ADVERTISEMENT

ಅಷ್ಟದೇವತೆಗಳ ಸನ್ನಿಧಿಯಲ್ಲಿ ಸಂಭ್ರಮದ ಅಂಬಿನೋತ್ಸವ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 13:30 IST
Last Updated 19 ಅಕ್ಟೋಬರ್ 2018, 13:30 IST
ಹಿರಿಯೂರಿನಲ್ಲಿ ಶುಕ್ರವಾರ ರಾಜ್ಯರಸ್ತೆ ಸಾರಿಗೆ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಬನ್ನಿಮಂಟಪದ ಬಳಿ ನಡೆದ ಅಂಬಿನೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿರುವುದು.
ಹಿರಿಯೂರಿನಲ್ಲಿ ಶುಕ್ರವಾರ ರಾಜ್ಯರಸ್ತೆ ಸಾರಿಗೆ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಬನ್ನಿಮಂಟಪದ ಬಳಿ ನಡೆದ ಅಂಬಿನೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿರುವುದು.   

ಹಿರಿಯೂರು: ನಗರದ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಬನ್ನಿ ಮಂಟಪದ ಬಳಿ ಶುಕ್ರವಾರ ಸಂಜೆ ತಹಶೀಲ್ದಾರ್ ಜೆ.ಸಿ. ವೆಂಕಟೇಶಯ್ಯ ಅವರು ಅಷ್ಟ ದೇವತೆಗಳ ಸಮ್ಮುಖದಲ್ಲಿ ಸಾಂಪ್ರದಾಯಿಕ ವೇಷ ಧರಿಸಿ ಬಿಲ್ಲಿನ ಹೆದೆಗೆ ಬಾಣ ಹೂಡಿ ಹೊಡೆಯುವ ಮೂಲಕ ಅಂಬಿನೋತ್ಸವಕ್ಕೆ ಚಾಲನೆ ನೀಡಿದರು.

ಬನ್ನಿ ಮಂಟಪದ ಆವರಣಕ್ಕೆ ತೇರುಮಲ್ಲೇಶ್ವರ ಸ್ವಾಮಿ, ಮೈಲಾರಲಿಂಗೇಶ್ವರಸ್ವಾಮಿ, ರಾಜಾದುರ್ಗಾಪರಮೇಶ್ವರಿ, ರೇವಣಸಿದ್ದೇಶ್ವರಸ್ವಾಮಿ, ಬನಶಂಕರಿ ಅಮ್ಮ, ಹೊಸೂರಮ್ಮ, ಲಕ್ಷ್ಮೀನರಸಿಂಹಸ್ವಾಮಿ, ಪೌದಿಯಮ್ಮ ದೇವತೆಗಳನ್ನು ಭಕ್ತರು ಚರ್ಮ ವಾದ್ಯಗಳ ಮೆರವಣಿಗೆಯಲ್ಲಿ ಕರೆ ತರುತ್ತಿದ್ದಂತೆಯೇ, ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆಯಲ್ಲಿ ತಂದಿದ್ದ ಬಿಲ್ಲು ಬಾಣವನ್ನು ಕೈಲಿ ಹಿಡಿದ ತಹಶೀಲ್ದಾರರು ಅಂಬು ಹೊಡೆದರು.

ಉತ್ಸವ ಸಂಜೆ 4 ಗಂಟೆಗೆ ಎಂದು ಪ್ರಕಟಣೆ ಹೊರಡಿಸಿದ್ದರೂ ಉತ್ಸವಕ್ಕೆ ಬರಬೇಕಿದ್ದ ಎಲ್ಲ ದೇವರುಗಳು ಬರುವ ವೇಳೆಗೆ ಸಂಜೆ 6 ಗಂಟೆಯಾಗಿತ್ತು. ಶಾಸಕಿ ಪೂರ್ಣಿಮಾ ಶ್ರೀನಿವಾಸ್, ನಗರಸಭಾಧ್ಯಕ್ಷೆ ಮಂಜುಳಾ, ಬಿಜೆಪಿ ಮುಖಂಡ ಡಿ. ಟಿ.ಶ್ರೀನಿವಾಸ್, ಬನ್ನಿಮಂಟಪ ಸಮಿತಿ ಅಧ್ಯಕ್ಷ ರಾಜಪ್ಪ, ನಗರಸಭಾ ಸದಸ್ಯರಾದ ಟಿ. ಚಂದ್ರಶೇಖರ್, ಎ. ಮಂಜುನಾಥ್, ಶಿವಣ್ಣ, ಪ್ರೇಮ್ ಕುಮಾರ್, ವನಿತಾ, ತಿಪ್ಪಮ್ಮ, ಪುರುಷೋತ್ತಮ್, ದ್ಯಾಮಣ್ಣ ಅವರೂ ಪಾಲ್ಗೊಂಡಿದ್ದರು.

ADVERTISEMENT

ಬನ್ನಿ ಮರದ ಕೆಳಗೆ ಇರುವ ಆಂಜನೇಯಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸುತ್ತಿದ್ದಂತೆಯೇ, ಭಕ್ತರು ಮರದಿಂದ ‘ಬನ್ನಿ’ ಪತ್ರೆ ಕಿತ್ತು ಪರಸ್ಪರ ಹಂಚುವ ಮೂಲಕ ಸ್ನೇಹ-ಪ್ರೀತಿಯ ವಿನಿಮಯ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.