ADVERTISEMENT

ಪಲ್ಲಕ್ಕಿ ಉತ್ಸವಕ್ಕೆ ಅಡ್ಡಿಯಾದ ಸಿಸಿ ರಸ್ತೆ ಕಾಮಗಾರಿ

ಒಳಮಠದ ರಸ್ತೆ ಕಾಮಗಾರಿ ಗುತ್ತಿಗೆದಾರರು ಮತ್ತು ಪ.ಪಂ. ಎಂಜಿನಿಯರ್‌ಗಳ ಮಧ್ಯೆ ಗೊಂದಲ

ವಿ.ಧನಂಜಯ
Published 4 ಜುಲೈ 2022, 4:14 IST
Last Updated 4 ಜುಲೈ 2022, 4:14 IST
ನಾಯಕನಹಟ್ಟಿ ಪಟ್ಟಣದ ಒಳಮಠ ದೇವಾಲಯದ ರಸ್ತೆಯನ್ನು ಸಿಸಿ ರಸ್ತೆ ನಿರ್ಮಾಣಕ್ಕಾಗಿ ಅಗೆಯಲಾಗಿದೆ.
ನಾಯಕನಹಟ್ಟಿ ಪಟ್ಟಣದ ಒಳಮಠ ದೇವಾಲಯದ ರಸ್ತೆಯನ್ನು ಸಿಸಿ ರಸ್ತೆ ನಿರ್ಮಾಣಕ್ಕಾಗಿ ಅಗೆಯಲಾಗಿದೆ.   

ನಾಯಕನಹಟ್ಟಿ: ಪಟ್ಟಣದ ಒಳಮಠದ ಬೀದಿಯಲ್ಲಿ 20 ದಿನಗಳ ಹಿಂದೆ ಸಿಸಿ ರಸ್ತೆ ಕಾಮಗಾರಿಗಾಗಿ ರಸ್ತೆ ಅಗೆದಿದ್ದು, ಪ್ರತಿ ಸೋಮವಾರ ನಡೆಯುವ ಪಲ್ಲಕ್ಕಿ ಉತ್ಸವಕ್ಕೆ ತೊಂದರೆಯಾಗುತ್ತಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವೆ ಸಮನ್ವಯತೆ ಕೊರತೆ ಕಾರಣ ಪರಿಹಾರ ಸಿಗುತ್ತಿಲ್ಲ.

ನಾಯಕನಹಟ್ಟಿ ಪಟ್ಟಣವು ಗುರುತಿಪ್ಪೇರುದ್ರಸ್ವಾಮಿ ಒಳಮಠ ಮತ್ತು ಹೊರಮಠ ದೇವಾಲಯಗಳಿಂದ ಧಾರ್ಮಿಕ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ನಿತ್ಯ ದೇವಾಲಯಕ್ಕೆ ನೂರಾರು ಭಕ್ತರು, ಪ್ರವಾಸಿಗರು, ಸಾಧುಸಂತರು ಭೇಟಿ ನೀಡುತ್ತಾರೆ. ಭಕ್ತರು ಪಟ್ಟಣದ ಒಳಮಠ ಮತ್ತು ಹೊರಮಠಕ್ಕೆ ಕಡ್ಡಾಯವಾಗಿ ಭೇಟಿ ನೀಡುವ ಸಂಪ್ರದಾಯವನ್ನು ಪಾಲಿಸುತ್ತಾರೆ. ಆದರೆ, ಒಳಮಠದಿಂದ ಹೊರಮಠಕ್ಕೆ ಸಾಗುವ ಮಾರ್ಗವು ದುಃಸ್ಥಿತಿಯಲ್ಲಿದೆ. ಸಿಸಿ ರಸ್ತೆ ನಿರ್ಮಾಣಕ್ಕಾಗಿ ರಸ್ತೆಯನ್ನು ಅಗೆಯಲಾಗಿದ್ದು, ರಸ್ತೆ ನಿರ್ಮಾಣಕ್ಕೆ ಹಲವು ಅಡ್ಡಿಗಳು ಎದುರಾಗಿವೆ. ರಸ್ತೆ ಅಗೆದಿರುವುದರಿಂದ ಪೈಪ್‍ಲೈನ್‍ಗಳಲ್ಲಿ ನೀರು ಸೋರಿಕೆಯಾಗುತ್ತಿದೆ. ಇದರಿಂದ ರಸ್ತೆಯ ತುಂಬೆಲ್ಲಾ ಕೆಸರಿನ ರಾಡಿ ನಿಲ್ಲುತ್ತಿದೆ. ಭಕ್ತರು ಕೆಸರಿನಲ್ಲಿಯೇ ಓಡಾಡುವ ಪರಿಸ್ಥಿತಿ ಎದುರಾಗಿದೆ. ಜತೆಗೆ ರಸ್ತೆಯ ತುಂಬೆಲ್ಲಾ ಉಬ್ಬು–ತಗ್ಗುಗಳಿದ್ದು, ಸುಗಮ ವಾಹನ ಚಾಲನೆಗೆ ಹರಸಾಹಸ ಪಡಬೇಕಿದೆ.

