ADVERTISEMENT

ಪಾರಂಪರಿಕ ದುರ್ಗೋತ್ಸವಕ್ಕೆ ತಾತ್ಸಾರವೇಕೆ ?

2 ವರ್ಷಕ್ಕಷ್ಟೇ ಸೀಮಿತವಾದ ಸಾಂಪ್ರದಾಯಿಕ ಆಚರಣೆ, ಸರ್ಕಾರಿ ಆದೇಶಕ್ಕಾಗಿ ಸ್ಥಳೀಯರ ಒತ್ತಾಯ

ಎಂ.ಎನ್.ಯೋಗೇಶ್‌
Published 12 ಆಗಸ್ಟ್ 2024, 8:34 IST
Last Updated 12 ಆಗಸ್ಟ್ 2024, 8:34 IST

ಚಿತ್ರದುರ್ಗದ ಕೋಟೆಯಲ್ಲಿ ಪ್ರವಾಸಿಗರ ದಂಡು

ಚಿತ್ರದುರ್ಗದ ಕೋಟೆಯಲ್ಲಿ ಪ್ರವಾಸಿಗರ ದಂಡು

ಚಿತ್ರದುರ್ಗ: ಐತಿಕಾಸಿಕ ಹಿನ್ನೆಲೆಯುಳ್ಳ ಕೋಟೆ ನಗರಿಯಲ್ಲಿ ಮೈಸೂರು ದಸರಾ, ಹಂಪಿ ಉತ್ಸವ ಮಾದರಿಯಲ್ಲಿ ದುರ್ಗೋತ್ಸವ ನಡೆಯಬೇಕು ಎಂಬ ಸ್ಥಳೀಯರ ಬೇಡಿಕೆ ಇಲ್ಲಿಯವರೆಗೂ ಈಡೇರಿಲ್ಲ. ಸರ್ಕಾರ ರಾಜ್ಯ ಮಟ್ಟದ ಪಾರಂಪರಿಕ ಉತ್ಸವಕ್ಕೆ ಚಾಲನೆ ನೀಡಬೇಕು ಎಂಬುದು ಸ್ಥಳೀಯ ಕಲಾವಿದರು, ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ.

ADVERTISEMENT

ಏಳುಸುತ್ತಿನ ಕೋಟೆ, ಸ್ಮಾರಕ, ದೇವಾಲಯಗಳ ವಿಭಿನ್ನ ಪರಿಸರದಿಂದ ಚಿತ್ರದುರ್ಗ ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಇಲ್ಲಿಯ ಕೋಟೆ ನೋಡಲು ನಿತ್ಯ ಸಾವಿರಾರು ಜನ ಬರುತ್ತಾರೆ. ಶಾತವಾಹನರಿಂದ ಆರಂಭವಗೊಂಡು ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು, ವಿಜಯನಗರ ಅರಸರು, ನಾಯಕ ಅರಸರವರೆಗೂ ಈ ನೆಲ ಹಲವು ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟಿದೆ.

ಚಿತ್ರವಿಚಿತ್ರ ಕಲ್ಲುಗಳಿಂದ, ಹಸಿರು ಗುಡ್ಡಗಳ ಸೌಂದರ್ಯದಿಂದ ಇಂದಿಗೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಚಿತ್ರದುರ್ಗ ಕರ್ನಾಟಕದ ಸ್ವರ್ಗ ಎಂದೇ ಹೇಳುತ್ತಾರೆ. ಇಂತಹ ಐತಿಹಾಸಿಕ ನಾಡಿನಲ್ಲಿ ಸಾಂಸ್ಕೃತಿಕ ಉತ್ಸವ ನಡೆಯಬೇಕು ಎನ್ನುವುದು ಸ್ಥಳೀಯರ ಒತ್ತಾಯ. ಆದರೆ, ಇಲ್ಲಿಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಈಡೇರಿಲ್ಲ ಎಂದು ಆರೋಪಿಸುತ್ತಾರೆ.

