ADVERTISEMENT

ಚಿತ್ರದುರ್ಗ: ಬಿಜೆಪಿಗೆ ಬಂಡಾಯ ಅಭ್ಯರ್ಥಿಯೇ ಸವಾಲು

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ, ಕಮಲ ಪಕ್ಷಕ್ಕೆ ಮತ ವಿಭಜನೆ ಭೀತಿ

ಜಿ.ಬಿ.ನಾಗರಾಜ್
Published 21 ಅಕ್ಟೋಬರ್ 2020, 5:38 IST
Last Updated 21 ಅಕ್ಟೋಬರ್ 2020, 5:38 IST
ಕೆ.ಎಸ್.ನವೀನ್
ಕೆ.ಎಸ್.ನವೀನ್   

ಚಿತ್ರದುರ್ಗ: ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಜಿಲ್ಲೆಯಲ್ಲಿ ಬಿರುಸಿನ ಪ್ರಚಾರ ಕೈಗೊಂಡಿವೆ. ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿರುವ ಡಿ.ಟಿ.ಶ್ರೀನಿವಾಸ್‌ ಬಿಜೆಪಿಗೆ ಸವಾಲಾಗಿದ್ದು, ಮತ ವಿಭಜನೆಯಾಗುವ ಆತಂಕ ಕಮಲ ಪಕ್ಷಕ್ಕೆ ಎದುರಾಗಿದೆ.

ಚಿತ್ರದುರ್ಗ, ದಾವಣಗೆರೆ (ಹರಿಹರ, ಜಗಳೂರು, ದಾವಣಗೆರೆ ತಾಲ್ಲೂಕು), ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲಾ ವ್ಯಾಪ್ತಿಯ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಇದೇ 28ರಂದು ಮತದಾನ ನಡೆಯಲಿದೆ. ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ 15 ಜನರು ಕಣದಲ್ಲಿದ್ದಾರೆ. ಬಿಜೆಪಿ ಟಿಕೆಟ್ ವಂಚಿತರಾಗಿರುವ ಡಿ.ಟಿ.ಶ್ರೀನಿವಾಸ್‌ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವುದು ಪಕ್ಷದ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ.

ರಾಜ್ಯ ಗೊಲ್ಲರ (ಯಾದವ) ಸಂಘದ ಅಧ್ಯಕ್ಷರೂ ಆಗಿರುವ ಡಿ.ಟಿ.ಶ್ರೀನಿವಾಸ್, ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕಿ ಕೆ.ಪೂರ್ಣಿಮಾ ಅವರ ಪತಿ. ಬಿಜೆಪಿ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷರಾಗಿಯೂ ಇವರು ಕೆಲಸ ಮಾಡಿದ್ದಾರೆ. 2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಹಿರಿಯೂರು ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರು. ಶ್ರೀನಿವಾಸ್‌ ಬದಲಿಗೆ ಪತ್ನಿ ಪೂರ್ಣಿಮಾ ಅವರಿಗೆ ಟಿಕೆಟ್‌ ನೀಡಿ ಬಿಜೆಪಿ ಚಾಣಾಕ್ಷತನ ಪ್ರದರ್ಶಿಸಿತ್ತು.

ADVERTISEMENT

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಶ್ರೀನಿವಾಸ್‌ ಎರಡು ವರ್ಷಗಳಿಂದ ತಯಾರಿ ನಡೆಸಿದ್ದರು. ಕ್ಷೇತ್ರ ಸುತ್ತಿ ಮತದಾರರ ನೋಂದಣಿ ಮಾಡಿಸಿದ್ದರು. ಟಿಕೆಟ್‌ ನೀಡುವಂತೆ ಪಕ್ಷದ ಮುಂದೆ ಬೇಡಿಕೆ ಇಟ್ಟಿದ್ದರು. ಶಿರಾ ತಾಲ್ಲೂಕಿನ ಚಿದಾನಂದಗೌಡ ಅವರಿಗೆ ಬಿಜೆಪಿ ಟಿಕೆಟ್‌ ನೀಡಿತು. ಇದರಿಂದ ಅಸಮಾಧಾನಗೊಂಡ ಶ್ರೀನಿವಾಸ್‌, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರು. ನಾಮಪತ್ರ ಹಿಂಪಡೆಯುವಂತೆ ಮನವೊಲಿಸುವ ಪ್ರಯತ್ನಗಳು ನಡೆದವು. ಈ ಒತ್ತಡಕ್ಕೆ ಶ್ರೀನಿವಾಸ್‌ ಮಣಿಯಲಿಲ್ಲ.

