ADVERTISEMENT

ಬುದ್ಧ, ಬಸವಣ್ಣ, ಅಂಬೇಡ್ಕರರ ಆಶಯ ಒಂದೇ: ಬಸವ ರಮಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 25 ಮೇ 2025, 13:35 IST
Last Updated 25 ಮೇ 2025, 13:35 IST
ಮಹಾನ್‌ ಮಾನವತಾವಾದಿಗಳಾದ ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಜನ್ಮ ದಿನದ ಪ್ರಯುಕ್ತ ಹಿರಿಯೂರಿನಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ವನಕಲ್ಲು ಮಹಾಸಂಸ್ಥಾನ ಮಠದ ಬಸವ ರಮಾನಂದ ಸ್ವಾಮೀಜಿ ಉದ್ಘಾಟಿಸಿದರು
ಮಹಾನ್‌ ಮಾನವತಾವಾದಿಗಳಾದ ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಜನ್ಮ ದಿನದ ಪ್ರಯುಕ್ತ ಹಿರಿಯೂರಿನಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ವನಕಲ್ಲು ಮಹಾಸಂಸ್ಥಾನ ಮಠದ ಬಸವ ರಮಾನಂದ ಸ್ವಾಮೀಜಿ ಉದ್ಘಾಟಿಸಿದರು    

ಹಿರಿಯೂರು: ಸರ್ವರಿಗೂ ಸಮಪಾಲು-ಸಮಬಾಳು ಕಲ್ಪಿಸುವ ವಿಚಾರದಲ್ಲಿ ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಆಶಯಗಳು ಒಂದೇ ಆಗಿದ್ದವು ಎಂದು ನೆಲಮಂಗಲ ಸಮೀಪದ ವನಕಲ್ಲು ಮಹಾಸಂಸ್ಥಾನ ಮಠದ ಬಸವ ರಮಾನಂದ ಸ್ವಾಮೀಜಿ ತಿಳಿಸಿದರು.

ನಗರದ ವೀನಸ್ ಹಾಲ್ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಮಹಾನ್‌ ಮಾನವತಾವಾದಿಗಳಾದ ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಜನ್ಮ ದಿನದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

ಸಮಾನತೆ, ಪ್ರೀತಿ, ಕರುಣೆ, ದಯೆ ಹಾಗೂ ಅಹಿಂಸಾ ತತ್ವಗಳನ್ನು ಪ್ರತಿಪಾದಿಸಿದ ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಹುಟ್ಟಿದ ದೇಶದಲ್ಲಿ ಕೆಲವರು ಇಂದಿಗೂ ಸೂರಿಲ್ಲದೆ ಅಲೆಮಾರಿ ಜೀವನ ಸಾಗಿಸುತ್ತಿರುವುದು ಅಸಮಾನತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಚಿತ್ರದುರ್ಗ ಮುಠಾಘಮಠದ ಬಸವಕುಮಾರ ಸ್ವಾಮೀಜಿ ತಿಳಿಸಿದರು.

ADVERTISEMENT

‘ಬಸವಣ್ಣನವರು ದುಡಿಯುವ ವರ್ಗದವರನ್ನು ದೇವರು ಎಂದು ಕರೆದರು. ಪ್ರಜಾಪ್ರಭುತ್ವದ ಮೂಲ ಬೇರು ಹುಟ್ಟಿದ್ದು ಇವರ ಕಾಲದಲ್ಲಿ. ಅವರ ಕಾಯಕವೇ ಕೈಲಾಸ ಎಂಬ ತತ್ವಕ್ಕೆ ಇಡೀ ವಿಶ್ವವೇ ತಲೆಬಾಗಿದೆ. ನಾವು ಮಾನವೀಯತೆಯಿಂದ ಬದುಕುವುದು, ಸನ್ಮಾರ್ಗದಲ್ಲಿ ನಡೆಯುವುದು, ದುಡಿಯುವ ವರ್ಗವನ್ನು ಗೌರವಿಸುವುದನ್ನು ಕಲಿಯಬೇಕಿದೆ’ ಎಂದು ಸಲಹೆ ನೀಡಿದರು.

ನಾವು ಜೀವನದಲ್ಲಿ ಯಾವುದು ಸತ್ಯ-ಅಸತ್ಯ ಅಥವಾ ಸರಿ-ತಪ್ಪು ಎಂದು ಅರ್ಥೈಸಿಕೊಂಡು ಉತ್ತಮವಾದುದನ್ನು ಅನುಸರಿಸಿ ನಡೆದರೆ ಬುದ್ಧರಾಗಬಹುದು. ದೇವರಿಲ್ಲ ಎಂಬ ಸತ್ಯ ತಿಳಿದಿದ್ದ ಬುದ್ಧ ಜಗತ್ತಿಗೇ ಬೆಳಕು ನೀಡಿದರು. ಆದರೂ ಶೇ 90ರಷ್ಟು ಜನರಲ್ಲಿ ಮೌಢ್ಯ ಹಾಸುಹೊಕ್ಕಾಗಿದ್ದು, ಅದರಿಂದ ಹೊರಬಂದು ಜ್ಞಾನವನ್ನು ದಕ್ಕಿಸಿಕೊಳ್ಳಬೇಕು. ಬುದ್ಧನ ಆರಾಧನೆಗಿಂತ ತತ್ವಗಳ ಅನುಸರಣೆ ಮುಖ್ಯ ಎಂದು ಸಾಹಿತಿ ಹ.ರಾ.ಮಹೇಶ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಜೆ.ಕರಿಯಪ್ಪ ಮಾಳಿಗೆ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಪತ್ರಕರ್ತ ಎಂ.ಎನ್.ಅಹೋಬಲಪತಿ ಮಾತನಾಡಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದ ಮೌಲ್ಯ ಡಿ. ರಾಜ್ ಮತ್ತು ಎಚ್.ಒ.ನಂದನ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಹನುಮಂತ ರಾಯಪ್ಪ, ವಾಸವಿ ಯುವ ಜನ ಸಂಘದ ಅಧ್ಯಕ್ಷ ಜಗದೀಶ್, ಮುಖಂಡ ಜಿ.ಎಲ್.ಮೂರ್ತಿ, ಎನ್.ಬಸವರಾಜ್ ಅವರನ್ನು ಸನ್ಮಾನಿಸಲಾಯಿತು.

ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ರಮೇಶ್, ನಗರಸಭಾ ಸದಸ್ಯರಾದ ಈರಲಿಂಗೇಗೌಡ, ಎಂ.ಡಿ.ಸಣ್ಣಪ್ಪ, ಕಸಾಪ ಕೋಶಾಧ್ಯಕ್ಷ ಜಿ.ಪ್ರೇಮ್‌ಕುಮಾರ್, ಮೊಹಮ್ಮದ್ ಫಕ್ರುದ್ದೀನ್, ಶಶಿಕಲಾ, ಜಿ.ಧನಂಜಯಕುಮಾರ್, ಹರ್ತಿಕೋಟೆ ಮಹಾಸ್ವಾಮಿ, ಚಂದ್ರಶೇಖರ್, ಬಿ.ಪಿ.ತಿಪ್ಪೇಸ್ವಾಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.