ADVERTISEMENT

ಪ್ರಮುಖ ಗ್ರಾಮಗಳಲ್ಲಿ ಬಸ್‌ ನಿಲ್ಲಿಸಿ: ಸಾರ್ವಜನಿಕರ ಆಗ್ರಹ

ಬಸ್‌ ಹಿಡಿಯಲು ಹರಸಾಹಸ; ಜಿಲ್ಲಾಡಳಿತ ಗಮನಹರಿಸಲು ಸಾರ್ವಜನಿಕರ ಆಗ್ರಹ

ಕೊಂಡ್ಲಹಳ್ಳಿ ಜಯಪ್ರಕಾಶ
Published 7 ಜನವರಿ 2021, 3:47 IST
Last Updated 7 ಜನವರಿ 2021, 3:47 IST
.
.   

ಮೊಳಕಾಲ್ಮುರು: ರಾಷ್ಟ್ರೀಯ ಹೆದ್ದಾರಿ 150 ‘ಎ’ನ ಇಕ್ಕೆಲಗಳಲ್ಲಿ ಇರುವ ದೊಡ್ಡ ಗ್ರಾಮಗಳಿಗೆ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್‌ಗಳನ್ನು ಕಡ್ಡಾಯವಾಗಿ ನಿಲುಗಡೆ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಈಚೆಗೆ ಹೆದ್ದಾರಿ ನವೀಕರಣ ಮಾಡಲಾಗಿದ್ದು, ಅನೇಕ ಗ್ರಾಮಗಳ ವ್ಯಾಪ್ತಿಯಲ್ಲಿ ಮೇಲ್ಸೇತುವೆ ನಿರ್ಮಿಸಿರುವ ಕಾರಣ ಬಸ್‌ಗಳು ಕೆಳಗಡೆ ಬರುತ್ತಿಲ್ಲ. ಇದರಿಂದ ಪ್ರಯಾಣಿಕರು, ವಿದ್ಯಾರ್ಥಿಗಳು ಬಸ್‌ಗಳನ್ನು ಹಿಡಿಯಲು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಅನೇಕ ಸಾರಿಗೆ ಬಸ್‌ಗಳು ಸ್ವಲ್ಪ ಸೀಟುಗಳು ಭರ್ತಿಯಾಗಿದ್ದರೂ ಸಾಕು ಮೇಲ್ಸೇತುವೆ ಮೇಲೆ ಹೋಗುತ್ತವೆ. ಪರಿಣಾಮ ಗಂಟೆಗಟ್ಟಲೆ ಬಸ್‌ಗಳಿಗೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥ ಮಂಜುನಾಥ್, ಲಿಂಗಣ್ಣ ದೂರಿದರು.

ADVERTISEMENT

ಮುಖ್ಯವಾಗಿ ಹೆದ್ದಾರಿಯಲ್ಲಿನ ನಾಗಸಮುದ್ರ, ರಾಯಪುರ, ಬಿ.ಜಿ.ಕೆರೆ, ಹಿರೇಹಳ್ಳಿ, ತಳಕು ಇಲ್ಲಿ ಕಡ್ಡಾಯವಾಗಿ ಒಳಗಡೆ ಬಂದು ಹೋಗುವಂತೆ ಮಾಡಬೇಕು. ಇಲ್ಲವಾದರೆ ತೊಂದರೆಯಾಗುತ್ತದೆ. ತಾಲ್ಲೂಕಿನ ದೊಡ್ಡ ಗ್ರಾಮವಾಗಿರುವ ನಾಗಸಮುದ್ರ ಮತ್ತು ಸುತ್ತಮುತ್ತಲಿನವರು ಬಸ್ ನಿಲುಗಡೆ ಇಲ್ಲದ ಕಾರಣ ರಾಂಪುರ ಇಲ್ಲವೇ ಹಾನಗಲ್ ಟಿಕೆಟ್ ಪಡೆದು ಪ್ರಯಾಣಿಸಬೇಕಿದೆ.

‘ಖಾಸಗಿ ಬಸ್‌ಗಳು ಸಹ ಇಲ್ಲಿ ನಿಲ್ಲಿಸುವುದಿಲ್ಲ. ಈ ಭಾಗದ ವಿದ್ಯಾರ್ಥಿಗಳ ಪಾಡು ಹೇಳತೀರ ದಾಗಿದೆ. ಆಟೊಗಳಲ್ಲಿ ಹೋಗಿ ಬಸ್‌ಗಳನ್ನು ಹಿಡಿದು ಬಳ್ಳಾರಿಗೆ ಹೋಗ ಬೇಕು. ಬರುವುದು ಸ್ವಲ್ಪ ತಡವಾದರೆ ಗ್ರಾಮಗಳಿಗೆ ಹೇಗೆ ಹೋಗುವುದು ಎಂಬ ಚಿಂತೆ ಕಾಡುತ್ತದೆ’ ಎಂದು ನಾಗ ಸಮುದ್ರ ಗೋವಿಂದಪ್ಪ ಹೇಳಿದರು.

ಹಿರೇಹಳ್ಳಿ, ಬಿ.ಜಿ.ಕೆರೆ, ರಾಯಪುರ ಮತ್ತು ನಾಗಸಮುದ್ರ 20- 25ಕ್ಕೂ ಹೆಚ್ಚು ಹಳ್ಳಿಗಳಿಗೆ ಕೇಂದ್ರ ಸ್ಥಳವಾಗಿವೆ. ಇಲ್ಲಿಗೆ ಬಂದು ಹಳ್ಳಿ ಜನ ಬಸ್‌ ಹತ್ತಬೇಕಿದೆ. ಇಲ್ಲಿ ಈಗ ಮೇಲ್ಸೇತುವೆ ಆರಂಭವಾಗುವ ಸ್ಥಳಕ್ಕೆ ಹೋಗಿ ನಿಂತು ಬಸ್‌ ಹಿಡಿಯಬೇಕಿದೆ. ರಾತ್ರಿ ವೇಳೆ ಸಮಸ್ಯೆ ತೀವ್ರವಾಗುತ್ತಿದೆ. ಬೆಂಗಳೂರು ಭಾಗಕ್ಕೆ ಹೋಗುವ ಕಾರ್ಮಿಕರು ಲಗೇಜ್ ಹೊತ್ತುಕೊಂಡು ಬಸ್‌ಗಳಿಗೆ ಕಾಯುವ ಸ್ಥಿತಿ ಕರುಣಾಜನಕವಾಗಿದೆ.

ಆದ್ದರಿಂದ ಈ ಗ್ರಾಮಗಳಿಗೆ ಸಾರಿಗೆ ಬಸ್‌ಗಳ ನಿಲುಗಡೆ ಕಡ್ಡಾಯ ನಿಲುಗಡೆ ಮಾಡಬೇಕು. ಜತೆಗೆ ಟಿಕೆಟ್ ಮಿಷನ್‌ನಲ್ಲಿ ಗ್ರಾಮದ ಹೆಸರು ನಮೂದು ಮಾಡಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.