ಚಿತ್ರದುರ್ಗ ಜಿಲ್ಲೆಯಲ್ಲಿ 20,909 ಮತದಾರರಿದ್ದಾರೆ. ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರವನ್ನು ಬಿಜೆಪಿ ಪ್ರತಿನಿಧಿಸುತ್ತಿದೆ. ಪಕ್ಷವೂ ಅಧಿಕಾರದಲ್ಲಿರುವುದರಿಂದ ಬಿಜೆಪಿ ಅಭ್ಯರ್ಥಿಗೆ ಪೂರಕ ವಾತಾವರಣವಿದೆ ಎಂಬ ಲೆಕ್ಕಾಚಾರ ದಿನ ಕಳೆದಂತೆ ತಲೆಕೆಳಗಾಗುತ್ತಿದೆ. ಯಾದವ ಸಮುದಾಯದ ಮುಖಂಡರೊಂದಿಗೆ ಶ್ರೀನಿವಾಸ್‌ ಪ್ರಚಾರಕ್ಕೆ ಇಳಿದಿದ್ದಾರೆ. ಇದು ಜಿಲ್ಲೆಯ ಬಿಜೆಪಿ ಬೆಂಬಲಿಗ ಮತದಾರರಲ್ಲಿ ಗೊಂದಲ ಸೃಷ್ಟಿಸಿದೆ. ಈ ಪರಿಸ್ಥಿತಿ ಮತ್ತೊಂದು ಪಕ್ಷದ ಅಭ್ಯರ್ಥಿಗೆ ನೆರವಾಗಬಹುದು ಎಂಬ ವಿಶ್ಲೇಷಣೆಗಳು ಕೂಡ ನಡೆಯುತ್ತಿವೆ.

ಬಂಡಾಯ ಅಭ್ಯರ್ಥಿಯ ಸವಾಲು ಎದುರಿಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ಬಿಜೆಪಿ ನಾಯಕರು ಜಿಲ್ಲೆಯಲ್ಲಿ ವ್ಯಾಪಕ ಪ್ರಚಾರ ಕೈಗೊಂಡಿದ್ದಾರೆ.ಸಂಸದ ಎ.ನಾರಾಯಣಸ್ವಾಮಿ, ವಿಧಾನ ಪರಿಷತ್‌ ಸದಸ್ಯ ವೈ.ಎ. ನಾರಾಯಣಸ್ವಾಮಿ ಜಿಲ್ಲೆ ಸುತ್ತಿ ಅಭ್ಯರ್ಥಿ ಚಿದಾನಂದಗೌಡ ಪರ ಮತಯಾಚನೆ ಮಾಡುತ್ತಿದ್ದಾರೆ. ಸ್ಥಳೀಯ ಶಾಸಕರು ಪ್ರಚಾರದಲ್ಲಿ ನಿರತರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಒಂದು ಹಂತದ ಪ್ರಚಾರ
ಮುಗಿಸಿದ್ದಾರೆ.

