ADVERTISEMENT

ನನೆಗುದಿಗೆ ಸೇತುವೆ: ಸವಾರ ಹೈರಾಣು

ಕಾಮಗಾರಿ ಆರಂಭಿಸಿ ಮಧ್ಯದಲ್ಲೇ ಬಿಟ್ಟುಹೋದ ಗುತ್ತಿಗೆದಾರ

ವಿ.ಧನಂಜಯ
Published 25 ಮೇ 2022, 2:54 IST
Last Updated 25 ಮೇ 2022, 2:54 IST
ನಾಯಕನಹಟ್ಟಿ ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಒಳಮಠ ಸಮುದಾಯ ಭವನದ ಬಳಿ ಹಾದುಹೋಗಿರುವ ರಾಜ್ಯ ಹೆದ್ದಾರಿ-45ರಲ್ಲಿ ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ವಾಹನ ಸವಾರರು ಹರಸಾಹಸ ಪಡುತ್ತಿರುವುದು.
ನಾಯಕನಹಟ್ಟಿ ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಒಳಮಠ ಸಮುದಾಯ ಭವನದ ಬಳಿ ಹಾದುಹೋಗಿರುವ ರಾಜ್ಯ ಹೆದ್ದಾರಿ-45ರಲ್ಲಿ ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ವಾಹನ ಸವಾರರು ಹರಸಾಹಸ ಪಡುತ್ತಿರುವುದು.   

ನಾಯಕನಹಟ್ಟಿ: ಪಟ್ಟಣದಲ್ಲಿ ಗುರುತಿಪ್ಪೇರುದ್ರಸ್ವಾಮಿ ಒಳಮಠ ಬಳಿ ಹಾದು ಹೋಗಿರುವ ರಾಜ್ಯ ಹೆದ್ದಾರಿ-45ರಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಸವಾರರು ವಾಹನ ಚಲಾಯಿಸಲು ಹರಸಾಹಸ ಪಡಬೇಕಾಗಿದೆ.

ನಾಯಕನಹಟ್ಟಿಯಿಂದ ಜಿಲ್ಲಾ ಹೆದ್ದಾರಿಯ ಮೂಲಕ ಹಾಯ್ಕಲ್, ಬೆಳಗಟ್ಟ, ಚಿತ್ರದುರ್ಗ ನಗರವನ್ನು ಮತ್ತು ರಾಷ್ಟ್ರೀಯ ಹೆದ್ದಾರಿ-150 ಮಾರ್ಗದಲ್ಲಿರುವ ಚಳ್ಳಕೆರೆ, ಹಿರಿಯೂರು, ಬೆಂಗಳೂರು ಸಂಪರ್ಕಿಸಲು ಈ ರಸ್ತೆ ಪ್ರಮುಖ. ಚಳ್ಳಕೆರೆಯಿಂದ ದಾವಣಗೆರೆ ಭಾಗಕ್ಕೂ ಇದೇ ರಸ್ತೆಯಲ್ಲಿಯೇ ಸಂಪರ್ಕ ಕಲ್ಪಿಸುತ್ತದೆ. ಪಟ್ಟಣದಲ್ಲಿ ಹಾದುಹೋಗಿರುವ ರಾಜ್ಯಹೆದ್ದಾರಿ-45ರಲ್ಲಿ ನಿತ್ಯ ನೂರಾರು ವಾಹನಗಳು, ಬಸ್‌ಗಳು, ಖಾಸಗಿ ವಾಹನಗಳು ಸಂಚರಿಸುತ್ತವೆ.

