ADVERTISEMENT

‘ಪೌರತ್ವ ತಿದ್ದುಪಡಿ’ ಸಂವಿಧಾನ ವಿರೋಧಿ

ಸಂಸ್ಕೃತಿ ಚಿಂತಕ ಶಿವಸುಂದರ್‌ ಆರೋಪ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 15:52 IST
Last Updated 4 ಜನವರಿ 2020, 15:52 IST
ಶಿವಸುಂದರ್‌
ಶಿವಸುಂದರ್‌   

ಚಿತ್ರದುರ್ಗ: ಧರ್ಮದ ಆಧಾರದ ಮೇರೆಗೆ ತಾರತಮ್ಯ ಎಸಗುವ ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುವ ಹೋರಾಟ ಸ್ವಾತಂತ್ರ್ಯ ಚಳವಳಿಯ ಸ್ವರೂಪದಲ್ಲಿ ಇರಬೇಕು ಎಂದು ಸಂಸ್ಕೃತಿ ಚಿಂತಕ ಶಿವಸುಂದರ್‌ ಅಭಿಪ್ರಾಯಪಟ್ಟರು.

ಡಾ.ಬಿ.ಆರ್.ಅಂಬೇಡ್ಕರ್ ಹೋಪ್ ಇಂಡಿಯಾ ಫೌಂಡೇಶನ್, ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆ ‘ಸಂವಿಧಾನದ ಆಶಯಗಳು ಮತ್ತು ಎನ್‍ಆರ್‌ಸಿ, ಸಿಎಎ ಮತ್ತು ಎನ್‍ಪಿಆರ್’ ಬಗ್ಗೆ ಪತ್ರಿಕಾ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

‘ಪ್ರಜಾತಾಂತ್ರಿಕ ರಾಷ್ಟ್ರಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಗೆ ಅವಕಾಶವಿಲ್ಲ. ‍ಪೌರತ್ವ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು. ಅದನ್ನು ಸರ್ಕಾರವೇ ನೀಡಬೇಕು. ಪೌರತ್ವ ಸಾಭೀತುಪಡಿಸಲು ಕಾಯ್ದೆಯು ಪ್ರತಿಯೊಬ್ಬರ ದಾಖಲೆ ಕೇಳುತ್ತಿದೆ. ಸರ್ಕಾರಿ ಕಚೇರಿಗಳ ಎದುರು ಎಲ್ಲರೂ ಸರತಿ ಸಾಲಿನಲ್ಲಿ ನಿಲ್ಲಬೇಕಿದೆ. ಇಂತಹ ದಯನೀಯ ಸ್ಥಿತಿಯನ್ನು ಕೇಂದ್ರ ಸರ್ಕಾರ ತಂದೊಡ್ಡಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಪೌರತ್ವ ಕಾಯ್ದೆಯ ಮೂಲಕ ಮುಸ್ಲಿಮರ ಎದೆಗೆ ಚೂರಿ ಹಾಕಲಾಗಿದೆ. ಇದು ಕೇವಲ ಮುಸ್ಲಿಂ ಸಮುದಾಯದ ಮೇಲಿನ ದಾಳಿಯಲ್ಲ. ದಲಿತರು, ಆದಿವಾಸಿಗಳು ಹಾಗೂ ಹಿಂದುಳಿದ ವರ್ಗದ ಜನರ ಬೆನ್ನಿಗೂ ಚೂರಿ ಹಾಕುವ ಕೆಲಸವನ್ನು ಬಿಜೆಪಿ ಮಾಡಿದೆ. ಅಸ್ಸಾಂ ರಾಜ್ಯದಲ್ಲಿ ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ತೊಂದರೆ ಆಗಿಲ್ಲ. ಇತರ ಧರ್ಮೀಯರು ಕೂಡ ಬಂಧನಕ್ಕೆ ಒಳಗಾಗಿದ್ದಾರೆ. ನ್ಯಾಯಾಲಯದ ಮೆಟ್ಟಿಲೇರಿದರೂ ಪ್ರಯೋಜನವಾಗಿಲ್ಲ’ ಎಂದು ಹೇಳಿದರು.

‘ಪೌರತ್ವ ಕಾಯ್ದೆಯ ಜಾರಿಯ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಬಿಜೆಪಿ ಹವಣಿಸುತ್ತಿರುವುದು ಸ್ಪಷ್ಟವಾಗಿದೆ. ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ಸೋಮಶೇಖರ ರೆಡ್ಡಿ ಅವರ ಹೇಳಿಕೆಗಳು ಬಿಜೆಪಿಯ ನೈಜ ಮನಸ್ಥಿತಿಯ ಪ್ರತಿಬಿಂಬ. ಅಲ್ಪಸಂಖ್ಯಾತರು, ಶೋಷಿತರು ಹಾಗೂ ಶ್ರಮಿಕರ ಬಗ್ಗೆ ಬಿಜೆಪಿ ತಳೆದಿರುವ ಧೋರಣೆ ಇವರ ಮಾತುಗಳ ಮೂಲಕ ಗೋಚರವಾಗಿದೆ’ ಎಂದು ಹೇಳಿದರು.

ಫಾದರ್ ರೆವರೆಂಡ್ ರಾಜು, ‘ಅಹಿಂದ’ ಹೋರಾಟಗಾರ ಮುರುಘ ರಾಜೇಂದ್ರ ಒಡೆಯರ್, ವಕೀಲರಾದ ಬಿ.ಕೆ.ರಹಮತ್ ಉಲ್ಲಾ, ಶಿವು ಯಾದವ್, ಪತ್ರಕರ್ತ ನರೇನಹಳ್ಳಿ ಅರುಣ್‍ಕುಮಾರ್, ಕಟ್ಟಡ ಕಾರ್ಮಿಕರ ಮುಖಂಡ ವೈ.ಕುಮಾರ್, ಬಾಳೆಕಾಯಿ ಶ್ರೀನಿವಾಸ್, ಬಂಜಾರ ಸಮಾಜದ ಮುಖಂಡ ರಾಘವೇಂದ್ರ ನಾಯ್ಕ್ ಸಂವಾದದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.