ADVERTISEMENT

ಮೋದಿ ಮತ್ತೆ ಪ್ರಧಾನಿ ಮಾಡಲು ಬಿಜೆಪಿಯಿಂದ 13 ಅಂಶದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 12:14 IST
Last Updated 16 ಜನವರಿ 2019, 12:14 IST

ದಾವಣಗೆರೆ: 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಲು ಯುವ ಮೋರ್ಚಾ ಕಾರ್ಯಕರ್ತರಿಗೆ ಜನವರಿ ತಿಂಗಳ ಅಂತ್ಯದಿಂದ ಮಾರ್ಚ್‌ ಅಂತ್ಯದವರೆಗೆ 13 ಅಂಶಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್‌ ಭಟ್‌ ತಿಳಿಸಿದರು.

‘2014ರಲ್ಲಿ ಮೋದಿ ಅವರನ್ನು ಪ್ರಧಾನಿ ಮಾಡಲು ಯುವ ಮೋರ್ಚಾ ಕಾರ್ಯಕರ್ತರ ಜೊತೆಗೆ ವೈದ್ಯರು, ವಕೀಲರು, ಎಂಜಿನಿಯರಿಂಗ್‌ ವಿದ್ಯಾರ್ಥಿಗಳು, ಸಾಫ್ಟ್‌ವೇರ್‌ ಕಂಪನಿಯ ನೌಕರರು ವಿಶೇಷವಾಗಿ ಶ್ರಮಿಸಿದ್ದರು. ಈ ಬಾರಿ 20 ಲಕ್ಷ ಯುವ ಮತದಾರರು ಹೊಸದಾಗಿ ಸೇರ್ಪಡೆ ಹೊಂದಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲೂ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಯುವ ಮತದಾರರನ್ನು ಬಿಜೆಪಿ ಕಡೆಗೆ ಸೆಳೆಯಲು 13 ಅಂಶಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಯುವಕರನ್ನು ಸೆಳೆಯಲು ‘ನೇಷನ್‌ ವಿತ್‌ ನಮೋ’ ಸ್ವಯಂ ಜೋಡಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸಂಸತ್‌ ಅಧಿವೇಶನದ ಅನುಭವವನ್ನು ಯುವ ಮತದಾರರಿಗೆ ಪರಿಚಯಿಸಲು ಯುವ ಸಂಸತ್ತನ್ನು ಆಯೋಜಿಸಲಾಗುವುದು. ‘ಕಮಲ ಕಪ್‌’ ಕ್ರೀಡಾಕೂಟವನ್ನು ನಡೆಸಲಾಗುವುದು. ಮೋದಿ ಅಭಿಮಾನಿ ವಿದ್ಯಾರ್ಥಿಗಳನ್ನು ಕಾಲೇಜಿನ ಕ್ಯಾಂಪಸ್‌ನಲ್ಲಿ ರಾಯಭಾರಿಗಳನ್ನಾಗಿ ನೇಮಿಸಲಾಗುವುದು. ಯುವ ನಾಯಕರನ್ನು ಸಂಘಟಿಸಲಾಗುವುದು ಎಂದು ವಿವರಿಸಿದರು.

ADVERTISEMENT

ಹೊಸ ಮತದಾರರನ್ನು ಗುರುತಿಸಿ ‘ಮೊದಲ ಮತ ಮೋದಿಗೆ’ ಸಂಕಲ್ಪ ಅಭಿಯಾನ ನಡೆಸಲಾಗುವುದು. ಅಂತರ್ಜಾಲದ ಮೂಲಕ ಸ್ಪರ್ಧೆ ನಡೆಸಿ ಪ್ರಚಾರ ನಡೆಸಲಾಗುವುದು. ‘ಮೋದಿಯೊಂದಿಗೆ ದೇಶ’ ಲೇಖಕರ ಸಮಾವೇಶ ಹಮ್ಮಿಕೊಳ್ಳಲಾಗುವುದು. ರಾಜ್ಯ ಮಟ್ಟದ ವಿಜಯಲಕ್ಷ್ಯ ಯುವ ಸಮಾವೇಶ ಆಯೋಜಿಸಲಾಗುವುದು. ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಕಮಲ ಯುವ ಮಹೋತ್ಸವ ಹಮ್ಮಿಕೊಳ್ಳಲಾಗುವುದು. ರಾಜ್ಯ ಮಟ್ಟದ ಟೌನ್‌ ಹಾಲ್‌ ಕಾರ್ಯಕ್ರಮ ಹಮ್ಮಿಕೊಂಡು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಮಾರ್ಚ್‌ 2ರಂದು ದೇಶದಾದ್ಯಂತ ‘ಕಮಲ ಸಂದೇಶ’ ಬೈಕ್‌ ರ‍್ಯಾಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್‌, ಉಪಾಧ್ಯಕ್ಷ ನವೀನ್ ಪಾಟೀಲ, ಗೌತಮ್‌ ಜೈನ್‌, ಸಂತೋಷ ಶಿವನಗೌಡ ಪಾಟೀಲ, ಮಂಜುನಾಥ, ಟಿಂಕರ ಮಂಜಣ್ಣ, ವಿರೂಪಾಕ್ಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.