ರಾಜ್ಯ ಹೆದ್ದಾರಿ-45ರಲ್ಲಿ ನಾಯಕನಹಟ್ಟಿಯ ದೊಡ್ಡಕೆರೆ ಮತ್ತು ಚಿಕ್ಕಕೆರೆಯ ಕಾಲುವೆಗಳು, ಹಳ್ಳಗಳು ಹಾದುಹೋಗುತ್ತವೆ.
ಆದರೆ ಪಟ್ಟಣಕ್ಕೆ ಹೊಂದಿಕೊಂಡಿರುವ ಗುರುತಿಪ್ಪೇರುದ್ರಸ್ವಾಮಿ ಸಮುದಾಯ ಭವನದ ಪಕ್ಕದಲ್ಲಿ ಹಾದುಹೋಗಿರುವ ಸಣ್ಣಹಳ್ಳಕ್ಕೆ ಯಾವುದೇ ಸೇತುವೆಗಳಿಲ್ಲ. ಇದರಿಂದಾಗಿ ಮಳೆಗಾಲದಲ್ಲಿ ಸಣ್ಣಹಳ್ಳದಿಂದ ಹರಿದು ಬರುವ ನೀರು ಹೆದ್ದಾರಿಯ ಮೇಲೆ ನಿಲ್ಲುತ್ತದೆ. ಇದರಿಂದ ಕಂದಕಗಳು ಸೃಷ್ಟಿಯಾಗಿವೆ.

ADVERTISEMENT

ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದರೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಾತ್ಕಾಲಿಕವಾಗಿ ಮಾತ್ರ ದುರಸ್ತಿ ಮಾಡುತ್ತಾರೆ. ಅಪಾಯಕಾರಿ ಸಮಸ್ಯೆ ಇದ್ದರೂ ಯಾವೊಬ್ಬ ಜನಪ್ರತಿನಿಧಿಗಳು ಚಿಕ್ಕಹಳ್ಳಕ್ಕೆ ಸುಸಜ್ಜಿತ ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಂಡಿಲ್ಲ. ಆದರೂ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳು ಸಣ್ಣಹಳ್ಳದ ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡಿಕೊಂಡು ತಾವೇ ₹1.50ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಕ್ರಿಯಾಯೋಜನೆ ತಯಾರಿಸಿ ಟೆಂಡರ್ ಕರೆದಿದ್ದಾರೆ. ಕಾಮಗಾರಿ ಟೆಂಡರ್ ಪಡೆದ ಗುತ್ತಿಗೆದಾರ ಕಾಮಗಾರಿ ಆರಂಭಿಸುವ ಮೊದಲೇ ಸ್ಥಳ ಪರಿಶೀಲಿಸಿ ಹಲವು ತಾಂತ್ರಿಕ ಲೋಪಗಳ ನೆಪಹೇಳಿ ಕಾಮಗಾರಿ ನಿಲ್ಲಿಸಿ ನಿರ್ಗಮಿಸಿದ್ದಾರೆ.

ಕಳೆದ ವರ್ಷದ ಫೆಬ್ರುವರಿ ತಿಂಗಳಲ್ಲಿ ಸಣ್ಣಹಳ್ಳಕ್ಕೆ ಸುಸಜ್ಜಿತ ಸೇತುವೆ ನಿರ್ಮಿಸಲು ಲೋಕೋಪಯೋಗಿ ಇಲಾಖೆ ರಸ್ತೆಯನ್ನು ಅಗೆದು ಪಕ್ಕದಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ತಾತ್ಕಾಲಿಕ ರಸ್ತೆಯೂ ಹದಗೆಟ್ಟು ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುತ್ತಿದ್ದಾರೆ. ಮಳೆ ಬಂದ ದಿನ ಇಡೀ ಪ್ರದೇಶ ಕೆಸರುಗದ್ದೆಯಾಗುತ್ತದೆ. ಜತೆಗೆ ಅಪಾರ ಪ್ರಮಾಣದಲ್ಲಿ ಸಂಗ್ರಹವಾಗುವ ಮಳೆ ನೀರು ನಿಂತು ದುರ್ವಾಸನೆ ಬೀರುತ್ತದೆ. ಹಾಗಾಗಿ 15 ತಿಂಗಳು ಕಳೆದರೂ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗುವ ಮನ್ಸೂಚನೆ ಕಾಣುತ್ತಿಲ್ಲ. ಇದರಿಂದ ಸಾರ್ವಜನಿಕರು ಮತ್ತು ವಾಹನ ಸವಾರರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.