ADVERTISEMENT

ಹಿರಿಯೂರು: ಸಂಭ್ರಮದ ತೇರುಮಲ್ಲೇಶ್ವರ ಬ್ರಹ್ಮ ರಥೋತ್ಸವ

ಬಿರು ಬಿಸಿಲಿನಲ್ಲೂ ರಥೋತ್ಸವವನ್ನು ಕಣ್ತುಂಬಿಕೊಂಡ ಭಕ್ತರು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 4:23 IST
Last Updated 4 ಫೆಬ್ರುವರಿ 2026, 4:23 IST
ಹಿರಿಯೂರಿನಲ್ಲಿ ಮಂಗಳವಾರ ತೇರುಮಲ್ಲೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಬ್ರಹ್ಮ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿರುವುದು
ಹಿರಿಯೂರಿನಲ್ಲಿ ಮಂಗಳವಾರ ತೇರುಮಲ್ಲೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಬ್ರಹ್ಮ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿರುವುದು   

ಹಿರಿಯೂರು: ನಗರದ ತೇರುಮಲ್ಲೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರವೇರಿತು.

ಹೇಮರೆಡ್ಡಿ ಮಲ್ಲಮ್ಮ ಊರೆಗೋಲಾಗಿ ಬಳಸುತ್ತಿದ್ದಳು ಎನ್ನಲಾದ ಶಿವಧನುಸ್ಸನ್ನು ಬೀರೇನಹಳ್ಳಿಯ ಮಜುರೆ ಕರಿಯಣ್ಣನಹಟ್ಟಿ ಗ್ರಾಮದ ವೀರಕರಿಯಣ್ಣ ದೇವರ ನೇತೃತ್ವದಲ್ಲಿ ಬೆಳಿಗ್ಗೆ 9 ಗಂಟೆಗೆ ಸಮೀಪದ ವೇದಾವತಿ ನದಿಗೆ ಒಯ್ದು ಗಂಗಾಸ್ನಾನ ನೆರವೇರಿಸಿದ ನಂತರ ಮರಳಿ ದೇಗುಲಕ್ಕೆ ತರಲಾಯಿತು. ನಂತರ ತಹಶೀಲ್ದಾರ್ ಎಂ. ಸಿದ್ದೇಶ್ ಸಮಕ್ಷಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ತೇರುಮಲ್ಲೇಶ್ವರ, ಚಂದ್ರಮೌಳೇಶ್ವರ ಹಾಗೂ ಉಮಾಮಹೇಶ್ವರ ದೇವರುಗಳಿಗೆ ಪೂಜೆ ಸಲ್ಲಿಸಿದರು.

ಪೂಜೆಯ ನಂತರ ವೀರಗಾಸೆ, ನಂದಿಕೋಲು ಕುಣಿತ, ಚರ್ಮ ವಾದ್ಯದ ನಡುವೆ ಅಲಂಕರಿಸಿದ ರಥಕ್ಕೆ ದೇವರುಗಳನ್ನು ಕರೆತಂದು ಕೂರಿಸಲಾಯಿತು.

ADVERTISEMENT

60 ಲಕ್ಷಕ್ಕೆ ಹರಾಜಾದ ಮುಕ್ತಿ ಬಾವುಟ

9 ವರ್ಷಗಳಲ್ಲಿ ಸತತ 7ನೇ ಬಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ದಾಖಲೆಯ 60 ಲಕ್ಷ ರೂಪಾಯಿಗೆ  ಮುಕ್ತಿ ಬಾವುಟವನ್ನು ಪಡೆದರು. ಸತೀಶ್ ಗೌಡ ಎನ್ನುವವರು 40 ಲಕ್ಷದವರೆಗೆ ಕೂಗಿದರು. ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೆ. ಅಭಿನಂದನ್ 55 ಲಕ್ಷಕ್ಕೆ ಕೂಗಿದರು. ಅಂತಿಮವಾಗಿ 60 ಲಕ್ಷಕ್ಕೆ ಕೂಗಿದ ಡಿ.ಸುಧಾಕರ್ ಪಾಲಿಗೆ ಮುಕ್ತಿ ಬಾವುಟ ಸೇರಿತು.

