ADVERTISEMENT

ಚಿತ್ರದುರ್ಗ | ವಾರ್ಷಿಕ ಮಹೋತ್ಸವಕ್ಕೆ ಸಜ್ಜಾದ ಗುರುಪೀಠ

ಸಾಕ್ಷಿಯಾಗಲಿದ್ದಾರೆ ಸಾವಿರಾರು ಭಕ್ತರು, ಬೆಳಿಗ್ಗೆಯಿಂದಲೇ ದಾಸೋಹ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 7:05 IST
Last Updated 18 ಜುಲೈ 2025, 7:05 IST
ಭೋವಿ ಜನೋತ್ಸವಕ್ಕೆ ಭೋವಿ ಗುರುಪೀಠದ ಆವರಣ ಸಜ್ಜಾಗಿರುವುದು
ಭೋವಿ ಜನೋತ್ಸವಕ್ಕೆ ಭೋವಿ ಗುರುಪೀಠದ ಆವರಣ ಸಜ್ಜಾಗಿರುವುದು   

ಚಿತ್ರದುರ್ಗ: ಇಲ್ಲಿನ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಸಮಾಜ ಸೇವಾ ಧೀಕ್ಷೆ ಪಡೆದು 27ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಸಂಭ್ರಮದ ಹಿನ್ನೆಲೆಯಲ್ಲಿ ಜುಲೈ 18ರಂದು ಮಠದ ಆವರಣದಲ್ಲಿ ‘ಭೋವಿ ಜನೋತ್ಸವ’ ನಡೆಯುತ್ತಿದ್ದು, ಮಠದ ಅಂಗಳದಲ್ಲಿ ಸಂಭ್ರಮ ಮನೆ ಮಾಡಿದೆ.

ಬೆಳಿಗ್ಗೆ 11ಕ್ಕೆ ಧಾರ್ಮಿಕ ಸಭೆ ಮೂಲಕ ಪ್ರಾರಂಭವಾಗುವ ಕಾರ್ಯಕ್ರಮವು ಸಂಜೆ 7ರವರೆಗೂ ಇರಲಿದೆ. ವಿವಿಧ ಗೋಷ್ಠಿ, ಚಿಂತನಾ ಸಭೆಗಳು ನಿರಂತರವಾಗಿ ನಡೆಯಲಿವೆ. ಮಳೆಗಾಲ ಆಗಿರುವುದರಿಂದ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿಯಾಗಬಾರದೆಂದು ಉತ್ತಮ ಮಂಟಪವನ್ನು ನಿರ್ಮಾಣ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ.

ಪ್ರತಿಭಾ ಪುರಸ್ಕಾರ, ವಧು– ವರರ ಸಮಾವೇಶ, ರಕ್ತದಾನ ಶಿಬಿರ, ಯುಪಿಎಸ್‌ಸಿ, ಕೆಪಿಎಸ್‌ಸಿ ನೇಮಕಾತಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಹಾಗೂ ಪಿಎಚ್‌.ಡಿ ಪದವೀಧರರಿಗೆ ಸನ್ಮಾನ ಸೇರಿ ಹಲವು ಕಾರ್ಯಕ್ರಮಗಳು ನಡೆಯಲಿವೆ. ಪಟ್ಟಾಭಿಷೇಕದ 16ನೇ ವಾರ್ಷಿಕ ಮಹೋತ್ಸವ ಹಾಗೂ 40ನೇ ವಸಂತೋತ್ಸವ ಕೂಡ ಇದೇ ಸಂದರ್ಭದಲ್ಲಿ ನಡೆಯಲಿದೆ. ರಾಜ್ಯದ ವಿವಿಧೆಡೆಯಿಂದ ಭೋವಿ ಸಮುದಾಯದ ಭಕ್ತರು ಮಠಕ್ಕೆ ಬಂದು ಸ್ವಾಮೀಜಿಯವರ ಆಶೀರ್ವಾದ ಪಡೆಯಲಿದ್ದಾರೆ. ರಾಜ್ಯ ಹಿಂದುಳಿದ ಮತ್ತು ದಲಿತ ಮಠಾಧೀಶರ ಒಕ್ಕೂಟದ ಮಾಠಾಧೀಶರು ಪಾಲ್ಗೊಳ್ಳಲಿದ್ದಾರೆ.

