ಮೊಳಕಾಲ್ಮುರು: ಪಟ್ಟಣದ ವಿವಿಧ ರಸ್ತೆ ಬದಿ ಹೋಟೆಲ್, ಬೇಕರಿ, ತಿಂಡಿ ತಯಾರಿಕೆ ಘಟಕಗಳಿಗೆ ಬುಧವಾರ ಆರೋಗ್ಯ ಇಲಾಖೆ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಪಟ್ಟಣ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಜಂಟಿಯಾಗಿ ದಾಳಿ ನಡೆಸಿದರು. ಈ ವೇಳೆ ಆವರಣದ ಸ್ವಚ್ಛತೆ, ಆಹಾರ ಸಾಮಗ್ರಿಗಳನ್ನು ತಯಾರಿಸುವ ಬಗ್ಗೆ, ಬಳಕೆ ಮಾಡುವ ಸಾಮಗ್ರಿಗಳ ಬಗ್ಗೆ, ಜಂಕ್‌ಫುಡ್ ಗಳಿಗೆ ಹೆಚ್ಚಿನ
ಬಣ್ಣ ಹಾಕುವ ಕುರಿತು, ಶುದ್ಧ ಕುಡಿಯುವ ನೀರು ನೀಡುತ್ತಿರುವ ಬಗ್ಗೆ, ತಟ್ಟೆ, ಲೋಟಗಳನ್ನು ಸ್ವಚ್ಛ ಮಾಡುವ ಬಗ್ಗೆ ಪರಿಶೀಲಿಸಿದರು.
ಕೆಲ ಬೇಕರಿಗಳಲ್ಲಿ ಕೇಕ್ ತಯಾರಿಕೆ ವೇಳೆ ನೂಸ್ ಪೇಪರ್ ಬಳಕೆ ಮಾಡುತ್ತಿರುವುದನ್ನು ನಿಲ್ಲಿಸುವಂತೆ ಸೂಚಿಸಲಾಯಿತು. ಗೋಬಿ, ಎಗ್‌ರೈಸ್, ಕಬಾಬ್‌ಗೆ ಹೆಚ್ಚಿನ ಬಣ್ಣ ಹಾಕುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಈಗಾಗಲೇ ಎರಡು ಸಲ ಭೇಟಿ ನೀಡಿ ಸಲಹೆ , ಸೂಚನೆ ನೀಡಲಾಗಿದೆ. ಆದರೂ ತಪ್ಪುಗಳು ಮರುಕಳಿಸುತ್ತಿದ್ದು ಇದು ಮುಂದುವರಿದಲ್ಲಿ ಅಂಗಡಿಗಳ ಪರವಾನಗಿ ರದ್ದುಪಡಿಸುವುದಾಗಿ ಎಚ್ಚರಿಸಿದರು.
ಆಹಾರ ಸುರಕ್ಷತಾ ಅಧಿಕಾರಿ ಮಂಜುನಾಥ್, ಆರೋಗ್ಯ ನಿರೀಕ್ಷಕ ಟಿ. ಕುಮಾರ್, ಆರೋಗ್ಯ ಶಿಕ್ಷಣಾಧಿಕಾರಿ ಸಿದ್ದೇಶ್, ಪಟ್ಟಣ ಪಂಚಾಯಿತಿ ಆರೋಗ್ಯ ನಿಯಂತ್ರಣಾಧಿಕಾರಿ ಶ್ರೀನಿವಾಸ್, ಪೊಲೀಸ್ ಸಿಬ್ಬಂದಿ ಸತೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.