ADVERTISEMENT

ತರಕಾರಿ ಬೀಜ ಬೆಳೆದು ಲಾಭ ಕಂಡ ಚಿತ್ರದುರ್ಗದ ಸಹೋದರರು

ನಾಗಗೊಂಡನಹಳ್ಳಿಯ ಸಹೋದರರಿಂದ ಲಾಭದಾಯಕ ಕೃಷಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 6:51 IST
Last Updated 31 ಜನವರಿ 2024, 6:51 IST
ನಾಗಗೊಂಡನಹಳ್ಳಿಯ ರೈತ ಜಿ.ಸಿ ಬಸವರಾಜ್ ಅವರು ಹೀರೇಕಾಯಿ ಬೆಳೆದಿರುವುದು
ನಾಗಗೊಂಡನಹಳ್ಳಿಯ ರೈತ ಜಿ.ಸಿ ಬಸವರಾಜ್ ಅವರು ಹೀರೇಕಾಯಿ ಬೆಳೆದಿರುವುದು   

ಪರಶುರಾಂಪುರ (ಚಿತ್ರದುರ್ಗ): ಸಮೀಪದ ನಾಗಗೊಂಡನಹಳ್ಳಿಯ ರೈತ ಸಹೋದರರಾದ ಜಿ.ಸಿ.ನಾಗರಾಜ ಮತ್ತು ಜಿ.ಸಿ ಬಸವರಾಜ್ ಅವರು ಹೀರೇಕಾಯಿ, ಬೆಂಡೆಕಾಯಿ, ಸೋರೆಕಾಯಿ, ಕುಂಬಳಕಾಯಿ, ದಂಟಿನಸೊಪ್ಪು ಸೇರಿದಂತೆ ವಿವಿಧ ತರಕಾರಿ ಬೆಳೆಗಳನ್ನು ಬೆಳೆದು ಅವುಗಳ ಬೀಜ ಮಾರಾಟದಿಂದ ಕೈ ತುಂಬಾ ಆದಾಯ ಪಡೆಯುತ್ತಿದ್ದಾರೆ. 

ಕಳೆದ 4 ವರ್ಷಗಳಿಂದ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಹಾರ್ಟಿಕಲ್ಚರ್ ರಿಸರ್ಚ್ (ಐ.ಐ.ಎಚ್‌.ಆರ್‌.) ಸಂಸ್ಥೆ ಜೊತೆಗೆ ಒಪ್ಪಂದ ಮಾಡಿಕೊಂಡು ವಿವಿಧ ತರಕಾರಿ ಬೆಳೆ ಬೆಳೆದು, ಅದರಿಂದ ಬೀಜ ತೆಗೆದು ಸಂಸ್ಥೆಗೆ ಮಾರಾಟ ಮಾಡುತ್ತಾ ಉತ್ತಮ ಆದಾಯ ಪಡೆಯುತ್ತಿದ್ದಾರೆ.

ಒಟ್ಟು 12 ಎಕರೆ ಜಮೀನಿನಲ್ಲಿ 6 ಎಕರೆಯಲ್ಲಿ ಅಡಿಕೆ ಬೆಳೆದಿದ್ದಾರೆ. ಇದು ವಾರ್ಷಿಕ ಬೆಳೆಯಾಗಿದೆ. 5 ಎಕರೆಯಲ್ಲಿ ತಿಂಗಳ ಹಿಂದೆ ಹೀರೇಕಾಯಿ ಬೆಳೆ ನಾಟಿ ಮಾಡಲಾಗಿದೆ. ಹೀರೇಕಾಯಿ ಬಳ್ಳಿಯು ಉತ್ತಮವಾಗಿ ಬಂದಿದ್ದು, ಇನ್ನು 4 ತಿಂಗಳು ಕಳೆದರೆ ಕಟಾವಿಗೆ ಬರುತ್ತದೆ. 5 ಎಕರೆಯಲ್ಲಿ 10 ಕ್ವಿಂಟಲ್‌ಗೂ ಹೆಚ್ಚು ಇಳುವರಿ ಬರುವ ನಿರೀಕ್ಷೆ ಇದೆ. 1 ಕ್ವಿಂಟಲ್ ಹೀರೇಕಾಯಿ ಬೀಜಕ್ಕೆ ₹ 1 ಲಕ್ಷ ಬೆಲೆಯಿದ್ದು, ₹ 10 ಲಕ್ಷ ಆದಾಯ ಬರುತ್ತದೆ ಎನ್ನುತ್ತಾರೆ ರೈತ ಬಸವರಾಜ್.