ADVERTISEMENT

ಸ್ವಾಮೀಜಿಯ ಜನ್ಮದಿನ ಭೋವಿ ಜನೋತ್ಸವದ ರೂಪ ಪಡೆದ ಪರಿ ಕುತೂಹಲಕಾರಿಯಾಗಿದೆ. ಮುರುಘಾ ಮಠದಲ್ಲಿ ಸನ್ಯಾಸ ಧೀಕ್ಷೆ ಪಡೆದ ಮಠಾಧೀಶರಲ್ಲಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅತ್ಯಂತ ಕಿರಿಯರು. ಇದೇ ಕಾರಣಕ್ಕೆ ಎಲ್ಲರ ಪ್ರೀತಿಪಾತ್ರರೂ ಆಗಿದ್ದರು.

2009ರಲ್ಲಿ ಚಿತ್ರದುರ್ಗದ ಹೊರವಲಯದ ಪುಟ್ಟ ಗುಡಿಸಲಲ್ಲಿ ಮಠ ಆರಂಭಿಸಿದ ಸ್ವಾಮೀಜಿ ಅವರಿಗೆ ಹಾವು, ಚೇಳುಗಳೇ ಸ್ನೇಹಿತರಂತಿದ್ದವು. ಜುಲೈ 18ಕ್ಕೆ ಗುಡಿಸಲಿಗೆ ಧಾವಿಸುತ್ತಿದ್ದ ಇತರ ಮಠಾಧೀಶರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರ ಜನ್ಮದಿನ ಆಚರಿಸುತ್ತಿದ್ದರು. ವರ್ಷಗಳು ಉರುಳಿದಂತೆ ಇದು ಭಕ್ತರಿಗೆ ತಿಳಿಯಿತು. ಅಲ್ಲಿಂದ ಇದು ಭೋವಿ ಜನೋತ್ಸವವಾಗಿ, ಸಮುದಾಯದ ಹಬ್ಬವಾಗಿ ಮುನ್ನೆಲೆಗೆ ಬಂತು.

ಧಾರ್ಮಿಕ ತಳಹದಿಯ ಮೇಲೆ ಸಮುದಾಯ ಸಂಘಟನೆಗೆ ಮುಂದಾದ ಸ್ವಾಮೀಜಿ ಅವರಿಗೆ ಇದು ಇನ್ನಷ್ಟು ಸ್ಫೂರ್ತಿ ತುಂಬಿತು. ಈ ಕಾರ್ಯಕ್ರಮವನ್ನು ಸಮುದಾಯ ಸಂಘಟನೆಗೆ ಪೂರಕವಾಗಿ ದುಡಿಸಿಕೊಂಡು ಚಾಣಾಕ್ಷತೆ ತೋರಿದವರು ಸ್ವಾಮೀಜಿ.

