೇವರೆಂದು ಪರಿಗಣಿಸುತ್ತೇವೆ. ಮಹಿಳೆಯನ್ನೂ ಭೂಮಿಯಂತೆ ಕಾಣಲಾಗುತ್ತದೆ. ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲೂ ದುಡಿಯುತ್ತಿದ್ದಾಳೆ. ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಂಸ್ಕಾರ ನೀಡುವ ಅವಶ್ಯಕತೆ ಇದೆ’ ಎಂದರು.
‘ಇಂದು ದುಡಿಯುವ ಹೆಣ್ಣು ಮಕ್ಕಳು ತಾವೇನೂ ಕಮ್ಮಿ ಇಲ್ಲ ಎಂದು ಪ್ರತಿಷ್ಠೆಯಿಂದ ನಡೆದುಕೊಳ್ಳುತ್ತಾರೆ. ಇದೇ ಕಾರಣಕ್ಕೆ ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ತಡೆಯಬೇಕಾದರೆ ಸಂಸ್ಕಾರದ ಅವಶ್ಯಕತೆ ಇದೆ’ ಎಂದರು.
ಸಮಾರಂಭದಲ್ಲಿ ಸ್ನೇಹಾ ನೀಲಪ್ಪಗೌಡ ನಿರೂಪಣೆ ಮಾಡಿದರು. ‘ಪ್ರಜಾವಾಣಿ’ ಬ್ಯೂರೊ ಮುಖ್ಯಸ್ಥ ಸಿದ್ದಯ್ಯ ಹಿರೇಮಠ, ಜಾಹೀರಾತು ವಿಭಾಗದ ವ್ಯವಸ್ಥಾಪಕ ಪ್ರಮೋದ್ ಭಾಗವತ್ ಇದ್ದರು.
ಹೃದ್ರೋಗಕ್ಕೆ ಚಿಕಿತ್ಸೆಯುಂಟು; ಡಾ.ಕಾರ್ತಿಕ್
ಎಸ್‌ಜೆಎಂ ಹಾರ್ಟ್ ಸೆಂಟರ್‌ನ ಡಾ.ಆರ್.ಎಸ್.ಕಾರ್ತಿಕ್ ಅವರು ಮಹಿಳೆಯರ ಹೃದಯದ ಆರೋಗ್ಯದ ಬಗ್ಗೆ ಉಪನ್ಯಾಸ ನೀಡಿ ‘ಮಹಿಳೆಯರು ಸೂಕ್ತ ವ್ಯಾಯಾಮ ಉತ್ತಮ ಆಹಾರ ಅಭ್ಯಾಸದಿಂದ ಆರೋಗ್ಯ ಜೋಪಾನ ಮಾಡಿಕೊಂಡರೆ 45 ವರ್ಷದವರೆಗೆ ಹೃದಯ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ ಇತ್ತೀಚೆಗೆ ಬೇರೆ ಬೇರೆ ಆರೋಗ್ಯ ಸಮಸ್ಯೆಗಳಿಂದಾಗಿ 40 ವರ್ಷ ಒಳಗಿನವರಿಗೂ ಹೃದಯಾಘಾತಗಳು ಹೆಚ್ಚುತ್ತಿವೆ. ಆಧುನಿಕ ಚಿಕಿತ್ಸಾ ಪದ್ಧತಿಯಲ್ಲಿ ಹೃದಯ ಸಮಸ್ಯೆಗಳಿಗೆ ಉತ್ತಮ ಚಿಕಿತ್ಸೆ ದೊರೆಯುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.