ಮುಕ್ತಿ ಬಾವುಟದ ಹರಾಜು ಮುಗಿಯುತ್ತಿದ್ದಂತೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನದ ಮುಂಭಾಗದಿಂದ ಸಿದ್ದನಾಯಕ ವೃತ್ತದವರೆಗೆ ಅಪಾರ ಜನಸ್ತೋಮದ ನಡುವೆ ರಥ ಸಾಗಿತು. ಸಿದ್ದನಾಯಕ ವೃತ್ತದಲ್ಲಿ ಸಾವಿರಾರು ಭಕ್ತರು ದೇವರಿಗೆ ಹರಕೆ ಸಲ್ಲಿಸಿದರು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಬಿರು ಬಿಸಿಲನ್ನು ಲೆಕ್ಕಿಸದೆ ಸಾವಿರಾರು ಭಕ್ತರು ರಥೋತ್ಸವ ವೀಕ್ಷಿಸಿದರು. ರಥ ಎಳೆಯಲು ಸ್ವಲ್ಪ ಸಮಯ ನೂಕುನುಗ್ಗಲು ಉಂಟಾಯಿತು. ಬೀರೇನಹಳ್ಳಿಯ ಮಜುರೆ ಕರಿಯಣ್ಣನಹಟ್ಟಿ ಗ್ರಾಮದ ವೀರಕರಿಯಣ್ಣ ದೇವರನ್ನು ಹೊತ್ತು ತಂದವರು ಕೇಸರಿ ಶಾಲು ಧರಿಸಿ ಗಮನ ಸೆಳೆದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್. ನಾಗೇಂದ್ರನಾಯ್ಕ ಅವರ ಒಂದು ಜೊತೆ, ಕೌಶಿಕ್ ಎನ್ನುವವರ ಮೂರು ಜೊತೆ ಹೋರಿಗಳ ಎತ್ತಿನ ಗಾಡಿ ಮೆರವಣಿಗೆ ಜಾತ್ರೆಗೆ ಮೆರುಗು ತಂದಿತು.

ರಥೋತ್ಸವದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ನಗರಸಭೆ ಪೌರಾಯುಕ್ತ ಎ. ವಾಸೀಂ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಾಪಣ್ಣ, ರಾಜಣ್ಣ, ನಗರಸಭೆ ಮಾಜಿ ಅಧ್ಯಕ್ಷ ಅಜಯ್ ಕುಮಾರ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಅಭಿನಂದನ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಹಮದ್ ಫಕ್ರುದ್ದೀನ್, ಮುಖಂಡರಾದ ಸತೀಶ್ ಗೌಡ, ಕೆಪಿಸಿಸಿ ಸದಸ್ಯ ಅಮೃತೇಶ್ವರಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ಈರಲಿಂಗೇಗೌಡ, ಕಂದಿಕೆರೆ ಸುರೇಶ್ ಬಾಬು, ಗಿಡ್ಡೋಬನಹಳ್ಳಿ ಅಶೋಕ್, ಕಲ್ಲಹಟ್ಟಿ ಹರೀಶ್ ಪಾಲ್ಗೊಂಡಿದ್ದರು.

ತೇರುಮಲ್ಲೇಶ್ವರಸ್ವಾಮಿ ಬ್ರಹ್ಮ ರಥೋತ್ಸವದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್. ನಾಗೇಂದ್ರನಾಯ್ಕ್ ಅವರ ಅಲಂಕೃತ ಎತ್ತಿನ ಬಂಡಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಓಡಿಸಿದರು

ಜಾತ್ರೆಯ ವಿಶೇಷತೆ...

ಈ ಬಾರಿಯ ಉತ್ಸವಕ್ಕೆ ರಥವನ್ನು ಅದ್ಭುತವಾಗಿ ಅಲಂಕರಿಸಲಾಗಿತ್ತು. ರಥದ ಶಿಖರ ಭಾಗದಿಂದ ದೇವರನ್ನು ಪ್ರತಿಷ್ಠಾಪಿಸುವ ಮಂಟಪದವರೆಗೆ ಸೇವಂತಿಗೆ ಹೂವುಗಳಿಂದ ತಯಾರಿಸಿದ ಬೃಹತ್ ಹಾರವನ್ನು ಕಟ್ಟಲಾಗಿತ್ತು. ಮಂಟಪದಿಂದ ಕೆಳಭಾಗಕ್ಕೆ ಬೇರೆ ಬೇರೆ ಹೂವುಗಳಿಂದ ತಯಾರಿಸಿದ ಹಲವು ಹಾರಗಳನ್ನು ಕಟ್ಟಿ ಅಲಂಕರಿಸಿದ್ದು ಇವುಗಳ ನಡುವೆ ತಾಲ್ಲೂಕಿನ ಚಿಕ್ಕಸಿದ್ದವ್ವನಹಳ್ಳಿಯ ಹೂವು ಬೆಳೆಗಾರರು ತಯಾರಿಸಿ ಹಾಕಿದ್ದ ಬೃಹತ್ ಗಾತ್ರದ ಹೂವಿನ ಹಾರ ಎಲ್ಲರ ಗಮನ ಸೆಳೆಯುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.