ADVERTISEMENT

ನಾಯಕನಹಟ್ಟಿ: ಪ.ಪಂ. ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ

ಕಾಂಗ್ರೆಸ್‌ನ ಮೂವರು ಸದಸ್ಯರು ಚುನಾವಣೆಗೆ ಗೈರು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 13:51 IST
Last Updated 23 ಅಕ್ಟೋಬರ್ 2020, 13:51 IST
ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಆಯ್ಕೆಯಾದ ಬಿಜೆಪಿಯು ಸದಸ್ಯರಾದ ಎನ್. ಮಹಾಂತಣ್ಣ, ಷಗುಪ್ತಾಯಾಸ್ಮಿನ್ ಕೌಸರ್‌  ಸಂಭ್ರಮಿಸಿದರು
ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಆಯ್ಕೆಯಾದ ಬಿಜೆಪಿಯು ಸದಸ್ಯರಾದ ಎನ್. ಮಹಾಂತಣ್ಣ, ಷಗುಪ್ತಾಯಾಸ್ಮಿನ್ ಕೌಸರ್‌  ಸಂಭ್ರಮಿಸಿದರು   

ನಾಯಕನಹಟ್ಟಿ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯು ಸರಳ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಿತು.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ನೇರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಇಲ್ಲಿನ ಪಟ್ಟಣ ಪಂಚಾಯಿತಿಯು 16 ಸದಸ್ಯ ಬಲವನ್ನು ಹೊಂದಿದೆ. 8 ಜನ ಬಿಜೆಪಿ ಸದಸ್ಯರು, 7 ಜನ ಕಾಂಗ್ರೆಸ್ ಸದಸ್ಯರು, ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ.

ಶುಕ್ರವಾರ ನಡೆದ ಚುನಾವಣೆಯಲ್ಲಿ 4ನೇ ವಾರ್ಡಿನ ಪಕ್ಷೇತರ ಸದಸ್ಯೆ ನೀಲಮ್ಮ ಬಿಜೆಪಿಯನ್ನು ಬೆಂಬಲಿಸಿದರು. ಕೆಲವು ದಿನಗಳ ಹಿಂದೆ ಬಿಜೆಪಿಯಲ್ಲಿ ಕೆಲ ಸದಸ್ಯರು ಬಂಡಾಯವೆದ್ದಿದ್ದರು. ಇದನ್ನು ಮನಗಂಡ ಬಿಜೆಪಿ ಹೈಕಮಾಂಡ್ ಬಂಡಾಯ ಶಮನಗೊಳಿಸಿದ್ದರು.

ADVERTISEMENT

ಚುನಾವಣೆಗೆ ಬಿಜೆಪಿಯ 8 ಜನ ಸದಸ್ಯರ ಜತೆಗೆ ಸಂಸದರಾದ ಎ.ನಾರಾಯಣಸ್ವಾಮಿ ಹಾಜರಿದ್ದರು. ಇದರಲ್ಲಿ 13ನೇ ವಾರ್ಡ್ ಸದಸ್ಯ ಎನ್. ಮಹಾಂತಣ್ಣ ಅಧ್ಯಕ್ಷ ಸ್ಥಾನಕ್ಕೆ 7ನೇ ವಾರ್ಡ್ ಸದಸ್ಯೆ ಷಗುಪ್ತಾಯಾಸ್ಮಿನ್ ‌ಕೌಸರ್ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.

ಆದರೆ ಕಾಂಗ್ರೆಸ್ ಪಕ್ಷದಲ್ಲಿದ್ದ 7 ಜನ ಸದಸ್ಯರ ಪೈಕಿ 11 ವಾರ್ಡ್ ಸದಸ್ಯ ಜೆ.ಆರ್.ರವಿಕುಮಾರ್ ಅಧ್ಯಕ್ಷ ಸ್ಥಾನಕ್ಕೆ, 12 ವಾರ್ಡ್ ಸದಸ್ಯ ಎನ್.ಐ.ಎಂ.ಡಿ. ಮನ್ಸೂರ್ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಉಮೇದುವಾರಿಕೆ ಸಲ್ಲಿಸಿದ್ದರು.

2ನೇ ವಾರ್ಡ್ ಸದಸ್ಯ ಟಿ. ಬಸಣ್ಣ ಮತ್ತು 9ನೇ ವಾರ್ಡಿನ ಟಿ.ಮಂಜುಳಾ ಸಭೆಯಲ್ಲಿ ಹಾಜರಿದ್ದರು. 6ನೇ ವಾರ್ಡ್ ಕಾಂಗ್ರೆಸ್ ಸದಸ್ಯ ಜೆ.ಟಿ.ಎಸ್. ತಿಪ್ಪೇಸ್ವಾಮಿ, 10ನೇ ವಾರ್ಡ್ ಸದಸ್ಯ ಎಸ್. ಉಮಾಪತಿ ಸಭೆಗೆ ಗೈರು ಹಾಜರಾಗಿದ್ದರು.

ಆದರೆ 8ನೇ ವಾರ್ಡ್ ಸದಸ್ಯ ಎಸ್. ಕೃಷ್ಣಮೂರ್ತಿ ಚುನಾವಣೆ ಪ್ರಕ್ರಿಯೆ ಶುರುವಾದಾಗ ಪಟ್ಟಣ ಪಂಚಾಯಿತಿ ಆವರಣಕ್ಕೆ ಬಂದು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗದೆ ದೂರ ಉಳಿದು ಪರೋಕ್ಷವಾಗಿ ಬಿಜೆಪಿಗೆ ಬೆಂಬಲಿಸಿದರು.

ಅಂತಿಮವಾಗಿ ಚುನಾವಣೆ ನಡೆದು 11ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯ ಜೆ.ಆರ್. ರವಿಕುಮಾರ್ ಮತ್ತು 12 ವಾರ್ಡ್ ಸದಸ್ಯ ಎನ್.ಐ.ಎಂ.ಡಿ. ಮನ್ಸೂರ್ ತಲಾ 4 ಮತಗಳನ್ನು ಪಡೆದರು. 13ನೇ ವಾರ್ಡ್ ಬಿಜೆಪಿ ಸದಸ್ಯ ಎನ್. ಮಹಾಂತಣ್ಣ ಅಧ್ಯಕ್ಷರಾಗಿ ಮತ್ತು 7ನೇ ವಾರ್ಡ್ ಬಿಜೆಪಿ ಸದಸ್ಯೆ ಷಗುಪ್ತಾಯಾಸ್ಮಿನ್‌ ಕೌಸರ್ ಉಪಾಧ್ಯಕ್ಷೆಯಾಗಿ ತಲಾ 10 ಮತಗಳನ್ನು ಪಡೆದು ಸ್ಪಷ್ಟ ಬಹುಮತದೊಂದಿಗೆ ಆಯ್ಕೆಯಾದರು.

ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಪ್ರಭಾರ ಮುಖ್ಯಾಧಿಕಾರಿ ಎಚ್.ಡಿ. ಲಿಂಗರಾಜು ಇದ್ದರು. ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.