‘ಸೂಕ್ತ ಸಮಯಲ್ಲಿ ಆಸ್ಪತ್ರೆಗೆ ಬಂದರೆ ಶೇ 99.5ರಷ್ಟು ಜನರ ಜೀವಗಳನ್ನು ಉಳಿಸಬಹುದು. ಹೃದಯ ಲಕ್ಷಣಗಳ ಬಗ್ಗೆ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ನಮ್ಮ ಊಟದ ಪದ್ಧತಿಯನ್ನು ಚೆನ್ನಾಗಿಟ್ಟುಕೊಳ್ಳಬೇಕು. ಬೆಳಿಗ್ಗೆ ತಿಂಡಿಯನ್ನು ಚೆನ್ನಾಗಿ ಮಾಡಬೇಕು. ಆದರೆ ಮಧ್ಯಾಹ್ನದ ಊಟ ಮಿತವಾಗಿರಬೇಕು ರಾತ್ರಿಯ ಊಟ ತೀರಾ ಕಡಿಮೆ ಇರಬೇಕು. ರಾತ್ರಿ ತಿಂದದ್ದು ದೇಹದಲ್ಲಿ ಕರಗುವುದಿಲ್ಲ. ಅದು ಕೊಬ್ಬಿನ ರೂಪ ಪಡೆದು ಆರೋಗ್ಯವನ್ನು ಕೆಡಿಸುತ್ತದೆ’ ಎಂದರು.
‘ಇತ್ತೀಚೆಗೆ ಹೃದಯ ತಪಾಸಣೆಗಳು ಸರಳವಾಗುತ್ತಿವೆ. ಹೃದಯ ಸಮಸ್ಯೆಗಳನ್ನು ಇಸಿಜಿ ಇಕೊ ಟಿಎಂಟಿ ಮೂಲಕ ಪತ್ತೆ ಹೆಚ್ಚಬಹುದು. ಹೀಗಾಗಿ ನಿಯಮಿತವಾಗಿ ಹೃದಯ ತಜ್ಞರ ಬಳಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಹೃದಯವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬೇಕು’ ಎಂದರು. ಈ ವೇಳೆ ನಡೆದ ಸಂವಾದದಲ್ಲಿ ಕಲ್ಪನಾ ಶ್ಯಾಮಲಾ ಸುಧಾ ಸೌಮ್ಯಾ ಅವರು ಆಹಾರ ವಿಹಾರದ ಬಗ್ಗೆ ವಿವಿಧ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು.
ಮತ್ತೆ ಹುಟ್ಟಿ ಬಂದ ಆರತಿ ಜಯಂತಿ!
ಸಮೃದ್ಧಿ ಮಹಿಳಾ ಸಂಘದ ಸದಸ್ಯೆಯರು ನೀಡಿದ ಸಾಂಪ್ರದಾಯಿಕ ಫ್ಯಾಷನ್ ಶೋ 80ರ ದಶಕದ ಚಿತ್ರ ನಾಯಕಿಯರನ್ನು ವೇದಿಕೆಯ ಮೇಲೆ ತರುವಲ್ಲಿ ಯಶಸ್ವಿಯಾಯಿತು. ಸಂಘಟನೆ ಸದಸ್ಯೆಯರು ನಾಯಕಿಯರನ್ನೇ ಹೋಲುವ ರೀತಿಯಲ್ಲಿ ವೇಷ ತೊಟ್ಟು ವೇದಿಕೆಯ ಮೇಲೆ ತಮ್ಮ ಪ್ರತಿಭೆ ತೋರಿಸಿದರು.
ಸರಿತಾ ರೂಪದಲ್ಲಿ ಉಮಾ ರಮೇಶ್ ಆರತಿಯಾಗಿ ಹೇಮಲತಾ ಮಂಜುನಾಥ್ ಜಯಂತಿ ರೂಪದಲ್ಲಿ ಜ್ಯೋತಿ ಶಿವಾನಂದ್ ಭವ್ಯಾ ಆಗಿ ಜ್ಯೋತಿ ರವಿ ಬಿ.ಸರೋಜಾದೇವಿಯಾಗಿ ಅಂಬಿಕಾ ಉಮೇಶ್ ಕಾಣಿಸಿಕೊಂಡರು. ಉಮಾ ರಮೇಶ್ ಅವರು ನೃತ್ಯ ಮಾಡುತ್ತಾ ನವರಸಗಳನ್ನು ಅನಾವರಣಗೊಳಿಸಿದರು. ಈ ವಿಶೇಷ ಫ್ಯಾಷನ್ ಶೋ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಎಲ್ಲರಲ್ಲೂ ಆನಂದ ಸೃಷ್ಟಿಸಿತು.