***

ಬಂಡಾಯದ ಬಿಸಿ ತಟ್ಟಿಲ್ಲ: ಬಿಜೆಪಿ

‘ಡಿ.ಟಿ.ಶ್ರೀನಿವಾಸ್‌ ಅವರು ಪಕ್ಷದಲ್ಲೇ ಇದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸದಂತೆ ಮನವೊಲಿಸುವ ಪ್ರಯತ್ನ ಮಾಡಿದೆವು. ಆದರೂ, ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಪ್ರಜ್ಞಾವಂತ ಮತದಾರರ ಮನಸು ಬದಲಿಸುವುದು ಸುಲಭವಲ್ಲ. ಪಕ್ಷೇತರ ಅಭ್ಯರ್ಥಿಯಿಂದ ಪಕ್ಷಕ್ಕೆ ಯಾವುದೇ ತೊಂದರೆ ಆಗುವುದಿಲ್ಲ’ ಎನ್ನುತ್ತಾರೆ ಆಗ್ನೇಯ ಪದವೀಧರ ಕ್ಷೇತ್ರದಬಿಜೆಪಿ ಉಸ್ತುವಾರಿ ಕೆ.ಎಸ್‌.ನವೀನ್‌.

‘ಜಿಲ್ಲೆಯಲ್ಲಿ ಪಕ್ಷ ವ್ಯವಸ್ಥಿತ ಪ್ರಚಾರ ಕೈಗೊಂಡಿದೆ. ಅಭ್ಯರ್ಥಿ ಚಿದಾನಂದಗೌಡ ಅವರು ಕ್ಷೇತ್ರ ಪ್ರವಾಸ ಮುಗಿಸಿದ್ದಾರೆ. ಸಂಸದರು, ಶಾಸಕರು ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಇದೇ 24ರಂದು ಮತದಾರರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಿತ್ರದುರ್ಗದಲ್ಲಿ ಸಭೆ ನಡೆಸಲಿದ್ದಾರೆ’ ಎಂದರು.

***

ಧರ್ಮಸಂಟಕದಲ್ಲಿ ಇದ್ದೇನೆ: ಪೂರ್ಣಿಮಾ

‘ಒಂದೆಡೆ ಪತಿ, ಮತ್ತೊಂದೆಡೆ ಪಕ್ಷದ ಅಭ್ಯರ್ಥಿ ಕಣದಲ್ಲಿದ್ದಾರೆ. ಯಾವ ನಿಲುವು ತೆಗೆದುಕೊಳ್ಳಬೇಕು ಎಂಬ ದ್ವಂದ್ವ, ಧರ್ಮಸಂಕಟದಲ್ಲಿದ್ದೇನೆ’ ಎನ್ನುತ್ತಾರೆ ಬಿಜೆಪಿ ಶಾಸಕಿ, ಡಿ.ಟಿ.ಶ್ರೀನಿವಾಸ್‌ ಪತ್ನಿ ಕೆ.ಪೂರ್ಣಿಮಾ.

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಪ್ರಚಾರದಲ್ಲಿ ಯಾರ ಪರವೂ ಕೆಲಸ ಮಾಡುತ್ತಿಲ್ಲ. ಪತಿ ಹಾಗೂ ಹಿರಿಯೂರಿನ ಕೆಲ ಮುಖಂಡರು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಶಿರಾ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಪರ ಕೆಲಸ ಮಾಡುವಂತೆ ಪಕ್ಷ ಸೂಚಿಸಿದೆ’ ಎಂದು ಅವರು ತಿಳಿಸಿದರು.

‘ಹಲವು ವರ್ಷಗಳಿಂದ ಪತಿ ಚುನಾವಣೆಗೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ಪಕ್ಷವೂ ಟಿಕೆಟ್‌ ನೀಡಲು ಗಮನ ಹರಿಸಬಹುದಿತ್ತು. ಪಕ್ಷ ಬೇರೆಯವರಿಗೆ ಟಿಕೆಟ್‌ ನೀಡಿದ ಬಳಿಕ ಪತಿಯ ಮನವೊಲಿಸಲು ಪ್ರಯತ್ನಿಸಿದೆ. ಆದರೆ, ಅವರ ವೈಯಕ್ತಿಕ ನಿರ್ಧಾರವನ್ನು ಗೌರವಿಸಬೇಕಲ್ಲವೇ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.