ADVERTISEMENT

‘ಸಂಸ್ಥೆಯಿಂದ ಬೀಜ ನೀಡುತ್ತಾರೆ. ಅದಕ್ಕೆ ಬೇಕಾದ ಗೊಬ್ಬರ, ಔಷಧ ಯಾವ ರೀತಿ, ಯಾವ ಪ್ರಮಾಣದಲ್ಲಿ ಹಾಕಬೇಕು ಎಂದು ಅವರೇ ಮಾರ್ಗದರ್ಶನ ನೀಡುತ್ತಾರೆ. ಅದರಂತೆ ನಾವು ನೋಡಿಕೊಳ್ಳಬೇಕು. ಕಾಲಕಾಲಕ್ಕೆ ನೀರು, ಔಷಧ, ಗೊಬ್ಬರವನ್ನು ನೀಡಿದರೆ ಉತ್ತಮ ಇಳುವರಿ ಪಡೆಯಬಹುದು’ ಎಂದು ಅವರು ತಿಳಿಸುತ್ತಾರೆ.

2022ರಲ್ಲಿ 2 ಎಕರೆಯಲ್ಲಿ ಉತ್ತಮ ರೀತಿಯಲ್ಲಿ ದಂಟಿನಸೊಪ್ಪನ್ನು ಬೆಳೆದಿದ್ದ ರೈತರ ಸಾಧನೆಯನ್ನು ಗುರುತಿಸಿ ಐ.ಐ.ಎಚ್.ಆರ್ ಸಂಸ್ಥೆ  ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಸಂಸ್ಥೆಯು 2 ಎಕರೆಯಲ್ಲಿ 12 ಕ್ವಿಂಟಲ್ ದಂಟಿನ ಸೊಪ್ಪಿನ ಬೀಜ ಬೆಳೆಯುವ ಗುರಿ ನೀಡಿತ್ತು.  ಬಸವರಾಜ್ ಅವರು 19 ಕ್ವಿಂಟಲ್‌ ಗೂ ಹೆಚ್ಚಿನ ಬೀಜವನ್ನು ಬೆಳೆದಿದ್ದರು. 1 ಕೆ.ಜಿ ದಂಟಿನಸೊಪ್ಪಿನ ಬೀಜದ ಬೆಲೆ ₹ 400 ಇದೆ. 1 ಕ್ವಿಂಟಲ್‌ಗೆ ₹ 40,000 ದಂತೆ ಒಟ್ಟು ₹ 7.60 ಲಕ್ಷ ಆದಾಯ ಗಳಿಸಿದ್ದರು.

ಪ್ರತಿದಿನ ಬೆಳೆಯನ್ನು ಪರಿಶೀಲಿಸಬೇಕು. ಏನಾದರೂ ವ್ಯತ್ಯಾಸ ಕಂಡು ಬಂದರೆ ಕೂಡಲೇ ಐ.ಐ.ಎಚ್.ಆರ್ ಸಂಸ್ಥೆಯನ್ನು ಸಂಪರ್ಕಿಸಬೇಕು. ಅವರು ಸೂಚಿಸುವ ಔಷಧ ಬಳಸಬೇಕು
ಜಿ.ಸಿ.ಬಸವರಾಜ ರೈತ ನಾಗಗೊಂಡನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.