ಪಲ್ಲಕ್ಕಿ ಉತ್ಸವಕ್ಕೆ ಅಡ್ಡಿ: ಪಟ್ಟಣದಲ್ಲಿ ಹಲವು ದಶಕಗಳಿಂದ ಪ್ರತಿ ಸೋಮವಾರ ಗುರು ತಿಪ್ಪೇರುದ್ರಸ್ವಾಮಿ ಪಲ್ಲಕ್ಕಿ ಉತ್ಸವ ಜರುಗುತ್ತದೆ. ಪಟ್ಟಣದ ಒಳಮಠದಿಂದ ಹೊರಮಠದವರೆಗೂ ಅಲಂಕಾರಗೊಂಡ ಪಲ್ಲಕ್ಕಿಯಲ್ಲಿ ಮರೆವಣಿಗೆ ನಡೆಯುತ್ತದೆ. 15ರಿಂದ 20 ಊಳಿಗ ಸೇವೆಯ ಯುವಕರು ಪಲ್ಲಕ್ಕಿಯನ್ನು ಬರಿಗಾಲಿನಲ್ಲಿ ಹೊತ್ತು ಸಾಗುತ್ತಾರೆ. ರಸ್ತೆಯನ್ನು ಅಗೆದಿರುವುದರಿಂದ ಹಿಂಸೆಯಾಗುತ್ತಿದೆ ಎಂದು ತಿಪ್ಪೇಸ್ವಾಮಿ, ಗಿರೀಶ್, ಮಹಾಂತೇಶ, ಹೇಮಂತ್‍ಕುಮಾರ್, ಬೋರೇಶ್ ಅಳಲು ತೋಡಿಕೊಂಡಿದ್ದಾರೆ.

ADVERTISEMENT

ನೀರು ಸರಬರಾಜು ಮಾಡುವ ಪೈಪ್‍ಗಳು ದುರಸ್ತಿಯಲ್ಲಿದ್ದು, ರಸ್ತೆಯ ಎರಡೂ ಬದಿಯಲ್ಲಿ ಶಾಶ್ವತವಾಗಿ ಪೈಪ್‌ಲೈನ್‌ ಹಾಕಿಸಬೇಕು ಮತ್ತು ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಸಿಸಿ ರಸ್ತೆ ಕಾಮಗಾರಿ ಗುತ್ತಿಗೆದಾರರು ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ. ಆದರೆ ಗುತ್ತಿಗೆದಾರರು ಮತ್ತು ಅಧಿಕಾರಿಗಳು, ‘ಪೈಪ್‍ಲೈನ್ ಮಾಡಿಸುವ ಜವಬ್ದಾರಿ ನಮ್ಮದಲ್ಲ’ ಎಂದು ಆರೋಪ ಪ್ರತ್ಯಾರೋಪ ಮಾಡುತ್ತಿರುವ ಕಾರಣ 20 ದಿನಗಳಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳಾದ ಟಿ. ರುದ್ರಮುನಿ, ಗಿರೀಶ್ ದೂರಿದ್ದಾರೆ.

ಸಿಸಿ.ರಸ್ತೆ ಕಾಮಗಾರಿ ನನೆಗುದಿಗೆ ಬಿದ್ದಿರುವುದರಿಂದ ದೇವಾಲಯಕ್ಕೆ ಬರುವ ಭಕ್ತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಪಲ್ಲಕ್ಕಿ ಉತ್ಸವ ನಡೆಯುವ ಬೀದಿಯನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು.

ದಳವಾಯಿ ರುದ್ರಮುನಿ, ಗ್ರಾಮಸ್ಥರು

ಒಳಮಠದ ರಸ್ತೆಯಲ್ಲಿ ಒಟ್ಟು 2 ಕಿ.ಮೀ. ಪೈಪ್‍ಲೈನ್‍ ಕಾಮಗಾರಿ ಮಾಡಬೇಕಿದ್ದು, ಪಟ್ಟಣ ಪಂಚಾಯಿತಿ ಬಳಿ ಅಷ್ಟೊಂದು ಹಣ ಇಲ್ಲ. ಆದರೂ ನಗರೋತ್ಥಾನ ಯೋಜನೆ ಅಡಿ ಪೈಪ್‍ಲೈನ್‍ಗಾಗಿ ಟೆಂಡರ್ ಕರೆಯಲಾಗಿದೆ. ಸ್ಥಳ ಪರಿಶೀಲಿಸಿ ಕಾಮಗಾರಿಗೆ ಅನುವು ಮಾಡಿಕೊಡಲಾಗುವುದು.
ಲೋಕೇಶ್, ಪ್ರಬಾರ ಎಂಜಿನಿಯರ್, ಪಟ್ಟಣ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.