ಚಿತ್ರದುರ್ಗ: ‘ಒಳಮೀಸಲಾತಿ 30 ವರ್ಷದ ಹೋರಾಟದ ಫಲ. ಆದ್ದರಿಂದ ಒಳಮೀಸಲಾತಿ ಜಾರಿ ಆಗುವವರೆಗೂ ಯಾವುದೇ ಹಬ್ಬ-ಹರಿದಿನ ಜೊತೆಗೆ ನನ್ನ ಜನ್ಮದಿನ ಕೂಡ ಆಚರಿಸುವುದಿಲ್ಲ’ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಏ.15ಕ್ಕೆ ನನಗೆ 70 ವರ್ಷ ತುಂಬಲಿದ್ದು, ಈ ದಿನವನ್ನು ಸ್ಮರಣೀಯಗೊಳಿಸಲು ಹಿತೈಷಿಗಳು, ಅಭಿಮಾನಿಗಳು, ಬೆಂಬಲಿಗರು ಬೆಂಗಳೂರಿನ ಅರಮನೆ ಮೈದಾನ ಆವರಣದಲ್ಲಿನ ವಿಹಾರದಲ್ಲಿ ಕಾರ್ಯಕ್ರಮ ಸಿದ್ಧತೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದರು. ಈಗ ಅವರೆಲ್ಲರನ್ನೂ ಮನವೊಲಿಸಿ, ಜನ್ಮದಿನಾಚರಣೆ ಕಾರ್ಯಕ್ರಮ ರದ್ದುಗೊಳಿಸಿದ್ದೇನೆ ’ ಎಂದು ತಿಳಿಸಿದ್ದಾರೆ.
‘ಪರಿಶಿಷ್ಟ ಸಮುದಾಯದಲ್ಲಿನ ನೊಂದ ಜನರಿಗೆ ಒಳಮೀಸಲಾತಿ ಜಾರಿ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಬೇಕೆಂಬುದು ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗುರಿ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ನಮ್ಮ ಧ್ವನಿಗೆ ಬೆಂಬಲವಾಗಿ ನಿಂತಿದ್ದು, ನಮ್ಮ ಎಲ್ಲ ಬೇಡಿಕೆಗಳಿಗೆ ಸ್ಪಂದಿಸುತ್ತಿದ್ದಾರೆ. ಆದರೂ, ಕಾಣದ ಕೈಗಳು ಒಳಮೀಸಲಾತಿಗೆ ಬಹಳಷ್ಟು ಅಡ್ಡಿಪಡಿಸಿದ್ದು, ಇದರ ವಿರುದ್ಧ ಧ್ವನಿ ಕೂಡ ಎತ್ತಿರುವೆ. ಜೊತೆಗೆ ಮುಖ್ಯಮಂತ್ರಿಗಳ ಮೇಲೆ ನಿರಂತರ ಒತ್ತಡ ತರುವ ಕೆಲಸ ಮಾಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಜನ್ಮದಿನಾಚರಣೆ ಸಂಭ್ರಮಕ್ಕಿಂತಲೂ ನಾನು ಸೇರಿ ಎಲ್ಲರಿಗೂ ಒಳಮೀಸಲಾತಿ ಜಾರಿ ಮುಖ್ಯ ವಿಷಯವಾಗಬೇಕು. ಏ.15ರಂದು ನನಗೆ ಶುಭಾಷಯ ಕೋರಲು ನನ್ನನ್ನು ಹುಡುಕಿಕೊಂಡು ಬರುವ ಅಗತ್ಯ ಇಲ್ಲ. ತಾವುಗಳು ಇರುವ ಸ್ಥಳ, ಕಾಲೊನಿ, ಹಟ್ಟಿಗಳಲ್ಲಿ ಜಾತಿಗಣತಿ ಕಾರ್ಯದ ಸಂದರ್ಭ ಯಾವುದೇ ಕಾರಣಕ್ಕೂ ಆದಿಕರ್ನಾಟಕ, ಆದಿದ್ರಾವಿಡ ಎಂದು ಬರೆಸಬಾರದು. ಮೂಲ ಜಾತಿಯನ್ನು ಕಡ್ಡಾಯವಾಗಿ ಬರೆಸುವಂತೆ ಸಮುದಾಯದವರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಕೋರಿದ್ದಾರೆ.
‘ನಾವು ಮುಖ್ಯಮಂತ್ರಿ ಅವರ ಕಾರ್ಯಕ್ಕೆ ಬೆಂಬಲವಾಗಿ ನಿಲ್ಲಬೇಕು. ಜಾತ್ರೆ, ಹಬ್ಬ-ಹರಿದಿನ ಆಚರಣೆ ಮರೆತು ಜಾತಿಗಣತಿ ಕಾರ್ಯ ಯಶಸ್ವಿಗೆ ಅದರಲ್ಲೂ ಸರ್ವೇ ಸಂದರ್ಭ ಮೂಲ ಜಾತಿ ದಾಖಲು ಆಗುವ ರೀತಿ ಜನರಲ್ಲಿ ಜಾಗೃತಿ ವಹಿಸಬೇಕು. ಈ ನಿಟ್ಟಿನಲ್ಲಿ ನನ್ನ ಜನ್ಮದಿನದಂದು ಈ ಕಾರ್ಯಕ್ಕೆ ಚಾಲನೆ ನೀಡುವ ಮೂಲಕ ನೊಂದ ಜನರಿಗೆ ಹಕ್ಕು ಕೊಡಿಸಲು ಶ್ರಮಿಸಬೇಕೆಂದು ಕೋರುತ್ತೇನೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.