ನಾಡಿನ ವಿವಿಧೆದಡೆ ಪ್ರತಿ ವರ್ಷ ಉತ್ಸವಗಳು ನಡೆಯುತ್ತಿವೆ. ಅದೇ ಮಾದರಿಯಲ್ಲಿ ಚಿತ್ರದುರ್ಗ ಉತ್ಸವ ನಡೆಯಬೇಕು. ಸ್ಥಳೀಯ, ರಾಜ್ಯ, ಹೊರರಾಜ್ಯಗಳ ಕಲಾವಿದರನ್ನು ಆಹ್ವಾನಿಸಿ ಸಾಂಸ್ಕೃತಿಕ ವಾತಾವರಣ ನಿರ್ಮಿಸಿದಲ್ಲಿ ಈ ಐತಿಹಾಸಿಕ ಸ್ಥಳಕ್ಕೆ ಮತ್ತಷ್ಟು ಮೆರುಗು ಬರುವುದರಲ್ಲಿ ಸಂಶಯವಿಲ್ಲ ಎಂದು ಉಪನ್ಯಾಸಕರಾದ ತಿಮ್ಮಣ್ಣ ಹೇಳಿದರು.

2 ಬಾರಿ ದುರ್ಗೋತ್ಸವ:

ಈ ಹಿಂದೆ 2 ಬಾರಿ ನಗರದ ಕೋಟೆ ಪ್ರವೇಶದ್ವಾರದಲ್ಲಿ 2006ರಲ್ಲಿ 3 ದಿನ, ನಂತರ  2015ರಲ್ಲೂ 3 ದಿನ ‘ದುರ್ಗೋತ್ಸವ’ ನಡೆದಿದೆ. ಸರ್ಕಾರ ಮನಸು ಮಾಡದ್ದರಿಂದ ಉತ್ಸವ ಪ್ರತಿ ವರ್ಷ ಉತ್ಸವ ನಡೆಯಲೆಂಬ ಕನಸು ನನಸಾಗುತ್ತಿಲ್ಲ.

‘ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ದುರ್ಗೋತ್ಸವ ಸಾಧ್ಯವಾಗಿಲ್ಲ. 2 ಬಾರಿ ನೆಪ ಮಾತ್ರಕ್ಕೆ ಆಚರಿಸಲಾಗಿದೆ. ಸರ್ಕಾರದಿಂದ ಆದೇಶ ಹೊರಬಿದ್ದರೆ ಉತ್ಸವವನ್ನು ಕಡ್ಡಾಯವಾಗಿ ಆಚರಿಸಬೇಕಾಗುತ್ತದೆ.ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ’ ಎಂದು ಸ್ಥಳೀಯ ಕಲಾವಿದರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಮತ್ತೆ ಆರಂಭಗೊಳ್ಳಲಿ:

ಕೇವಲ 2 ವರ್ಷಕ್ಕಷ್ಟೇ ಸೀಮಿತವಾಗಿ ನಿಂತುಹೋಗಿರುವ ದುರ್ಗೋತ್ಸವ ಮತ್ತೆ ಆರಂಭಗೊಳ್ಳಬೇಕು. ದುರ್ಗದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ರೀತಿಯಲ್ಲಿ ಉತ್ಸವ ನಡೆಯಬೇಕು ಎಂಬ ಕೂಗು ಜಿಲ್ಲೆಯಾದ್ಯಂತ ಮತ್ತೆ ಆರಂಭವಾಗಿದೆ. ಕಳೆದ ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆ ಸಂದರ್ಭ ವಿವಿಧ ಪಕ್ಷಗಳ ಮುಖಂಡರು  ದುರ್ಗೋತ್ಸವ ಆಚರಿಸಲಾಗುವುದು ಎಂದು ನೀಡಿದ್ದ ಭರವಸ ಸಾಕಾರಗೊಳಿಸಬೇಕಿದೆ ಎಂದು ಸ್ಥಳೀಯರು ಕೋರುತ್ತಾರೆ.

