ADVERTISEMENT

ನಿಗಮ ಚುನಾವಣೆ ಗಿಮಿಕ್‌ ಅಲ್ಲ

ಬಿಜೆಪಿ ಒಬಿಸಿ ಮೋರ್ಚಾ ಉಪಾಧ್ಯಕ್ಷ ಸಿದ್ದೇಶ್‌ ಯಾದವ್‌

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 6:40 IST
Last Updated 30 ಸೆಪ್ಟೆಂಬರ್ 2020, 6:40 IST
ಸಿದ್ದೇಶ್ ಯಾದವ್
ಸಿದ್ದೇಶ್ ಯಾದವ್   

ಚಿತ್ರದುರ್ಗ: ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಒತ್ತಾಯ ಮೂರು ದಶಕದಿಂದ ಇತ್ತು. ಕಾಡುಗೊಲ್ಲರ ಏಳಿಗೆಗೆ ಬಿಜೆಪಿ ಸರ್ಕಾರ ಸ್ಪಂದಿಸಿದೆ. ಶಿರಾ ಉಪಚುನಾವಣೆಯ ಗಿಮಿಕ್‌ಗೆ ನಿಗಮ ಘೋಷಣೆ ಮಾಡಿದ್ದಲ್ಲ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಸಿದ್ದೇಶ್‌ ಯಾದವ್‌ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಿರಾ ಉಪಚುನಾವಣೆಯ ಘೋಷಣೆಗೂ ಮೊದಲೇ ನಿಗಮ ರಚನೆಯಾಗಿದೆ. ಚುನಾವಣೆ ಅಂಗವಾಗಿ ಪಕ್ಷದ ಮುಖಂಡರಾದ ಬಿ.ವೈ.ವಿಜಯೇಂದ್ರ ಹಾಗೂ ರವಿಕುಮಾರ್‌ ಅವರು ಹಟ್ಟಿಗಳಿಗೆ ಭೇಟಿ ನೀಡಿದಾಗ ಕಾಡುಗೊಲ್ಲರ ಸ್ಥಿತಿ ಅರಿವಿಗೆ ಬಂದಿದೆ. ಇದು ನಿಗಮ ರಚನೆಗೆ ನೆರವಾಯಿತು’ ಎಂದು ಮಾಹಿತಿ ನೀಡಿದರು.

‘ಕಾಡುಗೊಲ್ಲ ಸಮುದಾಯ ರಾಜ್ಯದ 35 ತಾಲ್ಲೂಕುಗಳಲ್ಲಿ ಹರಡಿಕೊಂಡಿದೆ. ಶ್ರೇಷ್ಠ ಜನಪದ ಸಂಪತ್ತು ಹೊಂದಿದೆ. ಸಾಂಸ್ಕೃತಿ ಶ್ರೀಮಂತಿಕೆ ಇದ್ದರೂ ಬಡತನದಲ್ಲಿ ನರಳುತ್ತಿದೆ. ಶೈಕ್ಷಣಿಕ ಹಾಗೂ ರಾಜಕೀಯವಾಗಿ ತೀರಾ ಹಿಂದುಳಿದಿದೆ. ನಿಗಮ ರಚನೆ ಮಾಡಿದ್ದರಿಂದ ಸಾಕಷ್ಟು ಸೌಲಭ್ಯಗಳು ಸಮುದಾಯವನ್ನು ತಲುಪಲಿವೆ’ ಎಂದು ಹರ್ಷ ವ್ಯಕ್ತಪಡಿಸಿದರು.

ADVERTISEMENT

‘ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವಂತೆ ಬಿ.ಎಸ್‌.ಯಡಿಯೂರಪ್ಪ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮನವಿ ಮಾಡಲಾಗಿತ್ತು. ಈ ಬೇಡಿಕೆಗೆ ಬಿಜೆಪಿ ಆಗಲೂ ಸ್ಪಂದಿಸಿ ಕುಲಶಾಸ್ತ್ರೀಯ ಅಧ್ಯಯನಕ್ಕೆ ಆದೇಶ ನೀಡಿತ್ತು. ಕುಲಶಾಸ್ತ್ರೀಯ ಅಧ್ಯಯನದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಕಾಡುಗೊಲ್ಲರೇ ಇಲ್ಲ ಎಂಬ ಪುಕಾರು ಎಬ್ಬಿಸುವ ಪ್ರಯತ್ನವೂ ನಡೆದಿತ್ತು. ಆದರೆ, ಬಿಜೆಪಿಗೆ ಸಮುದಾಯದ ಬಗ್ಗೆ ಸ್ಪಷ್ಟ ಅರಿವಿತ್ತು. ಸಮುದಾಯದ ಶೋಚನೀಯ ಸ್ಥಿತಿ ನಿಗಮ ಘೋಷಣೆಗೆ ಪ್ರೇರೇಪಣೆ ನೀಡಿತು’ ಎಂದರು.

ಪೂರ್ಣಿಮಾ ಕಾರಣರಲ್ಲ’:

ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ಗೊಲ್ಲ ಅಭಿವೃದ್ಧಿ ನಿಗಮವಾಗಿ ಪ್ರಕಟಿಸಲು ಹಿರಿಯೂರು ಶಾಸಕಿ ಪೂರ್ಣಿಮಾ ಕಾರಣರಲ್ಲ ಎಂದು ಸಿದ್ದೇಶ್‌ ಯಾದವ್‌ ಸಮರ್ಥಿಸಿಕೊಂಡರು.

‘ಪೂರ್ಣಿಮಾ ಅವರು ಕಾಡುಗೊಲ್ಲರಲ್ಲ. ಆದರೂ, ಕಾಡುಗೊಲ್ಲರ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಹಮತ ವ್ಯಕ್ತಪಡಿಸಿದ್ದಾರೆ. ನಿಗಮದ ಹೆಸರು ಬದಲಾದ ಪರಿಗೆ ಶಾಸಕಿಯನ್ನು ಹೊಣೆ ಮಾಡುವುದು ತಪ್ಪು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್‌ ಯಾದವ್‌, ಮುಖಂಡರಾದ ಸಂಪತ್‌ ಕುಮಾರ್‌, ಶಿವಣ್ಣಾಚಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.