ಜನೋತ್ಸವದಲ್ಲಿ ಸಂಘಟನೆಯ ಸಿಂಹಾವಲೋಕನ ನಡೆಯುತ್ತದೆ. ಸಮುದಾಯವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ದಶಕದ ಹಿಂದೆ ಆರಂಭವಾದ ಜನೋತ್ಸವ ರಾಷ್ಟ್ರದ ಹಲವು ರಾಜ್ಯಗಳಲ್ಲಿರುವ ಸಮುದಾಯವನ್ನು ತಲುಪಿದೆ. ಶೋಷಿತ ಸಮಾಜಕ್ಕೆ ರಾಜಕೀಯ ಅಧಿಕಾರದ ಅಗತ್ಯವನ್ನು ಅರಿತು ಜಾಗೃತಿ ಮೂಡಿಸಲಾಗುತ್ತಿದೆ. ರಾಜಕೀಯ, ಸಾಮಾಜಿಕ ಪ್ರಜ್ಞೆ ಮೂಡಿಸುವಲ್ಲಿ ಮಠ ಯಶಸ್ವಿಯಾಗಿದೆ. ಸಮುದಾಯದ ಪ್ರತಿನಿಧಿಗಳಾಗಿ ಹಲವರು ರಾಜಕೀಯ ಪ್ರಾತಿನಿಧ್ಯ ಪಡೆದಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್‌ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌, ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, ಮಾಜಿ ಸಚಿವ ಅರವಿಂದ ಲಿಂಬಾವಳಿ, ವಿಧಾನ ಪರಿಷತ್‌ನ ವಿರೋಧ ಪಕ್ಷದ ಉಪನಾಯಕ ಸುನೀಲ್‌ ವಲ್ಯಾಪುರೆ, ಶಾಸಕರಾದ ಎಂ.ಚಂದ್ರಪ್ಪ, ಎಸ್‌.ರಘು, ಮಾನಪ್ಪ ವಜ್ಜಲ್‌, ಎ.ಸಿ.ಶ್ರೀನಿವಾಸ್‌, ವಿ.ವೆಂಕಟೇಶ್‌ ಸೇರಿದಂತೆ ಜನಪ್ರತಿನಿಧಿಗಳು, ಸಮುದಾಯದ ಮುಖಂಡರು ಭಾಗವಹಿಸಲಿದ್ದಾರೆ.

ವೇದಿಕೆ ಸಿದ್ಧತೆ ಪರಿಶೀಲಿಸುತ್ತಿರುವ ಸ್ವಾಮೀಜಿ
ದಾಸೋಹ ಸಿದ್ಧತೆಯ ಪರಿಶೀಲನೆ
ಸಮುದಾಯವನ್ನು ಶೈಕ್ಷಣಿಕವಾಗಿ ಬಲಿಷ್ಠಗೊಳಿಸಬೇಕು ಎಂಬ ಉದ್ದೇಶದಿಂದ ಪ್ರತಿಭಾ ಪುರಸ್ಕಾರಕ್ಕೆ ಆದ್ಯತೆ ನೀಡಲಾಗಿದೆ. 250 ವಿದ್ಯಾರ್ಥಿಗಳಿಗೆ ತಲಾ ₹ 5000 ನಗದು ಬಹುಮಾನ ನೀಡಿ ಗೌರವಿಸಲಾಗುತ್ತಿದೆ
ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಪೀಠಾಧ್ಯಕ್ಷರು ಭೋವಿ ಗುರುಪೀಠ

ದಿನವಿಡೀ ಕಾರ್ಯಕ್ರಮ ‘ಭೋವಿ ಜನೋತ್ಸವಕ್ಕೆ ಮಠದಲ್ಲಿ ಸಿದ್ಧತೆ ಪೂರ್ಣಗೊಂಡಿದೆ. ಬೆಳಿಗ್ಗೆಯಿಂದ ರಾತ್ರಿಯವರೆಗೂ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಜತೆಗೆ ಭಕ್ತರಿಗೆ ನಿರಂತರ ಪ್ರಸಾದ ವ್ಯವಸ್ಥೆ ಮಾಡಲಾಗಿದೆ’ ಎಂದು ಭೋವಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚಿಕ್ಕಂದವಾಡಿ ತಿಪ್ಪೇಸ್ವಾಮಿ ಹೇಳಿದರು. ‘ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರ ಅವಿರತ ಶ್ರಮದಿಂದ ಭೋವಿ ಗುರುಪೀಠ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಜನೋತ್ಸವ ಅರ್ಥಪೂರ್ಣವಾಗಲಿದೆ. ಎಲ್ಲಿಯೂ ಗೊಂದಲಕ್ಕೆ ಅವಕಾಶವಾಗದಂತೆ ಸಿದ್ದತೆಗಳು ಪೂರ್ಣಗೊಂಡಿವೆ’ ಎಂದು ಮಠದ ಸಿಇಒ ಗೌನಹಳ್ಳಿ ಗೋವಿಂದಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.