‘ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ಸಂದರ್ಭ ಒಮ್ಮೆ ದುರ್ಗೋತ್ಸವ ಆಚರಿಸಿದ್ದೆವು. ಪ್ರತಿ ವರ್ಷ ಆಚರಣೆ ಮಾಡುವ ಸಂಬಂಧ ಎಲ್ಲಾ ರೀತಿಯ ಯೋಜನೆ ರೂಪಿಸಿದ್ದೆವು. ಚುನಾವಣೆಗಳು ಬಂದ ನಂತರ ಪ್ರಯತ್ನಕ್ಕೆ ತಡೆಬಿದ್ದಿತ್ತು. ಈಗ ಮತ್ತೆ ಚಟುವಟಿಕೆ ಆರಂಭಿಸಿ ಡಿಸೆಂಬರ್‌ ತಿಂಗಳ ವೇಳೆಗೆ ದುರ್ಗೋತ್ಸವ ಆಚರಣೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಅವರಿಗೆ ತಿಳಿಸುತ್ತೇನೆ. ಉತ್ಸವ ಆಚರಣೆಗೆ ಕಾಂಗ್ರೆಸ್‌ ಸರ್ಕಾರ ಬದ್ಧವಾಗಿದೆ’ ಎಂದು ಕಾಂಗ್ರೆಸ್‌ ಮುಖಂಡ ಎಚ್‌.ಆಂಜನೇಯ ಹೇಳಿದರು.

ಉತ್ಸವದಿಂದ ಅಭಿವೃದ್ಧಿ ಸಾಧ್ಯ

ದುರ್ಗೋತ್ಸವ ಆಚರಣೆಯಿಂದ ಐತಿಹಾಸಿಕ ಹಿನ್ನೆಲೆ ಮೇಲೆ ಬೆಳಕು ಚೆಲ್ಲುವ ಜೊತೆಗೆ ಐತಿಹಾಸಿಕ ಸ್ಮಾರಕಗಳು ಅಭಿವೃದ್ಧಿ ಕಾಣುತ್ತವೆ, ಸ್ಮಾರಕಗಳು ಸ್ವಚ್ಛಗೊಳ್ಳುತ್ತವೆ, ರಸ್ತೆಗಳು ದುರಸ್ತಿಯಾಗುತ್ತವೆ. ಇದೇ ಕಾರಣಕ್ಕೆ ಉತ್ಸವ ಆಚರಣೆ ಬೇಕು ಎಂಬುದು ಸಂಘ– ಸಂಸ್ಥೆಗಳ ಒತ್ತಾಯ.

ಕಲ್ಲಿನ ಕೋಟೆ ವಿಶ್ವಪ್ರಸಿದ್ಧಿ ಪಡೆದಿದ್ದರೂ ನಗರದ ಮುಖ್ಯರಸ್ತೆಯಿಂದ ಕೋಟೆಗೆ ತೆರಳಲು ಸುಸಜ್ಜಿತವಾದ ರಸ್ತೆ ಇಲ್ಲ. ರಾಷ್ಟ್ರೀಯ ಹೆದ್ದಾರಿಯಿಂದ ನೇರವಾಗಿ ಕೋಟೆಗೆ ತೆರಳಲು ಪ್ರತ್ಯೇಕ ರಸ್ತೆ ಬೇಕು ಎಂಬ ಒತ್ತಾಯ ಹಲವು ವರ್ಷಗಳಿಂದಲೂ ಇದೆ. ಆದರೆ ಇಲ್ಲಿಯವರೆಗೂ ಆ ಬೇಡಿಕೆ ಈಡೇರಿಲ್ಲ.

‘ಬಿ.ಡಿ. ರಸ್ತೆಯಿಂದ ಕೋಟೆಗೆ ಹೊರಟರೆ ಹೇಗೆ ಹೋಗಬೇಕು ಎಂಬುದೇ ತಿಳಿಯುವುದಿಲ್ಲ. ಕಿರಿದಾದ ರಸ್ತೆಯಲ್ಲಿ ಮುಂದೆ ಸಾಗಬೇಕು. ರಸ್ತೆ ಪಕ್ಕದಲ್ಲೇ ಚರಂಡಿ ಉಕ್ಕುತ್ತಿದ್ದು ದುರ್ವಾಸನೆ ಬೀರುತ್ತದೆ. ಕೋಟೆಗೆ ತೆರಳುವ ಮಾರ್ಗವನ್ನಾದರೂ ಸ್ವಚ್ಛಗೊಳಿಸಿಲ್ಲ. ಜೊತೆಗೆ ಸೂಚನಾ ಫಲಕಗಳೂ ಇಲ್ಲ‘ ಎಂದು ಪ್ರವಾಸಿಗರೊಬ್ಬರು ಬೇಸರ ವ್ಯಕ್ತಪಡಿಸಿದರು.