ಇದೇ ಮೊದಲ ಬಾರಿಗೆ ಭೂಮಿಕಾ ಕ್ಲಬ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಯುವತಿಯರ ಜೊತೆ ನಾನೂ ಪಾಲ್ಗೊಂಡಿದ್ದು ಮನಸ್ಸಿಗೆ ಖುಷಿ ನೀಡಿತು. ಹಾಡುಗಳು, ನೃತ್ಯ, ಫ್ಯಾಷನ್ ಶೋ ನೋಡಿ ಆನಂದಿಸಿದೆ. ಎಲ್ಲಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಒಂದೇ ವೇದಿಕೆಯಲ್ಲಿ ನಡೆಯಿತು.– ಸುನಂದಮ್ಮ
ಅಡುಗೆ ಕಾರ್ಯಕ್ರಮ ನನಗೆ ಇಷ್ಟವಾಯಿತು. ಅಡುಗೆ ಮಾಡಿ ಬಹುಮಾನ ಗೆಲ್ಲಬೇಕು ಎಂಬ ಸ್ಫೂರ್ತಿ ಹೆಚ್ಚಾಯಿತು. ಜೊತೆಗೆ ಭರತನಾಟ್ಯ, ಪಾಶ್ಚಾತ್ಯ ನೃತ್ಯಗಳು ಇಷ್ಟವಾದವು.ಮುಂದಿನ ಬಾರಿ ರಸಪ್ರಶ್ನೆಯಲ್ಲಿ ಪಾಲ್ಗೊಂಡು ಬಹುಮಾನ ಪಡೆಯಯುವ ವಿಶ್ವಾಸ ಬಂತು– ಅಂಕಿತಾ
ಮಹಿಳೆಯರಲ್ಲಿ ಇತ್ತೀಚೆಗೆ ಹೃದಯಾಘಾತ ಆಗುತ್ತಿರುವ ಬಗ್ಗೆ ಹೆಚ್ಚು ಭಯವಿತ್ತು. ಹೃದಯ ತಜ್ಞ ಡಾ.ಕಾರ್ತಿಕ್ ಅವರು ಎಲ್ಲಾ ಭಯವನ್ನು ಹೋಗಲಾಡಿಸಿದರು. ಮಹಿಳೆಯರ ಆರೋಗ್ಯದ ಮಾಹಿತಿ ನೀಡಲು ಕಾರ್ಯಕ್ರಮಕ್ಕೆ ಒತ್ತು ನೀಡಲಾಗಿತ್ತು. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಗಮನ ಸೆಳೆದವು.– ರೋಹಿಣಿ
ಮಹಿಳೆಯರ ಅಭಿರುಚಿಗೆ ತಕ್ಕ ರೀತಿಯಲ್ಲಿ ಕಾರ್ಯಕ್ರಮ ನಡೆಸಲಾಯಿತು. ಆರೋಗ್ಯ ಕಾಳಜಿಯ ಬಗ್ಗೆ ವೈದ್ಯರನ್ನು ಕರೆಸಿ ಉಪನ್ಯಾಸ ಕೊಡಿಸಿದ್ದು ಇಷ್ಟವಾಯಿತು. ಇಂತಹ ಕಾರ್ಯಕ್ರಮಗಳು ಚಿತ್ರದುರ್ಗದಲ್ಲಿ ಮತ್ತೆ ಮತ್ತೆ ನಡೆಯಬೇಕು. ಹೆಚ್ಚು ಮಹಿಳೆಯರು ಪಾಲ್ಗೊಂಡು ಸದುಪಯೋಗ ಪಡೆಯಬೇಕು– ಸುಮಾ ರಾಜಶೇಖರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.