ADVERTISEMENT

ಸರ್ವೀಸ್‌ ರಸ್ತೆಗೇ ಇಳಿಯದ ಬಸ್ಸುಗಳು!

ಸಾರಿಗೆ ಸಚಿವರ ಸ್ವಕ್ಷೇತ್ರದಲ್ಲೇ ಪ್ರಯಾಣಿಕರ ಪರದಾಟ

ಕೊಂಡ್ಲಹಳ್ಳಿ ಜಯಪ್ರಕಾಶ
Published 29 ಡಿಸೆಂಬರ್ 2022, 4:54 IST
Last Updated 29 ಡಿಸೆಂಬರ್ 2022, 4:54 IST
ಮೊಳಕಾಲ್ಮುರು ತಾಲ್ಲೂಕಿನ ಬಿ.ಜಿ.ಕೆ ರೆಯಲ್ಲಿ ಬಸ್‌ಗೆ ಕಾಯುತ್ತಿರುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು (ಎಡಚಿತ್ರ). ದೇವಸಮುದ್ರ ಕ್ರಾಸ್‌ನಲ್ಲಿ ಸ್ಥಾಪಿಸಿರುವ ಸಾರಿಗೆ ತಾತ್ಕಾಲಿಕ ನಿಯಂತ್ರಕರ ಕೊಠಡಿ ಬಾಗಿಲು ಮುಚ್ಚಿರುವುದು.
ಮೊಳಕಾಲ್ಮುರು ತಾಲ್ಲೂಕಿನ ಬಿ.ಜಿ.ಕೆ ರೆಯಲ್ಲಿ ಬಸ್‌ಗೆ ಕಾಯುತ್ತಿರುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು (ಎಡಚಿತ್ರ). ದೇವಸಮುದ್ರ ಕ್ರಾಸ್‌ನಲ್ಲಿ ಸ್ಥಾಪಿಸಿರುವ ಸಾರಿಗೆ ತಾತ್ಕಾಲಿಕ ನಿಯಂತ್ರಕರ ಕೊಠಡಿ ಬಾಗಿಲು ಮುಚ್ಚಿರುವುದು.   

ಮೊಳಕಾಲ್ಮುರು: ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ– 150 ‘ಎ’ನಲ್ಲಿ ಸಂಚರಿಸುವ ರಾಜ್ಯ ಸಾರಿಗೆ ಸಂಸ್ಥೆ ಅನೇಕ ಬಸ್‌ಗಳು ಸರ್ವೀಸ್‌ (ಸೇವಾ) ರಸ್ತೆಗೆ ಇಳಿಯದ ಪರಿಣಾಮ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ.

ಇದುವರೆಗೆ ರಾಜ್ಯ ಹೆದ್ದಾರಿಯಾಗಿದ್ದ ಈ ರಸ್ತೆಯನ್ನು 2 ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿಗೆ ಮೇಲ್ದರ್ಜೇಗೇರಿಸಲಾಯಿತು. ಈ ಸಮಯದಲ್ಲಿ ರಸ್ತೆ ಅಭಿವೃದ್ಧಿಪಡಿಸುವಾಗ ಅನೇಕ ಗ್ರಾಮಗಳ ಆಸುಪಾಸಿನಲ್ಲಿ ಫ್ಲೈ ಓವರ್ ನಿರ್ಮಿಸಲಾಗಿದೆ. ಗ್ರಾಮಕ್ಕೆ ಹೋಗಲು ಸರ್ವೀಸ್‌ ರಸ್ತೆ ನಿರ್ಮಿಸಲಾಗಿದ್ದು, ಸಾರಿಗೆ ಸಂಸ್ಥೆ ಬಸ್‌ಗಳು ಆ ರಸ್ತೆಗೇ ಇಳಿಯದೇ ಹೆದ್ದಾರಿಯಲ್ಲಿ ನಿಲುಗಡೆ ನೀಡುತ್ತಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ.