ಅನುದಾನ ಬಿಡುಗಡೆ ಮನವಿ: ಡಿ.ಸಿ

‘ದುರ್ಗೋತ್ಸವ ಆಚರಿಸಬೇಕು ಎಂಬ ಒತ್ತಾಯ ಮೊದಲಿನಿಂದಲೂ ಇದೆ. ಈ ವರ್ಷ ಉತ್ಸವ ಆಚರಣೆಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಕೋರಿ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡರೆ ಇದೇ ವರ್ಷದಿಂದ ದುರ್ಗೋತ್ಸವ ಆಚರಿಸಲಾಗುವುದು. ಜೊತೆಗೆ ಪ್ರತಿ ವರ್ಷ ಆಚರಣೆ ಸಂಬಂಧ ಆದೇಶ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ತಿಳಿಸಿದರು.

ಇತಿಹಾಸಕ್ಕೆ ಗೌರವ ಕೊಡಿ

ಚಿತ್ರದುರ್ಗದ ಇತಿಹಾಸಕ್ಕೆ ಗೌರವ ಸಿಗಬೇಕಾದರೆ ಇಲ್ಲಿ ಪ್ರತಿ ವರ್ಷ ಉತ್ಸವ ನಡೆಯಬೇಕು. ಕೋಟೆ ಅಲಂಕಾರ, ವೈವಿಧ್ಯಮಯ ವೇದಿಕೆ, ನೃತ್ಯ– ಗಾಯನಗಳು ಹೊಸ ನೋಟವನ್ನು ಕಟ್ಟಿಕೊಡುತ್ತವೆ. ಇಲ್ಲಿನ ಇತಿಹಾಸದ ಹಿರಿಮೆ ಸಾರಲು ದುರ್ಗೋತ್ಸವ ಬೇಕು.

– ಎಂ.ಮೃತ್ಯುಂಜಯಪ್ಪ, ಸ್ಮಾರಕಗಳ ರಕ್ಷಣಾ ವೇದಿಕೆ ಕಾರ್ಯದರ್ಶಿ

ದೊಡ್ಡ ಮಟ್ಟದ ಆಚರಣೆಯಾಗಲಿ

ದುರ್ಗೋತ್ಸದಿಂದ ಸ್ಥಳೀಯರಿಗೆ ಐತಿಹಾಸಿಕ ಹಿನ್ನೆಲೆಯ ಬಗ್ಗೆ ಗೌರವ ಭಾವನೆ ಮೂಡುತ್ತದೆ. ಜೊತೆಗೆ ಪ್ರವಾಸಿಗರನ್ನು ಆಕರ್ಷಿಸಿದಂತಾಗುತ್ತದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಊರಿನಲ್ಲಿ ಉತ್ಸವ ನಡೆಯಬೇಕಾಗಿದೆ.

– ಮೋಕ್ಷಾ ರುದ್ರಸ್ವಾಮಿ, ಮಹಿಳಾ ಸಂಘದ ಮುಖ್ಯಸ್ಥೆ

ಮರೀಚಿಕೆಯಾದ ಉತ್ಸವ‌

ಸರ್ಕಾರದಿಂದ ನಾಡಿನೆಲ್ಲೆಡೆ ಹಲವು ಉತ್ಸವಗಳು ನಡೆಯುತ್ತಿವೆ. ಚಲನಚಿತ್ರ, ನಾಟಕ ಮುಂತಾದ ಕ್ಷೇತ್ರಗಳಲ್ಲಿ ಗುರುತಿಕೊಂಡ ಚಿತ್ರದುರ್ಗದಲ್ಲಿ ದುರ್ಗೋತ್ಸವ ಮರೀಚಿಕೆಯಾಗಿದೆ.

– ಕೆ.ಪಿ.ಎಂ. ಗಣೇಶಯ್ಯ, ರಂಗ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.