ಹಿರೇಹಳ್ಳಿ, ಬಿ.ಜಿ.ಕೆರೆ, ರಾಯಾಪುರ, ಹಾನಗಲ್, ನಾಗಸಮುದ್ರ, ಅಮಕುಂದಿ, ರಾಂಪುರ ಸೇರಿದಂತೆ ಹಲವು ಗ್ರಾಮಗಳ ಸಂಪರ್ಕ ಕಲ್ಪಿಸಲೆಂದು ಹಾಗೂ ಸುರಕ್ಷಿತ ಸಂಚಾರದ ಉದ್ದೇಶದಿಂದ ಫ್ಲೈ ಓವರ್ ನಿರ್ಮಿಸಲಾಗಿದೆ. ಪ್ರತಿ ಗ್ರಾಮವೂ 15-20 ಹಳ್ಳಿಗಳಿಗೆ ಕೇಂದ್ರಸ್ಥಳವಾಗಿದೆ. ನೂರಾರು ಜನ ನಿತ್ಯ ಬಸ್‌ಗಾಗಿ ಕಾಯುತ್ತಾರೆ. ನಿಲುಗಡೆ ಇದ್ದರೂ ಅನೇಕ ಬಸ್‌ಗಳು ಹೆದ್ದಾರಿಯಲ್ಲಿ ನೇರವಾಗಿ ಹೋಗುತ್ತಿರುವುದರಿಂದ ಅನನುಕೂಲವಾಗಿದೆ. ವಿದ್ಯಾರ್ಥಿಗಳ ಪಾಡು ಹೇಳತೀರದು ಎಂದು ದೂರಲಾಗಿದೆ.

ADVERTISEMENT

‘ಬೆಂಗಳೂರಿನಿಂದ ಬಳ್ಳಾರಿ ಕಡೆಗೆ ಹೋಗುವ ಅನೇಕ ಬಸ್‌ಗಳ ಚಾಲಕರು ಚಳ್ಳಕೆರೆ ಬಿಟ್ಟರೆ ಹಾನಗಲ್‌ನಲ್ಲಿ ಮಾತ್ರ ನಿಲ್ಲಿಸಿ ಬಳ್ಳಾರಿಯತ್ತ ಸಾಗುತ್ತಾರೆ. ವಾಪಸ್ ಹೋಗುವಾಗಲೂ ಇದೇ ರೀತಿ ಮಾಡುತ್ತಿದ್ದಾರೆ. ಹಾನಗಲ್ ನಂತರ ನೇರವಾಗಿ ಚಳ್ಳಕೆರೆಯಲ್ಲಿ ನಿಲುಗಡೆ ಮಾಡುತ್ತಾರೆ. ಪ್ರಯಾಣಿಕರು ಪ್ರಶ್ನೆ ಮಾಡಿದರೆ ಸಬೂಬು ಹೇಳುತ್ತಾರೆ. ರಾತ್ರಿ ವೇಳೆ ತೀವ್ರ ತೊಂದರೆಯಾಗುತ್ತಿದೆ. ಆಂಧ್ರ ಸಂಪರ್ಕ ಬಸ್ ಎಂದು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುವುದಿಲ್ಲ’ ಎಂದು ನಾಗನಗೌಡ ದೂರಿದರು.

‘ಹೆದ್ದಾರಿ ಅಭಿವೃದ್ಧಿಯ ನಂತರ ಅನುಕೂಲವಾಗುತ್ತದೆ ಎಂದು ನಂಬಿದ್ದೆವು. ಆದರೆ ಸಮಸ್ಯೆ ಹೆಚ್ಚಿದೆ. ರಸ್ತೆ ಅಭಿವೃದ್ಧಿ ಹೊಣೆ ಹೊತ್ತ ಕಂಪನಿ ಸರ್ವೀಸ್‌ ರಸ್ತೆಗಳಲ್ಲಿ ಸೂಕ್ತ ಬಸ್ ನಿಲ್ದಾಣ ನಿರ್ಮಿಸಿಲ್ಲ. ಬಿಸಿಲಿನಲ್ಲಿ ಬಹಳ ಹೊತ್ತು ಚಾತಕಪಕ್ಷಿಯಂತೆ ಕಾಯಬೇಕಿದೆ. ಬೆಳಿಗ್ಗೆ ವಿದ್ಯಾರ್ಥಿಗಳು ಇರುತ್ತಾರೆ ಎಂದು ಹಲವು ಚಾಲಕರು ಸರ್ವೀಸ್‌ ರಸ್ತೆಗಳಿಗೆ ಬಾರದ ಕಾರಣ ಸಮಯಕ್ಕೆ ಸರಿಯಾಗಿ ಕಾಲೇಜು ತಲುಪಲು ಅಡ್ಡಿಯಾಗಿದೆ. ರಿಯಾಯಿತಿ ದರದ ಪಾಸ್ ಇದ್ದರೂ ತುರ್ತು ಸಮಯದಲ್ಲಿ ವಿದ್ಯಾರ್ಥಿಗಳು ಖಾಸಗಿ ಬಸ್‌ ಆಶ್ರಯಿಸುವ ಕಾರಣ ಪಾಸ್ ವ್ಯವಸ್ಥೆ ಇದ್ದೂ ಇಲ್ಲದಂತಾಗಿದೆ’ ಎಂದು ಕೊಂಡ್ಲಹಳ್ಳಿಯ ಅನಂತಕುಮಾರ್ ದೂರಿದರು.

ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರ ಸ್ವಕ್ಷೇತ್ರ ಮೊಳಕಾಲ್ಮುರು. ಸಮಸ್ಯೆ ಬಗ್ಗೆ ಸಾರಿಗೆ ಅಧಿಕಾರಿಗಳ ಗಮನಕ್ಕೆ ಅನೇಕ ಸಲ ತರಲಾಗಿದೆ. ಪರಿಶೀಲನೆಯ ಭರವಸೆ ಮಾತ್ರ ಸಿಕ್ಕಿದೆ. ರಾತ್ರಿ ಸಮಯದಲ್ಲಿ ಹೆದ್ದಾರಿ ಮೇಲೆ ಬೇಕಾಬಿಟ್ಟಿ ಪ್ರಯಾಣಿಕರನ್ನು ಇಳಿಸಿ ಹೋಗುತ್ತಿದ್ದು ಅನಾಹುತವಾದಲ್ಲಿ ಯಾರು ಹೊಣೆ. ಕಡ್ಡಾಯವಾಗಿ ಸರ್ವೀಸ್‌ ರಸ್ತೆಗಳಲ್ಲಿ ಹೋಗಿ ಬರಬೇಕು ಎಂದು ಖಡಕ್ ಆಗಿ ಸೂಚಿಸುವ ಮೂಲಕ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ.

ಸದಾ ಮುಚ್ಚಿರುವ ನಿಯಂತ್ರಕರ ಕೊಠಡಿ

ರಾಂಪುರಕ್ಕೆ ಬಸ್‌ಗಳು ಬಂದು ಹೋಗುವುದಿಲ್ಲ ಎಂಬ ದೂರು ಬಂದ ನಂತರ ಚಿತ್ರದುರ್ಗ ವಿಭಾಗದವರು ದೇವಸಮುದ್ರ ಕ್ರಾಸ್‌ನಲ್ಲಿ ತಾತ್ಕಾಲಿಕವಾಗಿ ಸಂಚಾರ ನಿಯಂತ್ರಕರ ಕೊಠಡಿ ನಿರ್ಮಿಸಿದ್ದಾರೆ. ಅಲ್ಲಿ ಕಡ್ಡಾಯವಾಗಿ ಸಾರಿಗೆ ಸಂಸ್ಥೆಯ ಬಸ್‌ಗಳು ಸಂಖ್ಯೆ ನೋಂದಣಿ ಮಾಡಿಸಬೇಕಿದೆ. ಅಚ್ಚರಿ ಎಂದರೆ ಈ ಕೊಠಡಿಯು ಸದಾ ಬಾಗಿಲು ಮುಚ್ಚಿರುತ್ತದೆ. ಇನ್ನು ಬಸ್‌ನವರು ಬಂದು ಹೋದ ಮಾಹಿತಿ ಯಾರಿಗೆ ನೀಡಬೇಕು ಎಂದು ಡಿಕೆಆರ್ ಸಂಸ್ಥೆಯ ಎಂ.ಡಿ. ಮಂಜುನಾಥ್ ಪ್ರಶ್ನಿಸಿದರು.

ಸಮಸ್ಯೆ ಬಗ್ಗೆ ಸಾರಿಗೆ ಸಂಸ್ಥೆಗೆ ಮನವಿ ಸಲ್ಲಿಸಿದ ನಂತರ ಪರಿಸ್ಥಿತಿ ಸುಧಾರಣೆಯಾಗಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಬಸ್‌ಗಳು ಬಂದು ಹೋಗುತ್ತಿಲ್ಲ.

- ಪರಮೇಶ್ವರಪ್ಪ, ಅಧ್ಯಕ್ಷರು, ಗ್ರಾಮ ಪಂಚಾಯಿತಿ, ರಾಂಪುರ

ರಾತ್ರಿ ವೇಳೆ ಅನೇಕ ಬಸ್‌ಗಳನ್ನು ನಿಲ್ಲಿಸುತ್ತಿಲ್ಲ. ಕುಟುಂಬ ಸಮೇತ ಹೋದವರು ಹೆಚ್ಚು ಸಮಸ್ಯೆಗೆ ಒಳಗಾಗುತ್ತಿರುವುದು ಗಮನಕ್ಕೆ ಬಂದಿದೆ. ಅಧಿಕಾರಿಗಳು ಗಮನಹರಿಸಬೇಕು.

- ಜನಸಂಸ್ಥಾನ ವಿರೂಪಾಕ್ಷಪ್ಪ, ಮೊಳಕಾಲ್ಮುರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.